ಗಂಗಾವತಿ (ಕೊಪ್ಪಳ ಜಿಲ್ಲೆ): ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಥಾಪಕ ಜನಾರ್ದನ ರೆಡ್ಡಿ ಮೇಲೆ ಬಹುಕೋಟಿ ಗಣಿ ಹಗರಣದ ಪ್ರಕರಣಗಳು ತನಿಖಾ ಹಂತದಲ್ಲಿದ್ದರೂ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ. ಇದಕ್ಕೆ ಅವಕಾಶ ಕೊಡದಂತೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು’ ಎಂದು ಉದ್ಯಮಿ ಟಪಾಲ್ ಗಣೇಶ್ ಹೇಳಿದರು.
ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಆಕ್ರಮ ಗಣಿಗಾರಿಕೆ ಹಗರಣದಲ್ಲಿ ಬಂಧಿತರಾಗಿ ಷರತ್ತುಗಳ ಮೇಲೆ ಜಾಮೀನು ಮೇಲೆ ಹೊರಬಂದಿರುವ ರೆಡ್ಡಿ ಜನರಿಗೆ ಸುಳ್ಳಿನ ಭರವಸೆಗಳು ನೀಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದರು.
‘ರೆಡ್ಡಿ 2006-07ರಲ್ಲಿ ಆಂಧ್ರದ ಭಾಗಗಳಲ್ಲಿ ಗಣಿಗಾರಿಕೆ ನಡೆಸಲು ಪರವಾನಗಿ ಪಡೆದು ಸರ್ಕಾರ ಮತ್ತು ಅಧಿಕಾರಿಗಳಿಗೆ ಹಣ ನೀಡಿ, ಕರ್ನಾಟಕ ಭಾಗದ ಕೆಲ ಪ್ರದೇಶಗಳನ್ನು ಗುತ್ತಿಗೆ ರೂಪದಲ್ಲಿ ಪಡೆದು, ಆಕ್ರಮ ಗಣಿಗಾರಿಕೆ ನಡೆಸಿ, ನೈಸರ್ಗಿಕ ಸಂಪತ್ತು ನಾಶ ಮಾಡಿದ್ದಾರೆ. ಇಂಥವರು ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ಕೊಡಬೇಕಾ’ ಎಂದು ಪ್ರಶ್ನಿಸಿದರು.
‘ಬಸವಣ್ಣನ ತತ್ವ ಹಾಗೂ ಸಿದ್ದಾಂತದಡಿ ಕೆಆರ್‌ಪಿಪಿ ಪಕ್ಷ ಸ್ಥಾಪಿಸಿ, ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ರೆಡ್ಡಿ ಸುಳ್ಳು ಹೇಳಿಕೆ ನೀಡಿ, ಜನರಿಗೆ ಹಣದ ಆಮಿಷ ತೋರಿಸುತ್ತಿದ್ದಾರೆ. ರೆಡ್ಡಿಬಳಿ ಆಕ್ರಮ ಸಂಪತ್ತು ಸಾಕಷ್ಟಿದ್ದು, ಅವರಿಂದ ಹಣ ತೆಗೆದುಕೊಳ್ಳಿ. ಆದರೆ ಮತ ಮಾತ್ರ ನೀಡಿಬೇಡಿ’ ಎಂದರು.
‘ಬಳ್ಳಾರಿ ಭಾಗದಲ್ಲಿ ಹಲವು ಪ್ರದೇಶಗಳು ಗಣಿಗಾರಿಕೆಯಿಂದ ಹಾಳಾಗಿವೆ. ಇದೀಗ ಅವರ ಕಣ್ಣು ಅಂಜನಾದ್ರಿ ಮೇಲೆ ಬಿದ್ದಿದೆ. ರೆಡ್ಡಿ ಭೂಗರ್ಭದಿಂದ ಹಣ, ಬಂಗಾರ ತೆಗೆಯುವ ವರ್ಗಕ್ಕೆ ಸೇರಿದವರು. ಭತ್ತದನಾಡಿನಲ್ಲಿ ವಿಜಯನಗರ ಸಾಮ್ರಾಜ್ಯದ ದೇವಸ್ಥಾನಗಳಿದ್ದು, ಅಲ್ಲಿಂದ ಬಂಗಾರ ತೆಗೆದರೂ ತೆಗೆಯಬಹುದು’ ಎಂದು ವ್ಯಂಗ್ಯವಾಡಿದರು.
‘ನಾನು ಸುದ್ದಿಗೋಷ್ಠಿ ನಡೆಸಲು ಗಂಗಾವತಿಗೆ ಬರುವ ವಿಷಯ ಗೊತ್ತಾಗುತ್ತಿದ್ದಂತೆ ಜನಾರ್ದನ ರೆಡ್ಡಿ ಕಡೆಯಿಂದ ಸಾಕಷ್ಟು ಬೆದರಿಕೆ ಕರೆಗಳು ಬಂದವು. ನಾನು ಯಾವುದಕ್ಕೂ ಹೆದರುವುದಿಲ್ಲ. ರೆಡ್ಡಿ ಗಟ್ಟು ರಟ್ಟು ಮಾಡಲು ಇಲ್ಲಿನ ನಾಯಕರು ಯಾರು ಕರೆದರೂ ಪ್ರಚಾರಕ್ಕೆ ಬರುತ್ತೇನೆ’ ಎಂದರು.
ಹೋರಾಟಗಾರರಾದ ಭಾರದ್ವಾಜ್, ಹುಸೇನಪ್ಪ ಹಂಚಿನಾಳ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.