ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಖಚಿತ ಪಡಿಸಿಕೊಳ್ಳಲು ಆಣೆ, ಪ್ರಮಾಣ

ಡ್ರೈ ಫ್ರೂಟ್ಸ್ ಜತೆ ಪಂಚೆ, ರೇಷ್ಮೆ ಸೀರೆ ಉಡುಗೊರೆ l ಧರ್ಮಸ್ಥಳ ಪ್ರಸಾದ, ತಿರುಪತಿ ಲಡ್ಡು ಕಾಣಿಕೆ
Last Updated 7 ಡಿಸೆಂಬರ್ 2021, 20:01 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಗ್ರಾಮಾಂತರ– ರಾಮನಗರ, ಕೋಲಾರ–ಚಿಕ್ಕಬಳ್ಳಾಪುರ ಮತ್ತು ತುಮಕೂರು ವಿಧಾನ ಪರಿಷತ್‌ ಕ್ಷೇತ್ರಗಳಲ್ಲಿ ಮತದಾರರ ಓಲೈಕೆ ಭರ್ಜರಿಯಾಗಿ ನಡೆಯುತ್ತಿದೆ.

ಎಲ್ಲಾ ಪಕ್ಷಗಳು ಜಿದ್ದಿಗೆ ಬಿದ್ದಂತೆ ಮತದಾರರ ಮನೆಗೆಮುಂಗಡವಾಗಿ ಹಣ, ಉಡುಗೊರೆ ತಲುಪಿಸುತ್ತಿವೆ. ಹಣ ಪಡೆದು ಕೈಕೊಡಬಾರದು ಎನ್ನುವ ಕಾರಣದಿಂದ ದೇವಸ್ಥಾನಗಳಲ್ಲಿ ಆಣೆ ಪ್ರಮಾಣ ಮಾಡಿಸುತ್ತಿದ್ದಾರೆ. ಮತ ಖಚಿತಪಡಿಸಿಕೊಳ್ಳಲು ದೇವರ ಫೋಟೊ ಸಮೇತ ಮತದಾರರ ಮನೆಗೆ ಹೋಗುತ್ತಿದ್ದಾರೆ. ಮತದಾರರಿಗೆ ಆಮಿಷ ಒಡ್ಡುವಲ್ಲಿ ಯಾವ ರಾಜಕೀಯ ಪಕ್ಷಗಳೂ ಹಿಂದೆ ಬಿದ್ದಿಲ್ಲ.

ತಟಸ್ಥ ಅಥವಾ ಯಾವುದೇ ಪಕ್ಷದ ಜತೆ ಗುರುತಿಸಿಕೊಳ್ಳದ ಪಂಚಾಯಿತಿ ಸದಸ್ಯರಿಗೆ ಭಾರಿ ಬೇಡಿಕೆ ಕುದುರಿದೆ. ಈ ಸದಸ್ಯರು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎನ್ನದೆ ಮೂರು ಪಕ್ಷಗಳ ನಾಯಕ ಜತೆ ಸಂಪರ್ಕದಲ್ಲಿದ್ದಾರೆ. ಮೂರು ಕಡೆಯಿಂದ ಉಡುಗೊರೆ ಪಡೆಯುತ್ತಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ಪ್ರಮುಖ ಮೂರೂ ಪಕ್ಷಗಳು ಹಣದ ಹೊಳೆ ಹರಿಸುತ್ತಿವೆ. ಪರಸ್ಪರ ಪೈಪೋಟಿಗೆ ಇಳಿದವರಂತೆ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಹಣ ಹಂಚುತ್ತಿದ್ದಾರೆ. ಪ್ರತಿ ಮತದಾರನಿಗೆ ಮುಂಗಡವಾಗಿ ₹ 50 ಸಾವಿರ ಕೊಡಲಾಗುತ್ತಿದೆ. ಇನ್ನುಳಿದ ₹ 50 ಸಾವಿರವನ್ನು ಮತದಾನದ ದಿನ ಕೊಡುವುದಾಗಿ ಭರವಸೆ ನೀಡಲಾಗುತ್ತಿದೆ.

ಆಣೆ, ಪ್ರಮಾಣಕ್ಕೆ ನಂದಿನಿ ಹಾಲಿನ ಪ್ಯಾಕೆಟ್‌!: ಹಣದ ಜತೆ ಮತದಾರರಿಗೆ ತಿರುಪತಿ ಲಡ್ಡು, ಧರ್ಮಸ್ಥಳ ಮಂಜುನಾಥಸ್ವಾಮಿ ಪ್ರಸಾದ ಕೊಟ್ಟು ತಮಗೆ ಮತ ಹಾಕುವಂತೆ ಆಣೆ ಮಾಡಿಸಿಕೊಳ್ಳಲಾಗುತ್ತಿದೆ. ನಂದಿನಿ ಹಾಲಿನ ಪ್ಯಾಕೆಟ್‌ ಮತ್ತು ಶನಿಮಹಾತ್ಮ ದೇವರ ಫೋಟೊ ಮೇಲೆ ಪ್ರಮಾಣ ಮಾಡಿಸಿಕೊಳ್ಳಲಾಗುತ್ತಿದೆ. ಮಹಿಳಾ ಮತದಾರರಿಗೆ ಹಣದ ಜತೆಗೆ ರೇಷ್ಮೆ ಸೀರೆ ಮತ್ತು ಪುರುಷ ಮತದಾರರಿಗೆ ರೇಷ್ಮೆ ಪಂಚೆ ಉಡುಗೊರೆಯಾಗಿ ಕೊಡಲಾಗುತ್ತಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆರಂಭದಲ್ಲಿಯೇ ಒಂದು ಮತಕ್ಕೆ ₹50 ಸಾವಿರ ನೀಡಲಾಗುತ್ತದೆ ಎನ್ನುವ ಸುದ್ದಿ ಹರಡಿತ್ತು. ಆದರೆ ಈಗ ಚಿಕ್ಕಬಳ್ಳಾಪುರ, ಚಿಂತಾಮಣಿ ಹಾಗೂ ಗೌರಿಬಿದನೂರು ತಾಲ್ಲೂಕು ವ್ಯಾಪ್ತಿಯ ಕೆಲವು ಮತದಾರರಿಗೆ ₹75 ಸಾವಿರ ತಲುಪಿದೆ ಎನ್ನುವ ಸುದ್ದಿ ಜೋರಾಗಿದೆ.

ಪ್ರಮುಖವಾಗಿ ರೆಸಾರ್ಟ್‌ಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಸಭೆಗಳು ನಡೆಯುತ್ತಿವೆ. ಇಲ್ಲಿಯೇ ವ್ಯವಹಾರಗಳು ಕುದುರುತ್ತಿವೆ. ನಂತರ ಮತದಾರರನ್ನು ದೇಗುಲಗಳಿಗೆ ಕರೆದುಕೊಂಡು ಹೋಗಿಆಣೆ, ಪ್ರಮಾಣ ಮಾಡಿಸಲಾಗುತ್ತಿದೆ. ತಿರುಪತಿ ಲಡ್ಡು ಸಹ ಪ್ರಸಾದ ರೂಪದಲ್ಲಿ ನೀಡಲಾಗುತ್ತಿದೆ.

ಡ್ರೈ ಫ್ರೂಟ್ಸ್ ಪ್ಯಾಕ್‌: ರಾಮನಗರ ಜಿಲ್ಲೆಯಲ್ಲಿ ಪ್ರತಿ ಸದಸ್ಯರಿಗೆ ಕನಿಷ್ಠ ₹25 ಸಾವಿರ ಹಣದೊಂದಿಗೆ ಉಡುಗೊರೆ ನೀಡಲು ಸಿದ್ಧತೆ ನಡೆದಿದೆ. ಕೆಲವು ಕಡೆಗಳಲ್ಲಿ ಮತವೊಂದಕ್ಕೆ ₹50 ಸಾವಿರ ನೀಡಲಾಗುತ್ತಿದೆ. ಹಣವನ್ನು ಡ್ರೈ ಫ್ರೂಟ್ಸ್ ಸಮೇತ ಪ್ಯಾಕಿಂಗ್ ಮಾಡಿ ಉಡುಗೊರೆ ನೀಡಲಾಗುತ್ತದೆ ಎಂದು ಪಕ್ಷವೊಂದರ ಮುಖಂಡರು ಹೇಳುತ್ತಾರೆ.

ತುಮಕೂರು ಜಿಲ್ಲೆಯಲ್ಲಿ ಮೂರು ಪಕ್ಷದವರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಯಾರು ಎಷ್ಟು ಹಣ ಹಂಚುತ್ತಾರೆ ಎಂಬುದನ್ನು ನೋಡಿಕೊಂಡು ಎಷ್ಟು ಕೊಡಬೇಕು ಎಂಬ ತೀರ್ಮಾನಕ್ಕೆ ಬರಲಿದ್ದಾರೆ. ಬುಧವಾರದಿಂದ ಹಣ ಹಂಚಿಕೆ ಆರಂಭವಾಗಬಹುದು.

ಸದ್ಯ ₹10 ಸಾವಿರದಿಂದ ₹25 ಸಾವಿರದವರೆಗೂ ಹಂಚಿಕೆಯಾಗಬಹುದು ಎಂದು ಹೇಳಲಾಗುತ್ತಿದೆ. ಕೊನೆಯ ಕ್ಷಣದಲ್ಲಿ ₹50 ಸಾವಿರದವರೆಗೂ ಏರಿಕೆಯಾಗಬಹುದು ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT