ಭಾನುವಾರ, ಆಗಸ್ಟ್ 14, 2022
26 °C

ಮಠಾಧೀಶರು ರಾಜಕಾರಣಿಗಳ ಮುಖವಾಣಿಯಾಗಬಾರದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಜಕೀಯದಲ್ಲಿ ಸ್ವಾಮೀಜಿಗಳ ಹಸ್ತಕ್ಷೇಪ ಸರಿಯಲ್ಲ. ಸ್ವಾಮೀಜಿಗಳಿಗೆ ಸಮಾಜ, ನಾಡಿನ ಬಗ್ಗೆ ಕಳಕಳಿ ಇರಬೇಕು. ರಾಜಕೀಯ ವ್ಯಕ್ತಿಗಳ ಮುಖವಾಣಿಯಂತೆ ಸ್ವಾಮೀಜಿಗಳು ಮಾತನಾಡಬಾರದು. ಸ್ವಾಮೀಜಿಗಳು ಗಾಳಿ, ಬೆಳಕು, ನೀರಿನಂತೆ ಎಲ್ಲರಿಗಾಗಿ ಇರಬೇಕು.

***

ಒತ್ತಡ, ಬೆದರಿಕೆಯ ತಂತ್ರ ಸರಿಯಲ್ಲ

ಧರ್ಮ, ಸಂಸ್ಕೃತಿ, ಯೋಗದ ಪ್ರಚಾರಕರಾಗಿ ಮಠಗಳು, ಸ್ವಾಮೀಜಿಗಳಿದ್ದಾರೆಯೇ ಹೊರತು ರಾಜಕೀಯ ಪ್ರಚಾರಕರಾಗಿ ಅಲ್ಲ. ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯ ಸ್ವಾಮೀಜಿಗಳಿಗಿಲ್ಲ.

ಚುನಾವಣೆಯಲ್ಲಿ ನಾವೂ ಮತ ಚಲಾಯಿಸಿರುವುದರಿಂದ, ಒಂದು ಸಮುದಾಯವನ್ನು ಪ್ರತಿನಿಧಿಸುವುದರಿಂದ ನಮಗೂ ರಾಜಕಾರಣದ ಸಂಬಂಧ ಇದ್ದೇ ಇರುತ್ತದೆ. ಆದರೆ, ಅದು ಎಷ್ಟಿರಬೇಕು ಎನ್ನುವ ಮಿತಿ ಇಲ್ಲಿ ಬಹಳ ಮುಖ್ಯವಾಗುತ್ತಿದೆ. ಆಡಳಿತ ನಡೆಸುವವರು ಸಲಹೆ ಕೇಳಿ ಮಠಗಳಿಗೆ ಬಂದಾಗ ಸಮಾಜವನ್ನು ಸರಿಯಾದ ದಿಕ್ಕಿನಲ್ಲಿ ನಡೆಸುವ ಬಗ್ಗೆ ಮಾರ್ಗದರ್ಶನ ಮಾಡಬಹುದು. ಆದರೆ, ಒತ್ತಡ ತಂತ್ರ, ಬೆದರಿಕೆಯ ಮಾತುಗಳನ್ನಾಡುವುದು ಸರಿಯಲ್ಲ.

– ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಮೂರುಸಾವಿರ ಮಠ, ಹುಬ್ಬಳ್ಳಿ

***

ರಾಜಕೀಯದಲ್ಲಿ ಧರ್ಮ ಇರಬೇಕು

ಜನಕಲ್ಯಾಣದ ಉದ್ದೇಶದಿಂದ ಧರ್ಮಗುರು, ಮಠಾಧೀಶರು ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುವುದು ತಪ್ಪಲ್ಲ. ಆದರೆ, ಸ್ವಾರ್ಥ ಸಾಧನೆಗಾಗಿ ರಾಜಕಾರಣದಲ್ಲಿ ಮೂಗು ತೂರಿಸುವುದು ಒಪ್ಪಿತ ವಿಷಯವಲ್ಲ. ರಾಜಪ್ರಭುತ್ವದಲ್ಲಿ ಧರ್ಮಗುರುಗಳು ಆಳರಸರಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಸರಿ–ತಪ್ಪು ಹೇಳುತ್ತಿದ್ದರು. ಧರ್ಮದಲ್ಲಿ ರಾಜಕೀಯ ಇರಬಾರದು, ಆದರೆ, ರಾಜಕೀಯದಲ್ಲಿ ಧರ್ಮ ಇರಬೇಕು ಎಂಬುದು ಸದಾಕಾಲಕ್ಕೂ ಅನ್ವಯವಾಗುವ ತತ್ವ. ಈ ಹಿನ್ನೆಲೆಯಲ್ಲಿ ಆಡಳಿತಗಾರರಿಗೆ ಮಾರ್ಗದರ್ಶನ ಮಾಡಿದರೆ, ಒಳ್ಳೆಯದನ್ನು ಮೆಚ್ಚಿ ಬೆಂಬಲಿಸಿದರೆ ಅದು ಆಕ್ಷೇಪಾರ್ಹವಲ್ಲ.

–ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಪೀಠಾಧ್ಯಕ್ಷರು, ಬೇಬಿ ಮಠ ಪಾಂಡವಪುರ ಮತ್ತು ಚಂದ್ರವನ ಆಶ್ರಮ ಶ್ರೀರಂಗಪಟ್ಟಣ

***

ಗಾಳಿ,ಬೆಳಕು,ನೀರಿನಂತೆ ಎಲ್ಲರಿಗಾಗಿ ಇರಬೇಕು

ರಾಜಕೀಯದಲ್ಲಿ ಸ್ವಾಮೀಜಿಗಳ ಹಸ್ತಕ್ಷೇಪ ಸರಿಯಲ್ಲ. ಸ್ವಾಮೀಜಿಗಳಿಗೆ ಸಮಾಜ, ನಾಡಿನ ಬಗ್ಗೆ ಕಳಕಳಿ ಇರಬೇಕು. ರಾಜಕೀಯ ವ್ಯಕ್ತಿಗಳ ಮುಖವಾಣಿಯಂತೆ ಸ್ವಾಮೀಜಿಗಳು ಮಾತನಾಡಬಾರದು. ಸ್ವಾಮೀಜಿಗಳು ಗಾಳಿ, ಬೆಳಕು, ನೀರಿನಂತೆ ಎಲ್ಲರಿಗಾಗಿ ಇರಬೇಕು.

ಕರ್ನಾಟಕದ ಮಠಗಳಿಗೆ ತನ್ನದೇ ಆದ ವಿಶೇಷ ಗೌರವವಿದೆ. ಸ್ವಾಮೀಜಿಗಳಿಗೆ ಮಾಡಲು ಹಲವು ಕೆಲಸಗಳಿವೆ. ಅವರು ದಾಸೋಹ, ಪುಸ್ತಕ ಸಂಸ್ಕೃತಿ ಬೆಳೆಸಲಿ. ಸಮಾಜದ ಹಾಗೂ ನಾಡಿನ ಅಭಿವೃದ್ಧಿಯ ಬಗ್ಗೆ ಸಲಹೆ ಸೂಚನೆ ನೀಡಲಿ. ಸ್ವಾಮೀಜಿಗಳು ತಮ್ಮ ಹಾಗೂ ಮಠಮಾನ್ಯಗಳ ಘನತೆ, ಗೌರವವವನ್ನು ಕಾಪಾಡಬೇಕು. ಗಾಂಭೀರ್ಯದಿಂದ ವರ್ತಿಸಬೇಕು.

-ಪ್ರಭು ಸ್ವಾಮೀಜಿ, ಪ್ರಭುದೇವರ ಸಂಸ್ಥಾನ ವಿರಕ್ತಮಠ, ಸಂಡೂರು, ಬಳ್ಳಾರಿ

***

 

‘ಖಾವಿ ತೊಟ್ಟವರು ರಾಜಕಾರಣದಿಂದ ದೂರ ಇರಲಿ’

ಕೆಲವು ಮಠದ ಸ್ವಾಮೀಜಿಗಳು ರಾಜಕೀಯದಲ್ಲಿ ತಲೆ ಹಾಕುತ್ತಿರುವುದಕ್ಕೆ ನನ್ನ ಸಂಪೂರ್ಣ ವಿರೋಧ ಇದೆ. ರಾಜಕಾರಣ ಮಾಡುವುದಕ್ಕೆ ರಾಜಕಾರಣಿಗಳು ಇದ್ದಾರೆ. ಮಠಾಧೀಶರಾದವರು ಸಮಾಜದ ಒಳಿತು ಬಯಸಬೇಕು. ಅದರ ಬದಲಾಗಿ ಒಂದು ಜಾತಿಯ ಹೆಸರಿನಲ್ಲಿ ಬೇಡಿಕೆ ಇಡುವುದು, ಅದನ್ನು ಈಡೇರಿಸದೇ ಹೋದಲ್ಲಿ ದಿಗ್ಬಂಧನ ಹಾಕುತ್ತೇವೆ ಎಂದು ಬೆದರಿಕೆ ಒಡ್ಡುವುದು ಸರಿಯಲ್ಲ.

ಇದು ಸಮಾಜದ ಹಿತದೃಷ್ಟಿಯಿಂದ ಆರೋಗ್ಯಕರ ನಡೆಯಲ್ಲ. ಅವರು ತಮ್ಮ ಘನತೆ, ಗಾಂಭೀರ್ಯ ಅರಿತು ತಮ್ಮೆಲ್ಲ ಬುದ್ಧಿಶಕ್ತಿಯನ್ನು ಹಿತವಚನಗಳ ಮೂಲಕ ಸಮಾಜದ ಒಳಿತಿಗೆ ವಿನಿಯೋಗಿಸಬೇಕು. 

-ಸಿ.ಎಂ. ಲಿಂಗಪ್ಪ, ವಿಧಾನ ಪರಿಷತ್‌ ಸದಸ್ಯ

***

‘ಮಠಾಧೀಶರ ಮಾರ್ಗದರ್ಶನ ಅಗತ್ಯ’

ಅವಕಾಶ ವಂಚಿತ ಸಮುದಾಯಕ್ಕೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಮಠಾಧೀಶರು ಸರ್ಕಾರದ ಗಮನ ಸೆಳೆಯುವುದು ತಪ್ಪಲ್ಲ. ರೈತರು, ಕಾರ್ಮಿಕರು ಸೇರಿದಂತೆ ಸಂಕಷ್ಟಕ್ಕೆ ಸಿಲುಕಿದ ಸಮುದಾಯಗಳ ನೆರವಿಗೆ ಸಲಹೆ ನೀಡುವ ಸ್ವಾತಂತ್ರ್ಯವನ್ನು ಮಠಾಧೀಶರು ಹೊಂದಿದ್ದಾರೆ.

ಇಡೀ ಸಮಾಜವೇ ಗೌರವಿಸುವ, ಪೂಜಿಸುವ ಸ್ವಾಮೀಜಿಗಳು ನಮ್ಮ ನಡುವೆ ಇದ್ದಾರೆ. ದೇವರಂತೆ ಆರಾಧಿಸುವ ಭಕ್ತರು ಮಠಾಧೀಶರ ಆಶೀರ್ವಚನದಲ್ಲಿ ಸುಖ ಕಾಣುತ್ತಾರೆ. ದುರ್ಜನರನ್ನು ಸಜ್ಜನರನ್ನಾಗಿ ರೂಪಿಸುವ ಹೊಣೆಯೂ ಮಠಾಧೀಶರ ಮೇಲಿದೆ. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮಠಾಧೀಶರ ಮಾರ್ಗದರ್ಶನದ ಅಗತ್ಯವಿದೆ. ರಾಜಕಾರಣಿಗಳು ಅಸಭ್ಯವಾಗಿ ವರ್ತಿಸಿದಾಗ ತಿದ್ದಿ ಬುದ್ಧಿ ಹೇಳಿ ಸನ್ಮಾರ್ಗದಲ್ಲಿ ನಡೆಯುವ ದಾರಿ ತೋರಬೇಕು.

-ಎಚ್‌.ಆಂಜನೇಯ, ಮಾಜಿ ಸಚಿವ, ಚಿತ್ರದುರ್ಗ

***

‘ಸಮಾಜಘಾತುಕ ಸಲಹೆ ಕೊಡಬಾರದು’

ಪ್ರಜೆಗಳ ಹಿತಕ್ಕಾಗಿ ಧರ್ಮಗುರುಗಳು ರಾಕಾರಣಿಗಳಿಗೆ ರಾಜಧರ್ಮ ಹೇಳಿಕೊಡುವುದರಲ್ಲಿ ತಪ್ಪಿಲ್ಲ. ಪ್ರಜಾಪ್ರಭುತ್ವದ ಯುಗದಲ್ಲಿ ಪ್ರಜೆಗಳಿಗೆ ಅನುಕೂಲವಾಗುವಂತ ಪ್ರಜಾಧರ್ಮ ಹೇಳುವುದರಲ್ಲೂ ತಪ್ಪಿಲ್ಲ. ಜನರಿಗೆ ಒಳ್ಳೆಯದಾಗುವ ಯಾವುದೇ ಸಲಹೆ ಕೊಟ್ಟರೂ ಅದು ಯೋಗ್ಯವೇ.

ಆದರೆ ಧರ್ಮಗುರುಗಳು ಸಮಾಜವನ್ನು ಒಡೆಯುವ, ಘಾತುಕ ಸಲಹೆ ಕೊಡಬಾರದು. ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಸಲಹೆ ಕೊಡಬಾರದು. ಇಂಥವರನ್ನೇ ಮಂತ್ರಿ ಮಾಡಿ, ಇಂಥವರಿಗೆ ಅಧಿಕಾರ ಕೊಡಿ ಎಂಬುದು ಯಾರೂ ಒಪ್ಪುವಂಥದ್ದಲ್ಲ. ಯಾರನ್ನು ಮಂತ್ರಿ ಮಾಡಬೇಕು, ಯಾರಿಗೆ ಅಧಿಕಾರ ನೀಡಬೇಕು ಎಂಬುದು ಮುಖ್ಯಮಂತ್ರಿಗೆ ಬಿಟ್ಟ ವಿಚಾರ.

-ಎ.ಎಸ್‌.ಪಾಟೀಲ ನಡಹಳ್ಳಿ, ಅಧ್ಯಕ್ಷ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಹಾಗೂ ಶಾಸಕ ಮುದ್ದೇಬಿಹಾಳ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು