ಮಂಗಳವಾರ, ನವೆಂಬರ್ 24, 2020
26 °C
ವಿಮಾನ ನಿಲ್ದಾಣದಲ್ಲೇ ಅಧಿಕಾರಿಗಳ ಸಭೆ: ವಿಜಯಪುರ ಸಮೀಕ್ಷೆ ರದ್ದು

ಆಕಾಶದಲ್ಲೇ ಯಡಿಯೂರಪ್ಪ ಸಮೀಕ್ಷೆ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ/ವಿಜಯಪುರ: ಅತಿವೃಷ್ಟಿ ಹಾಗೂ ಪ್ರವಾಹದಿಂದ ತೊಂದರೆಗೆ ಸಿಲುಕಿರುವ ಪ್ರದೇಶಗಳಿಗೆ ಭೇಟಿ ನೀಡಿ ಜನರ ಕಷ್ಟ ಆಲಿಸದೇ ವೈಮಾನಿಕ ಸಮೀಕ್ಷೆ ಹಾಗೂ ವಿಮಾನ ನಿಲ್ದಾಣದಲ್ಲೇ ಅಧಿಕಾರಿಗಳ ಸಭೆ ನಡೆಸಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಕ್ರಮ ಟೀಕೆಗೆ ಕಾರಣವಾಗಿದೆ.

ಕಲಬುರ್ಗಿ, ಬೀದರ್‌ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಯಡಿಯೂರಪ್ಪ, ಪೂರ್ವನಿಗದಿಯಂತೆ ಕಲಬುರ್ಗಿ ವಿಮಾನ ನಿಲ್ದಾಣದಲ್ಲೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಭೆ ನಡೆಸಿದರು. ಬಳಿಕ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ಹಾಗೂ ಆಲಮಟ್ಟಿಯಲ್ಲಿ ಅಧಿಕಾರಿಗಳ ಸಭೆ ನಡೆಸುವುದು ನಿಗದಿಯಾಗಿತ್ತು. ಪ್ರತಿಕೂಲ ಹವಾಮಾನದಿಂದ ಇವುಗಳನ್ನು ರದ್ದುಪಡಿಸಿದ ಮುಖ್ಯಮಂತ್ರಿ ಬೆಂಗಳೂರಿಗೆ ವಾಪಸ್ಸಾದರು.  

ಪ್ರವಾಹ ಪೀಡಿತ ಯಾವ ಗ್ರಾಮಕ್ಕೂ ಭೇಟಿ ನೀಡಲಿಲ್ಲ. ಕಾಳಜಿ ಕೇಂದ್ರಗಳಿಗೆ ತೆರಳಿ ಸಂತ್ರಸ್ತರ ಅಳಲು ಆಲಿಸುವ ಕೆಲಸ ಮಾಡಲಿಲ್ಲ ಎಂಬ ಆಕ್ರೋಶವೂ ಇದರ ಬೆನ್ನಲ್ಲೇ ವ್ಯಕ್ತವಾಗಿದೆ.

ಕಲಬುರ್ಗಿಯಲ್ಲಿ ಅಧಿಕಾರಿಗಳ ಸಭೆ ನಂತರ ಮಾತನಾಡಿದ ಯಡಿಯೂರಪ್ಪ, ‘ವಿಧಾನ ಪರಿಷತ್‌ ಚುನಾವಣೆಯ ನೀತಿ ಸಂಹಿತೆ ಕಾರಣ ಹೆಚ್ಚೇನು ಮಾತನಾಡಲು ಆಗದು. ಹಾನಿಯ ಅಂದಾಜು ನಾಲ್ಕೈದು ದಿನಗಳಲ್ಲಿ ಗೊತ್ತಾಗಲಿದೆ. ನೆರೆಯಿಂದ ಸಂತ್ರಸ್ತರಾದವರಿಗೆ ಕಾಳಜಿ ಕೇಂದ್ರಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ಹಾಗೂ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದರು.

‘ನೆರೆ ಪೀಡಿತ ಜಿಲ್ಲೆಗಳಲ್ಲಿ 43 ಸಾವಿರ ಜನರು ಸಂತ್ರಸ್ತರಾಗಿದ್ದು, 247 ಗ್ರಾಮಗಳಿಗೆ ನೀರು ನುಗ್ಗಿದೆ. 117 ಗ್ರಾಮಗಳ ಭಾಗಶಃ ಸ್ಥಳಾಂತರದ ಅಗತ್ಯವಿದೆ. ಜಾಕ್‌ವೆಲ್‌ಗಳು ಮುಳುಗಿದ್ದರಿಂದ ಹಲವು ನಗರ–ಗ್ರಾಮಗಳಲ್ಲಿ ನೀರಿನ ಕೊರತೆಯುಂಟಾಗಿದ್ದು, ಟ್ಯಾಂಕರ್‌ ಮೂಲಕ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಹೇಳಿದರು.

ಅಧಿಕಾರಿಗಳಿಗೆ ತಾಕೀತು: ‘ಹಾನಿಯ ಸಮೀಕ್ಷೆ ಮತ್ತು ಪರಿಹಾರ ನೀಡುವ ವಿಷಯದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರವಹಿಸಬೇಕು’ ಎಂದು ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

‘ಪ್ರವಾಹ ಪರಿಸ್ಥಿತಿಯ ಅಧ್ಯಯನಕ್ಕೆ ಕೇಂದ್ರದ ತಂಡವನ್ನು ಕಳಿಸುವಂತೆ ಪ್ರಧಾನಿ  ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರನ್ನು ಕೋರಲಾಗುವುದು. ಅಗತ್ಯ ಬಿದ್ದರೆ ಭೇಟಿ ಮಾಡಿ ಬರುತ್ತೇನೆ’ ಎಂದೂ ಅವರು ಸಭೆಯಲ್ಲಿ ಹೇಳಿದರು ಎಂದು ಮೂಲಗಳು ತಿಳಿಸಿವೆ.

ವಿಜಯಪುರ ಜಿಲ್ಲೆಯಲ್ಲಿ ಭೀಮಾ ನದಿ ಪ್ರವಾಹದಿಂದ ಬಾಧಿತವಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ಆಲಮಟ್ಟಿಯಲ್ಲಿ ಅಧಿಕಾರಿಗಳೊಂದಿಗೆ ಯಡಿಯೂರಪ್ಪ ಸಭೆ ನಡೆಸಬೇಕಿತ್ತು. ಮುಖ್ಯಮಂತ್ರಿಗೆ ಮನವಿ ಕೊಡಲು ಶಾಸಕರು, ಮುಖಂಡರು ಕಾದು ಕುಳಿತಿದ್ದರು. ಸಭೆ ರದ್ದಾದ ಕಾರಣ ಅವರೆಲ್ಲ ನಿರಾಸೆಯಿಂದ ತೆರಳಿದರು.

‌ಮನೆ ಹಾನಿಗೆ ₹5 ಲಕ್ಷ ಪರಿಹಾರ

ಬೆಂಗಳೂರು: ಅಕ್ಟೋಬರ್‌ನಲ್ಲಿ ಸುರಿದ ಮಳೆ ಮತ್ತು ಪ್ರವಾಹದಿಂದ ಸಂತ್ರಸ್ತರಾದ ಕುಟುಂಬಗಳಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಿಸಿದ್ದು, ಸಂಪೂರ್ಣ ಮತ್ತು ಭಾಗಶಃ ಹಾನಿಗೊಳಗಾದ ಮನೆಗಳ ಪುನರ್‌ನಿರ್ಮಾಣಕ್ಕೆ ತಲಾ ₹ 5 ಲಕ್ಷ ನೀಡಲು ತೀರ್ಮಾನಿಸಿದೆ.

ಈ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸಮಸ್ಯಾತ್ಮಕ ಗ್ರಾಮಗಳಲ್ಲಿ ಬಟ್ಟೆ– ಬರೆ ಮತ್ತು ದಿನ ಬಳಕೆ ವಸ್ತುಗಳಿಗೆ ಕೇಂದ್ರ ಸರ್ಕಾರ ಎಸ್‌ಡಿಆರ್‌ಎಫ್‌ /ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಲ್ಲಿ ಪ್ರತಿ ಕುಟುಂಬಕ್ಕೆ ತಲಾ ₹3,800 ನಿಗದಿ ಮಾಡಿದೆ. ಅದಕ್ಕೆ ರಾಜ್ಯ ಸರ್ಕಾರದ ವತಿಯಿಂದ ₹6,200 ಸೇರಿಸಿ ಒಟ್ಟು ₹10,000 ಪರಿಹಾರ ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಹಾನಿಗೀಡಾದ ಮನೆಗಳಿಗೆ ಈ ಕೆಳಕಂಡಂತೆ ಪರಿಹಾರ ಪ್ರಕಟಿಸಲಾಗಿದೆ. ಇದನ್ನು ಹಣ ಬಳಸಿ ಮನೆಗಳನ್ನು ಪುನರ್‌ನಿರ್ಮಾಣ ಮಾಡಬೇಕು.

* ಶೇ75 ಕ್ಕಿಂತ ಹೆಚ್ಚು ಸಂಪೂರ್ಣ ಮನೆ ಹಾನಿ ಆಗಿದ್ದರೆ (’ಎ’ ವರ್ಗಕ್ಕೆ) ₹ 5 ಲಕ್ಷ

* ಶೇ 25 ರಿಂದ ಶೇ 75 ರಷ್ಟು ಭಾಗಶಃ ಹಾನಿ ಆಗಿದ್ದರೆ (ಬಿ ವರ್ಗ) (ಕೆಡವಿ ಹೊಸದಾಗಿ ನಿರ್ಮಿಸಲು) ₹5 ಲಕ್ಷ

* ಶೇ 25 ರಿಂದ ಶೇ 75 ರಷ್ಟು ಮನೆ ಹಾನಿ ಆಗಿದ್ದರೆ, ದುರಸ್ತಿಗಾಗಿ ₹ 3 ಲಕ್ಷ ಹಾಗೂ ಶೇ 15 ರಿಂದ ಶೇ 25 ರಷ್ಟು ಅಂದರೆ, ಅಲ್ಪಸ್ವಲ್ಪ ಹಾನಿ ಆಗಿದ್ದರೆ ಅದರ ದುರಸ್ತಿಗೆ ₹50 ಸಾವಿರ ನೀಡಲಾಗುವುದು.

‘ದೂರದಲ್ಲಿ ಸಭೆ ನಿಷ್ಪ್ರಯೋಜಕ’

‘ಮುಖ್ಯಮಂತ್ರಿ ಅವರು ಜನರನ್ನು ಭೇಟಿ ಮಾಡಿ ಮಾಹಿತಿ ಪಡೆಯುವ ಬದಲು ಎಲ್ಲೋ ದೂರದಲ್ಲಿ ಸಭೆ ಮಾಡಿದರೆ ಏನು ಉಪಯೋಗ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

‘ವೈಮಾನಿಕ ಸಮೀಕ್ಷೆ ಬದಲು ಜನರ ಬಳಿ ಹೋಗಿ ನೇರವಾಗಿ ಸಮಸ್ಯೆ ಆಲಿಸಬೇಕಾಗಿತ್ತು. ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಪ್ರದೇಶಗಳಿಗೆ ಯಾವ ಅಧಿಕಾರಿ ಹೋಗಿದ್ದಾರೆ, ಅವರೇನಾದರೂ ನಷ್ಟದ ಸರ್ವೆ ಮಾಡಿದ್ದಾರಾ? ಜನರ ಬಳಿ ಹೋಗಿ ಅವರ ಸಮಸ್ಯೆಗಳನ್ನು ದಾಖಲಿಸಿಕೊಂಡಿದ್ದರೇ? ಹೀಗಿರುವಾಗ ಮುಖ್ಯಮಂತ್ರಿಗಳು ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿರುವುದು ವ್ಯರ್ಥ’ ಎಂದು ಅವರು ಟೀಕಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು