ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಅರಣ್ಯ ಶೇ 30ರಷ್ಟು ಹೆಚ್ಚಿಸಲು ಗುರಿ: ಸಚಿವ ಉಮೇಶ ಕತ್ತಿ

Last Updated 2 ಅಕ್ಟೋಬರ್ 2021, 11:26 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಸದ್ಯ ಶೇ 20ರಷ್ಟು ಅರಣ್ಯ ಪ್ರದೇಶವಿದ್ದು, ಈ ಪ್ರಮಾಣವನ್ನು ಶೇ 30ಕ್ಕೆ ಹೆಚ್ಚಿಸಲು ಅರಣ್ಯ ಇಲಾಖೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ’ ಎಂದು ಅರಣ್ಯ ಸಚಿವ ಉಮೇಶ ಕತ್ತಿ ಹೇಳಿದರು.

ನಗರದ ಕಬ್ಬನ್ ಪಾರ್ಕ್‌ನಲ್ಲಿ ಆಯೋಜಿಸಲಾಗಿದ್ದ 67ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ‘ವನ್ಯಜೀವಿ ಸಂರಕ್ಷಣೆಗಾಗಿ ನಡಿಗೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ವನ್ಯಜೀವಿ ಹಾಗೂ ಕಾಡಿನ ರಕ್ಷಣೆ ಬಗ್ಗೆ ನಮ್ಮಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಬೇಕಿದೆ’ ಎಂದರು.

‘ಕಾಡು ಉಳಿದರೆ ಮಾತ್ರ ನೆಮ್ಮದಿಯಿಂದ ಇರಲು ಸಾಧ್ಯ. ಕರ್ನಾಟಕ ಗಂಧದ ನಾಡು ಎಂಬ ಕೀರ್ತಿ ಹೊಂದಿದೆ. ಅದನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ. ಮುಂದಿನ ದಿನಗಳಲ್ಲಿ ದೇಶದಲ್ಲಿಯೇ ಅತೀ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ರಾಜ್ಯವನ್ನಾಗಿ ಕರ್ನಾಟಕವನ್ನು ಮಾಡುವ ಗುರಿಯನ್ನು ಅರಣ್ಯ ಇಲಾಖೆ ಹೊಂದಿದೆ’ ಎಂದು ತಿಳಿಸಿದರು.

‘ಯುಗ, ಯುಗಗಳಿಂದ ಮಾನವ ವನ್ಯಜೀವಿಗಳ ಜೊತೆಗೆ ಸೌಹಾರ್ದ ಬಾಂಧವ್ಯವನ್ನು ಬೆಳೆಸಿಕೊಂಡು ಬಂದಿದ್ದಾನೆ. ವನ್ಯಜೀವಿಗಳ ರಕ್ಷಣೆ ಅಗತ್ಯವಾಗಿದೆ. ವನ್ಯಜೀವಿಗಳ ಸಂರಕ್ಷಣೆಗೆ ಕಾಡು ಕೂಡಾ ಸುರಕ್ಷಿತವಾಗಿರಬೇಕು. ಆಗ ಮಾತ್ರ ಶುದ್ಧ ಗಾಳಿ, ಆಹಾರ, ನೀರು ಸಿಗಲು ಸಾಧ್ಯ’ ಎಂದರು.

‘ಆಯುರ್ವೇದದಲ್ಲಿ ಅರಣ್ಯದಲ್ಲಿ ಸಿಗುವ ವಿವಿಧ ಸಸ್ಯ ಸಂಕುಲ, ಹೂವು, ಹಣ್ಣುಗಳಲ್ಲಿರುವ ಔಷಧ ಗುಣಗಳ ಬಗ್ಗೆ ಮಹತ್ವ ತಿಳಿಸಲಾಗಿದೆ. ಅರಣ್ಯವನ್ನು ಪೂಜಿಸುವ ಸಂಪ್ರದಾಯ ಹಿಂದಿನಿಂದಲೂ ನಮ್ಮಲ್ಲಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಮೂಲಕ ವನ್ಯಜೀವಿಗಳ ರಕ್ಷಣೆಗೆ ಕಠಿಣ ಕಾನೂನು ರೂಪಿಸಲಾಗಿದೆ’ ಎಂದರು.

ಅಳಿವಿನ ಅಂಚಿನಲ್ಲಿರುವ ಮೀನಿನ ವಿಶೇಷ ಅಂಚೆ ಲಕೋಟೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ವನ್ಯಜೀವಿ ಸಂರಕ್ಷಣೆ ಕುರಿತಂತೆ ಜಾಗೃತಿ ಮೂಡಿಸಲು ಕಬ್ಬನ್ ಪಾರ್ಕ್‌ನಿಂದ ಲಾಲ್ ಬಾಗ್‌ವರೆಗೆ ನಡಿಗೆಗೆ ಹಸಿರು ನಿಶಾನೆ ತೋರಿಸಲಾಯಿತು.

ಶಾಸಕ ರಿಜ್ವಾನ್ ಅರ್ಷದ್, ಸಂಸದ ಪಿ.ಸಿ. ಮೋಹನ್, ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT