ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಡೋಸ್‌ ಲಸಿಕೆ ಕಡ್ಡಾಯ: ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ

Last Updated 30 ನವೆಂಬರ್ 2021, 17:08 IST
ಅಕ್ಷರ ಗಾತ್ರ

ಬೆಂಗಳೂರು: ಎಲ್ಲರೂ ಎರಡು ಡೋಸ್‌ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಬೇಕು. ಎರಡು ಡೋಸ್‌ ಪಡೆಯದವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರ ಉಚಿತ ಚಿಕಿತ್ಸೆ ನೀಡಬಾರದು ಎಂಬ ಸಲಹೆಯನ್ನು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ನೀಡಿದೆ.

ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ನೇತೃತ್ವದಲ್ಲಿ ಮಂಗಳವಾರ ನಡೆದ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಮತ್ತು ತಜ್ಞರ ಸಮಿತಿ ಸಭೆಯಲ್ಲಿ ಈ ಸಲಹೆ ನೀಡಲಾಗಿದೆ.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ‘ಎರಡು ಡೋಸ್‌ ಲಸಿಕೆ ಪಡೆದವರಿಗಷ್ಟೇ ಉಚಿತ ಚಿಕಿತ್ಸೆ ನೀಡಬೇಕು ಎಂಬ ಸಲಹೆಯನ್ನು ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ನೀಡಿದ್ದಾರೆ. ಎರಡು ಡೋಸ್‌ ಲಸಿಕೆ ಪಡೆಯದವರಿಗೆ ಮಾಲ್‌, ಚಿತ್ರಮಂದಿರಗಳಿಗೂ ಪ್ರವೇಶ ನೀಡಬಾರದು ಎಂಬ ಸಲಹೆಗಳೂ ಬಂದಿವೆ. ಆದರೆ, ಈ ಕುರಿತು ಚರ್ಚೆಯ ಅಗತ್ಯವಿದೆ’ ಎಂದರು.

ಮಾರ್ಗಸೂಚಿಗೆ ಸಮಿತಿ: ಕೋವಿಡ್‌ ರೋಗಿಗಳಿಗೆ ಏಕರೂಪದ ಚಿಕಿತ್ಸೆ ನೀಡುವ ಮಾರ್ಗಸೂಚಿ ರೂಪಿಸುವುದಕ್ಕಾಗಿ ಬೆಂಗಳೂರು ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ರವಿ ನೇತೃತ್ವದಲ್ಲಿ ಹತ್ತು ಸದಸ್ಯರ ಸಮಿತಿ ರಚಿಸಲಾಗುವುದು. ಸಮಿತಿಯು ಅಧ್ಯಯನ ನಡೆಸಿ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಿದೆ. ಆ ಪ್ರಕಾರವೇ ಏಕರೂಪದಲ್ಲಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವರದಿ ಆಧರಿಸಿ ನಿರ್ಧಾರ: ಸಭೆಗೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ‘ಓಮೈಕ್ರಾನ್‌ ತಳಿಯ ವೈರಾಣುವಿನ ಹರಡುವಿಕೆ ಮತ್ತು ಅದರಿಂದ ಆರೋಗ್ಯದ ಮೇಲೆ ಆಗುವ ಹಾನಿ ಕುರಿತು ಈವರೆಗೂ ಅಧ್ಯಯನ ವರದಿ ಪ್ರಕಟವಾಗಿಲ್ಲ. ಡಿಸೆಂಬರ್‌ 1ರ ವೇಳೆಗೆ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲುಎಚ್‌ಓ) ಅಧ್ಯಯನ ವರದಿ ಪ್ರಕಟವಾಗುವ ನಿರೀಕ್ಷೆ ಇದೆ. ಆ ಬಳಿಕವೇ ಹೊಸ ಕ್ರಮಗಳ ಕುರಿತು ಯೋಚಿಸಲಾಗುವುದು’ ಎಂದರು.

ಶಾಲಾ, ಕಾಲೇಜುಗಳು, ಸಾರ್ವಜನಿಕ ಕಾರ್ಯಕ್ರಮಗಳು ಸೇರಿದಂತೆ ಯಾವುದೇ ಚಟುವಟಿಕೆಯನ್ನು ನಿರ್ಬಂಧಿಸುವ ಪ್ರಸ್ತಾವ ಸದ್ಯಕ್ಕೆ ಇಲ್ಲ. ಕ್ರಿಸ್‌ಮಸ್‌, ಹೊಸ ವರ್ಷಾಚರಣೆ, ವಿಧಾನಮಂಡಲದ ಬೆಳಗಾವಿ ಅಧಿವೇಶನ ನಡೆಸುವ ವಿಷಯದಲ್ಲಿ ಬದಲಾವಣೆ ಕುರಿತಂತೆ ಡಬ್ಲ್ಯುಎಚ್‌ಓ ವರದಿ ಆಧಾರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

‘ಎನ್‌ಸಿಬಿಎಸ್‌ಗೆ ಮಾದರಿ ರವಾನೆ’

‘ರಾಜ್ಯದಲ್ಲಿ ಕೆಲವೆಡೆ ಗುಂಪು ಗುಂಪಾಗಿ ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. ಅಲ್ಲಿನ ಸೋಂಕಿತರ ಗಂಟಲು ಮತ್ತು ಮೂಗಿನ ದ್ರವದ ಮಾದರಿಗಳನ್ನು ಹೆಚ್ಚಿನ ಅಧ್ಯಯನಕ್ಕಾಗಿ ರಾಷ್ಟ್ರೀಯ ಜೀವವಿಜ್ಞಾನಗಳ ಸಂಸ್ಥೆಗೆ (ಎನ್‌ಸಿಬಿಎಸ್‌) ರವಾನಿಸಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ‘ಓಮೈಕ್ರಾನ್‌ ತಳಿಯ ವೈರಾಣು ಕುರಿತು ನಿಗಾ ವಹಿಸಲಾಗಿದೆ. ಡೆಲ್ಟಾ ತಳಿಯ ವೈರಾಣುವಿನಿಂದ ಕೋವಿಡ್‌ ಕ್ಲಸ್ಟರ್‌ಗಳು ಉಂಟಾಗಿವೆ. ಈ ಬೆಳವಣಿಗೆಯನ್ನು ನಿಯಂತ್ರಿಸಲು ಹೆಚ್ಚಿನ ಅಧ್ಯಯನಕ್ಕಾಗಿ ಮಾದರಿಗಳನ್ನು ಕಳುಹಿಸಲಾಗಿದೆ’ ಎಂದರು.

ತುಮಕೂರು: 15 ನರ್ಸಿಂಗ್ ವಿದ್ಯಾರ್ಥಿಗಳಿಗೆ ಸೋಂಕು

ತುಮಕೂರು: ಕೇರಳದಿಂದ ಬಂದಿರುವ 15 ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಮಂಗಳವಾರ ಕೊರೊನಾ ಸೋಂಕು ಪತ್ತೆಯಾಗಿದ್ದು ಎಲ್ಲರನ್ನೂ ಐಸೋಲೇಟ್‌ ಮಾಡಲಾಗಿದೆ.

ಸಿದ್ಧಗಂಗಾ ನರ್ಸಿಂಗ್ ಕಾಲೇಜಿನಲ್ಲಿ ಎಂಟು ಹಾಗೂ ವರದರಾಜು ಕಾಲೇಜಿನಲ್ಲಿ ಏಳು ವಿದ್ಯಾರ್ಥಿಗಳಿಗೆ ಸೊಂಕು ತಗುಲಿರುವುದು ದೃಢಪಟ್ಟಿದ್ದು, ಎಲ್ಲರೂ ಕೇರಳದಿಂದ ಬಂದವರು.

ಸೋಂಕು ದೃಢಪಟ್ಟ ವಿದ್ಯಾರ್ಥಿಗಳಿದ್ದ ಸಿದ್ಧಗಂಗಾ ನರ್ಸಿಂಗ್ ಕಾಲೇಜು ವಸತಿ ನಿಲಯಕ್ಕೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು. ‘ಸೋಂಕು ದೃಢಪಟ್ಟ ಕಾಲೇಜನ್ನು ಕಂಟೇನ್ಮೆಂಟ್ ವಲಯವನ್ನಾಗಿ ಮಾಡಬೇಕು.

ನರ್ಸಿಂಗ್ ಪರೀಕ್ಷೆ ನಡೆಯುತ್ತಿರುವುದರಿಂದ ಸೋಂಕು ದೃಢಪಟ್ಟ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು’ ಎಂದು ಸೂಚಿಸಿದರು.

‘ವಿವಿಧ ಕಾಲೇಜುಗಳಲ್ಲಿ ಕೇರಳದಿಂದ ಬಂದ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದು, 15 ಮಂದಿಗೆ ದೃಢಪಟ್ಟಿದೆ.

ಈ ವಿದ್ಯಾರ್ಥಿಗಳಿದ್ದ ತರಗತಿಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.

ದಂತ ವಿದ್ಯಾರ್ಥಿಗಳಿಬ್ಬರಿಗೆ ಕೋವಿಡ್ ದೃಢ

ಬೆಳಗಾವಿ: ಓಮೈಕ್ರಾನ್‌ ಭೀತಿ ನಡುವೆ, ನಗರದ ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಗೆ ಮಂಗಳವಾರ ಕೋವಿಡ್‌ ದೃಢಪಟ್ಟಿದೆ. ಇದು, ಆತಂಕಕ್ಕೆ ಕಾರಣವಾಗಿದೆ. ‘ಬಿಹಾರ ಮೂಲದ ಅವರು ಸ್ವಯಂಪ್ರೇರಿತವಾಗಿ ಪರೀಕ್ಷೆಗೆ ಒಳಗಾಗಿದ್ದರು. ಇಬ್ಬರನ್ನೂ ಕ್ವಾರಂಟೈನ್ ಮಾಡಿದ್ಲು, ಅವರ ಸಂಪರ್ಕಕ್ಕೆ ಬಂದಿದ್ದವರನ್ನು ತಪಾಸಣೆಗೆ ಒಳಪಡಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT