ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲಾಪುರ: ಶಿಕ್ಷಕರ ಶ್ರಮದಿಂದ ಸುಸಜ್ಜಿತ ಶಾಲೆ, ಪಾಲಕನಿಂದ ವಾಹನ ಕೊಡುಗೆ

Last Updated 2 ಸೆಪ್ಟೆಂಬರ್ 2021, 21:49 IST
ಅಕ್ಷರ ಗಾತ್ರ

ಕಮಲಾಪುರ (ಕಲಬುರ್ಗಿ ಜಿ‌ಲ್ಲೆ): ಕರ್ತವ್ಯ ನಿಷ್ಠೆ ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸಿದರೆ ಕುಗ್ರಾಮ, ತಾಂಡಾಗಳಲ್ಲೂ ಸರ್ಕಾರಿ ಶಾಲೆಗಳ ಸುಧಾರಣೆ ಜತೆಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ಶಂಕರನಾಯಕ ತಾಂಡಾ ಶಾಲೆಯ ಶಿಕ್ಷಕ ಶಂಕರಲಿಂಗ ಬ. ಹಿಪ್ಪರಗಿ.

ಇದು ಕಿರಿಯ ಪ್ರಾಥಮಿಕ ಶಾಲೆ. 1ರಿಂದ 5ನೇ ತರಗತಿ ವರೆಗೆ 45 ಮಕ್ಕಳು ಇದ್ದು, ಕೊರೊನಾ ಕಾರಣಕ್ಕೆ ಭೌತಿಕ ತರಗತಿ ಇಲ್ಲದಿದ್ದರೂ ಈ ಶಾಲೆಗೆ ಮಕ್ಕಳು ತಂಡಗಳಲ್ಲಿ ಸರದಿಯಂತೆ ಬರುತ್ತಿದ್ದಾರೆ. ಈ ಶಾಲೆಯಲ್ಲಿ ಒಬ್ಬ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.

‘ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಶಾಲೆಯಲ್ಲಿ ವಿಶೇಷ ತರಗತಿ ನಡೆಸುತ್ತೇನೆ. ಓದು ಅಷ್ಟೇ ಅಲ್ಲ. ನಾಟಕ–ಜನಪದ ಕಲೆಗಳ ಅಭಿನಯಕ್ಕೆ ಪ್ರೋತ್ಸಾಹಿಸುತ್ತಿದ್ದು, ಅದಕ್ಕಾಗಿ ಮೈಕ್‌ ಸೆಟ್‌ ಹಾಗೂ ಪೋಷಾಕುಗಳನ್ನು ಖರೀದಿಸಿದ್ದೇವೆ’ ಎನ್ನುತ್ತಾರೆ ಶಂಕರಲಿಂಗ.

‘ಈ ಶಾಲೆಗೆ ಸಹ ಶಿಕ್ಷಕರಾಗಿ 2008 ರಲ್ಲಿ ಶಂಕರಲಿಂಗ ನೇಮಕವಾದರು. ಉದ್ಯೋಗ ಖಾತರಿ ಅಡಿ ಕಾಂಪೌಂಡ್‌ ನಿರ್ಮಿಸಿಕೊಂಡರು. ಸದ್ಯ ಸ್ವಂತ ಖರ್ಚಿನಲ್ಲೇ ಗೇಟ್‌ ಅಳವಡಿಸಿದ್ದಾರೆ. ಆವರಣದಲ್ಲಿ ಹೂ, ಹಣ್ಣಿನ ಸಸಿಗಳನ್ನು ನೆಟ್ಟಿದ್ದಾರೆ. ಕೂರಲು ಆಸನಗಳನ್ನು ಹಾಕಿದ್ದಾರೆ. ವ್ಯವಸ್ಥಿತ ಶೌಚಾಲಯವಿದೆ. ಇದಕ್ಕೆಲ್ಲ ಈ ಶಿಕ್ಷಕರ ಪರಿಶ್ರಮವೇ ಕಾರಣ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ರಾಜಕುಮಾರ ರಾಠೋಡ ತಿಳಿಸಿದರು.

‘ಕೋವಿಡ್‌ ಸಂದರ್ಭದಲ್ಲಿ ಪ್ರತಿದಿನ ಮನೆ ಮನೆಗೆ ಬಂದು ಪಾಠ ಮಾಡಿದ್ದಾರೆ. ಮಕ್ಕಳಿಗೆ ತರಬೇತಿ ನೀಡಿ ವಸತಿ ಶಾಲೆಗಳಲ್ಲಿ ಪ್ರವೇಶ ಕೊಡಿಸಲು ಪ್ರಯತ್ನಿಸುತ್ತಾರೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಶಿವಾಜಿ ರಾಠೋಡ ಹೇಳಿದರು.

ಉಡುಗೊರೆ: ಶಂಕರಲಿಂಗ ತಾಂಡಾ ರಾಷ್ಟ್ರೀಯ ಹೆದ್ದಾರಿಯಿಂದ 3 ಕಿ.ಮೀ ದೂರದಲ್ಲಿದೆ. ಪಕ್ಕಾ ರಸ್ತೆ ಇಲ್ಲ. ಇಲ್ಲಿ ಸುಮಾರು 300 ಜನಸಂಖ್ಯೆ ಇದೆ. ಕಮಲಾಪುರದಲ್ಲಿ ಮನೆ ಮಾಡಿರುವ ಶಂಕರಲಿಂಗ ಸಿಂದಿಬಸವ ಕ್ರಾಸ್‌ವರೆಗೆ ಬಸ್‌ಗಳಲ್ಲಿ ಬಂದು, ಅಲ್ಲಿಂದ ಶಾಲೆಗೆ ನಡೆದುಕೊಂಡು ಬರುತ್ತಿದ್ದರು. ಪಾಲಕ ಅರುಣಕುಮಾರ ರಾಠೋಡ ಅವರು ₹44 ಸಾವಿರ ನೀಡಿ ಎರಡು ವರ್ಷಗಳ ಹಿಂದೆ ದ್ವಿಚಕ್ರವಾಹನ (ಟಿವಿಎಸ್‌ ಮೊಪೆಡ್‌)ವನ್ನು ಈ ಶಿಕ್ಷಕರಿಗೆ ಉಡುಗೊರೆಯಾಗಿ ನೀಡಿದ್ದಾರೆ. ‘ನಮ್ಮ ಶಾಲೆ ಹಾಗೂ ಮಕ್ಕಳಿಗೆ ಅವರು ಮಾಡಿದ ಸೇವೆಗೆ ಇದೊಂದು ಚಿಕ್ಕ ಕಾಣಿಕೆ’ ಎನ್ನುತ್ತಾರೆ ಅರುಣಕುಮಾರ ರಾಠೋಡ.

ಶಾಲೆಯ ಅಭಿವೃದ್ಧಿಗೆ ಶ್ರಮ
ಒಂದೇ ಕೊಠಡಿಯಲ್ಲಿ 5 ನೇ ತರಗತಿವರೆಗೆ ಶಾಲೆ ನಡೆಯುತ್ತಿತ್ತು. ಶಂಕರಲಿಂಗರಿಗೆ ಸುಧಾರಣೆ ಮಾಡಬೇಕೆಂಬ ಹಂಬಲ ಶುರುವಾಯಿತು. ಸರ್ವ ಶಿಕ್ಷಣ ಯೋಜನೆಯಡಿ ಇನ್ನೊಂದು ಕೊಠಡಿ ಮಂಜೂರು ಮಾಡಿಸಿಕೊಂಡರು. ಶಾಲೆಯ ಅಂದ ಹೆಚ್ಚಿಸಲು ವೈಯಕ್ತಿಕವಾಗಿ ₹ 20 ಸಾವಿರ ಖರ್ಚುಮಾಡಿದ್ದಾರೆ. ನಂತರ ಸಮುದಾಯದ ಸಹಭಾಗಿತ್ವದೊಂದಿಗೆ ಶಾಲಾ ಅವರಣದಲ್ಲಿ ತಲಾ 25 ಟ್ರ್ಯಾಕ್ಟ್‌ರ್‌ ಲೋಡ್ ಕಲ್ಲು, ಮರುಮ್‌ ಹಾಕಿ ಆವರಣ ಸಮತಟ್ಟುಗೊಳಿಸಿದ್ದಾರೆ.

*
ಶಾಲೆಗೆ ಸೌಲಭ್ಯ ಕಲ್ಪಿಸಲು ತಾಂಡಾ ನಿವಾಸಿಗಳು ಸಹಕರಿಸಿದ್ದಾರೆ. ಸಮುದಾಯದೊಂದಿಗೆ ಬೆರೆತು ಕೆಲಸ ಮಾಡಿದ್ದರ ಪ್ರತಿಫಲ ಇದು
–ಶಂಕರಲಿಂಗ ಬ. ಹಿಪ್ಪರಗಿ, ಶಿಕ್ಷಕ

*
ನಮ್ಮ ತಾಂಡಾ ಶಾಲೆಯ ಶೈಕ್ಷಣಿಕ ಗುಣಮಟ್ಟ ಮನಗಂಡು ಸುತ್ತಲಿನ ತಾಂಡಾಗಳ ಮಕ್ಕಳೂ ಇಲ್ಲಿ ದಾಖಲಾಗಿದ್ದಾರೆ. ಇದು ನಮಗೆ ಹೆಮ್ಮೆಯ ವಿಷಯ.
–ಶಿವಾಜಿ ರಾಠೋಡ, ಎಸ್‌ಡಿಎಂಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT