ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು: 1924ರಲ್ಲೇ ಒಪ್ಪಿಗೆ ನೀಡಿದ್ದ ತಮಿಳುನಾಡು!

ನೀರಾವರಿ ತಜ್ಞ ಕ್ಯಾಪ್ಟನ್ ಎಸ್. ರಾಜಾರಾವ್ ಮಾಹಿತಿ
Last Updated 7 ಜನವರಿ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ವಿದ್ಯುತ್‌ ಯೋಜನೆಗಾಗಿ ಮೇಕೆದಾಟು ಬಳಿ ಜಲಾಶಯ ನಿರ್ಮಿಸಲು 1924ರಲ್ಲಿ ತಮಿಳುನಾಡು ಒಪ್ಪಿಗೆ ನೀಡಿತ್ತು. ಆದರೆ, ರಾಜ್ಯ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸುಪ್ರೀಂ ಕೋರ್ಟ್‌ ಮುಂದೆ ವಾದ ಮಂಡಿಸಿಲ್ಲ’ ಎಂದು ನೀರಾವರಿ ತಜ್ಞ ಕ್ಯಾಪ್ಟನ್ ಎಸ್. ರಾಜಾರಾವ್ ಅಭಿಪ್ರಾಯಪಟ್ಟರು.

‘ಮೇಕೆದಾಟು ಸಮತೋಲನ ಜಲಾಶಯ ನಿರ್ಮಾಣ– ಬೆಂಗಳೂರು ನಗರ ಮತ್ತು ಇತರ ಜಿಲ್ಲೆಗಳಿಗೆ ವರದಾನವೇ?’ ಕುರಿತು ದಿ ಇನ್‌ಸ್ಟಿಟ್ಯೂಷನ್‌ ಆಫ್‌ ಎಂಜಿನಿಯರ್ಸ್‌ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ‘ಅಂದಿನ ಮೈಸೂರು ದರ್ಬಾರ್‌ ಜತೆ ಮದ್ರಾಸ್‌ ಸರ್ಕಾರ ಮಾಡಿಕೊಂಡ ಒಪ್ಪಂದದ ಬಗ್ಗೆ 1924ರ ಜುಲೈ 3ರಂದು ಅಲ್ಲಿನ ಸರ್ಕಾರದ ಲೋಕೋಪಯೋಗಿ ಇಲಾಖೆಯ ಜಂಟಿ ಕಾರ್ಯದರ್ಶಿ ಪಿ. ಹಾಕಿನ್ಸ್‌ ಅವರೇ ಪತ್ರಿಕಾ ಪ್ರಕಟಣೆ ನೀಡಿದ್ದರು’ ಎಂದು ದಾಖಲೆ ಸಮೇತ ವಿವರಿಸಿದರು.

‘ಕಾವೇರಿ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಗಳು ಸುದೀರ್ಘ ಅವಧಿ ವಿಚಾರಣೆಗೆ ನಡೆಸಿವೆ. ಅಂತರರಾಜ್ಯ ಜಲ ಕಾಯ್ದೆಯನ್ನು ವಿಶ್ಲೇಷಿಸಿದಾಗ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್‌ನಿಂದಲೂ ಅನ್ಯಾಯವಾಗಿದೆ. ನೀರಿನ ಕೊರತೆಯಾದಾಗ ರಾಜ್ಯಗಳಿಗೆ ಪರಿಹಾರ ಸೂತ್ರವನ್ನು ನೀಡಲಾಗಿದೆ. ಆದರೆ, ಹೆಚ್ಚುವರಿ ನೀರು ಲಭ್ಯವಿದ್ದಾಗ ಏನು ಮಾಡಬೇಕು ಎನ್ನುವುದನ್ನು ಕಾವೇರಿ ನ್ಯಾಯಮಂಡಳಿ ತಿಳಿಸಿಲ್ಲ. ಹೆಚ್ಚುವರಿ ನೀರನ್ನು ಸಹ ನಾವೇಕೆ ಬಳಸಿಕೊಳ್ಳಬಾರದು? ಈ ಬಗ್ಗೆ ರಾಜ್ಯದ ಪರ ವಕೀಲರು ಸಹ ಪ್ರಶ್ನಿಸಿಲ್ಲ’ ಎಂದು ಹೇಳಿದರು.

‘ಮೇಕೆದಾಟು ಯೋಜನೆ ಅನುಷ್ಠಾನದಿಂದ ವನ್ಯಜೀವಿಗಳಿಗೆ ಆಗುವ ತೊಂದರೆಗಳ ಬಗ್ಗೆ ಸರ್ಕಾರ ಗಮನ ನೀಡಲೇಬೇಕು. ಅಳಿವಿನ ಅಂಚಿನಲ್ಲಿ ವನ್ಯಜೀವಿಗಳನ್ನು ರಕ್ಷಿಸಬೇಕು’ ಎಂದು ಸಲಹೆ ನೀಡಿದರು.

‘ತಮಿಳುನಾಡಿಗೆ ಹೆಚ್ಚು ಅನುಕೂಲ’

‘ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹೆಚ್ಚು ಅನುಕೂಲಗಳಿದ್ದರೂ ವಿರೋಧ ವ್ಯಕ್ತಪಡಿಸುತ್ತಿದೆ’ ಎಂದು ದಿ ಇನ್‌ಸ್ಟಿಟ್ಯೂಷನ್‌ ಆಫ್‌ ಎಂಜಿನಿಯರ್ಸ್‌ ಅಧ್ಯಕ್ಷ ಮತ್ತು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ಹೇಳಿದರು.

‘1991ರಿಂದ 2021ರವರೆಗೆ ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ. ಈ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳದ ಕಾರಣ 85ರಿಂದ 90 ಟಿಎಂಸಿ ಅಡಿ ನೀರು ಸಮುದ್ರಕ್ಕೆ ಹರಿದು ಹೋಗಿದೆ’ ಎಂದರು. ‘ಮೇಕೆದಾಟು ಯೋಜನೆಯಿಂದ ಬೆಂಗಳೂರು ಸೇರಿದಂತೆ ಸುತ್ತಮುತ್ತ ಜಿಲ್ಲೆಗಳ 2.5 ಕೋಟಿ ಜನರಿಗೆ ಅನುಕೂಲವಾಗಲಿದೆ. ಆದರೆ, ರಾಜ್ಯದಲ್ಲಿ ಜಲಾಶಯ ನಿರ್ಮಿಸಲು ತೊಡಕಗಳು ಹೆಚ್ಚು. ಕರ್ನಾಟಕದಲ್ಲೇ ಕಡಿಮೆ ಜಲಾಶಯಗಳಿವೆ. ದೇಶದಲ್ಲಿ 5386 ಜಲಾಶಯಗಳಿವೆ. ಮಹಾರಾಷ್ಟ್ರದಲ್ಲಿ 1857 ಮತ್ತು ಕೇರಳದಲ್ಲಿ 56 ಹಾಗೂ ಕರ್ನಾಟಕದಲ್ಲಿ ಕೇವಲ 26 ಅಣೆಕಟ್ಟುಗಳಿವೆ’ ಎಂದು ವಿವರಿಸಿದರು.

**

ತಜ್ಞರ ಅಭಿಪ್ರಾಯಗಳನ್ನು ಸರ್ಕಾರ ಪರಿಗಣಿಸುತ್ತಿಲ್ಲ. ಕೇವಲ ರಾಜಕೀಯ ಲಾಭ ಪಡೆಯುವುದೇ ಮುಖ್ಯವಾಗುತ್ತಿದೆ. ಸಮರ್ಪಕ ದಾಖಲೆಗಳನ್ನು ಸಂಗ್ರಹಿಸಿ ನ್ಯಾಯಾಲಯದ ಮುಂದೆ ಮಂಡಿಸಬೇಕು.

- ಮಂಜುಳಾ ಮಾನಸ. ಕೆಪಿಸಿಸಿ ವಕ್ತಾರರು

ಪರಿಸರ ನಾಶ ಮಾಡಿ ಜಲಾಶಯಗಳನ್ನು ನಿರ್ಮಿಸುವುದರಲ್ಲಿ ಅರ್ಥ ಇಲ್ಲ. ಮಳೆ ನೀರು ಸಂಗ್ರಹದಂತ ಯೋಜನೆಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ಅಳಿವಿನ ಅಂಚಿನಲ್ಲಿರುವ ವನ್ಯಜೀವಿಗಳ ರಕ್ಷಣೆಯ ಬಗ್ಗೆ ಗಮನ ನೀಡಬೇಕಾಗಿದೆ.

- ಸಹದೇವ್‌, ಪರಿಸರ ಕಾರ್ಯಕರ್ತ

ನಮ್ಮ ನೀರು ಬಳಸಿಕೊಳ್ಳಲು ಯಾವುದೇ ತೊಂದರೆ ಇಲ್ಲ. ನ್ಯಾಯಮಂಡಳಿ ಈ ಬಗ್ಗೆ ಸ್ಪಷ್ಟವಾಗಿ ಹೇಳಿದೆ. ಆದರೆ, ರಾಜಕೀಯ ಪಕ್ಷಗಳು ಈ ವಿಷಯವನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿವೆ.

- ಡಾ. ಗಲಗಲಿ, ನೀರಾವರಿ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT