ಶುಕ್ರವಾರ, ಸೆಪ್ಟೆಂಬರ್ 17, 2021
22 °C
‘ಅರ್ಹತಾ ದಿನ ಲಭ್ಯ ಇಲ್ಲ’ ಎಂದು ಪಟ್ಟಿಯಿಂದ ಹೊರಗಿಟ್ಟ ಕಂದಾಯ ಇಲಾಖೆ!

164 ತಹಶೀಲ್ದಾರ್‌ಗಳ ‘ಜ್ಯೇಷ್ಠತೆ’ಗೆ ಕೊಕ್‌?

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಿರಸ್ತೇದಾರ್‌, ಉಪ ತಹಶೀಲ್ದಾರ್ ವೃಂದದಿಂದ ತಹಶೀಲ್ದಾರ್‌– ಗ್ರೇಡ್ 2 ಹುದ್ದೆಗೆ 2016 ರ ಜುಲೈ 25ರಂದು ಬಡ್ತಿ ಪಡೆದ 164 ಅಧಿಕಾರಿಗಳ ‘ಅರ್ಹತಾ ದಿನ ಲಭ್ಯ ಇಲ್ಲ’ ಎಂದು ಉಲ್ಲೇಖಿಸಿರುವ ಕಂದಾಯ ಇಲಾಖೆ, ಸೇವಾ ಜ್ಯೇಷ್ಠತಾ ಪಟ್ಟಿಯಿಂದಲೇ ಅವರನ್ನು ಹೊರಗಿಟ್ಟಿದೆ!

'ಬಡ್ತಿ ಪಡೆದ ದಿನದಿಂದಲೇ ಅರ್ಹತಾ ದಿನಾಂಕ ನಿಗದಿಪಡಿಸಿದರೆ, ಅರ್ಹತಾದಾಯಕ ಕರ್ತವ್ಯ ನಿರ್ವಹಿಸಿರುವ ಈ ಎಲ್ಲ ಅಧಿಕಾರಿಗಳನ್ನು ಗ್ರೇಡ್‌–1 ಹುದ್ದೆಗೆ ಪದೋನ್ನತಿ ನೀಡಬೇಕಾಗುತ್ತದೆ. ಅದನ್ನು ತಪ್ಪಿಸುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ’ ಎನ್ನುವುದು ಪಟ್ಟಿಯಿಂದ ಹೊರಗಿರುವ ಅಧಿಕಾರಿಗಳ ಆರೋಪ.

ಆದರೆ, ಕೆಪಿಎಸ್‌ಸಿ ಮೂಲಕ ತಹಶೀಲ್ದಾರ್‌ ಗ್ರೇಡ್‌– 2 ಹುದ್ದೆಗೆ ನೇರ ನೇಮಕಾತಿಯಾಗಿ 2017ರ ಸೆ. 23 ರಂದು ಕರ್ತವ್ಯಕ್ಕೆ ವರದಿ ಮಾಡಿಕೊಂಡ 110 ಅಧಿಕಾರಿಗಳಿಗೆ ಅರ್ಹತಾ ದಿನ ನಿಗದಿಪಡಿಸಿ, ಜ್ಯೇಷ್ಠತೆ ನೀಡಲಾಗಿದೆ.

ಈ ಬಗ್ಗೆ ಮುಖ್ಯ ಕಾರ್ಯದರ್ಶಿಗೆ (ಸಿ.ಎಸ್‌) ಪತ್ರ ಬರೆದಿರುವ ವಿಧಾನಪರಿಷತ್ತಿನ‌ ಬಿಜೆಪಿ ಸದಸ್ಯ ಎಚ್‌. ವಿಶ್ವನಾಥ್, ‘ಜ್ಯೇಷ್ಠತೆ ನೀಡುವ ವಿಷಯದಲ್ಲಿ ನಿಯಮ ಉಲ್ಲಂಘಿಸಲಾಗಿದೆ. ತಕ್ಷಣ ಈ ತಪ್ಪು ಸರಿಪಡಿಸುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶನ ನೀಡಬೇಕು' ಎಂದು ಕೋರಿದ್ದಾರೆ. ಈ ವಿಷಯದ ಬಗ್ಗೆ ಪರಿಶೀಲಿಸಿ, ಶೀಘ್ರ ಪಟ್ಟಿ ಅಂತಿಮಗೊಳಿಸುವಂತೆ ಸಿ.ಎಸ್‌ ನಿರ್ದೇಶನ ನೀಡಿದ್ದಾರೆ.

ಕರಡು ಜ್ಯೇಷ್ಠತಾ ಪಟ್ಟಿ: ಕಂದಾಯ ಇಲಾಖೆ ಇದೇ ಜುಲೈ 20ರಂದು ತಹಶೀಲ್ದಾರ್‌– ಗ್ರೇಡ್‌ 2 ಅಧಿಕಾರಿಗಳ ತಾತ್ಕಾಲಿಕ ಕರಡು ಜ್ಯೇಷ್ಠತಾ ಪಟ್ಟಿ ಪ್ರಕಟಿಸಿದೆ. ಇಲಾಖೆಯಲ್ಲಿ ಸದ್ಯ 646 ತಹಶೀಲ್ದಾರ್‌‌–2 ಗ್ರೇಡ್‌ ಹುದ್ದೆಗಳು ಇವೆ. ಈ ಪೈಕಿ, ಶೇ 50 ರಷ್ಟು ನೇರ ನೇಮಕಾತಿ ಮೂಲಕ ಭರ್ತಿ ಮಾಡಿದರೆ, ಉಳಿದ ಶೇ 50ರಷ್ಟಕ್ಕೆ ಉಪ ತಹಶೀಲ್ದಾರ್‌, ಶಿರಸ್ತೇದಾರ್‌ ಹುದ್ದೆಯಿಂದ ಬಡ್ತಿ ನೀಡಲಾಗುತ್ತದೆ.

ಬಡ್ತಿ ಮೀಸಲಾತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಅನ್ವಯ, ಜ್ಯೇಷ್ಠತಾ ಪಟ್ಟಿ ಪ್ರಕಟಿಸಲಾಗಿದೆ. ಆದರೆ, ಗ್ರೇಡ್‌ –2 ಹುದ್ದೆಗೆ ಪದೋನ್ನತಿ ಹೊಂದಿದ ಅಧಿಕಾರಿಗಳನ್ನು ಹೊರಗಿಟ್ಟು, ಅವರ ನಂತರ ಇಲಾಖೆಗೆ ನೇರ ನೇಮಕಾತಿ ಆದ ಅಧಿಕಾರಿಗಳಿಗೆ ಸೇವಾ ಜ್ಯೇಷ್ಠತೆ ನೀಡಲಾಗಿದೆ.

‘ಕರ್ನಾಟಕ ಸಿವಿಲ್‌ ಸೇವೆಗಳ ನಿಯಮಾವಳಿಗಳ ಪ್ರಕಾರ ಗ್ರೇಡ್–2 ಹುದ್ದೆಗೆ 2016ರಲ್ಲಿ ಬಡ್ತಿ ಹೊಂದಿದ ಅಧಿಕಾರಿಗಳು, 2017ರಲ್ಲಿ ನೇರ ನೇಮಕಗೊಂಡ ಅಧಿಕಾರಿಗಳಿಗಿಂತ ಜ್ಯೇಷ್ಠತೆಯಲ್ಲಿ ಹಿರಿಯರು. ಕೆಪಿಎಸ್‌ಸಿ 2009 ರಿಂದ 2017ರ ಸೆಪ್ಟೆಂಬರ್‌ವರೆಗೆ ತಹಶೀಲ್ದಾರ್‌ ಗ್ರೇಡ್‌–2 ಹುದ್ದೆಗಳನ್ನೂ ಭರ್ತಿ ಮಾಡಿಯೇ ಇಲ್ಲ. ಪದೋನ್ನತಿ ಹೊಂದಿದ ಅಧಿಕಾರಿಗಳು ಈ ಅವಧಿಯಲ್ಲಿ ತಾಲ್ಲೂಕು ಆಡಳಿತ ನಿಭಾಯಿಸಿದ್ದಾರೆ. ಬಡ್ತಿ ಪಡೆದವರ ಸೇವೆಯನ್ನು ಹೀಗೆ 9 ವರ್ಷ ಪಡೆದ ಸರ್ಕಾರ, ಸೇವಾ ಜ್ಯೇಷ್ಠತೆ ನೀಡಿಲ್ಲ. ಈ ಮಧ್ಯೆ, ಮತ್ತೆ  ಗ್ರೇಡ್‌– 2 ಖಾಲಿ ಹುದ್ದೆಗಳನ್ನು ಪದೋನ್ನತಿ ನೀಡಿ ಭರ್ತಿ ಮಾಡಲು ಮುಂದಾಗಿದೆ’ ಎಂದೂ ಅಧಿಕಾರಿಗಳು ದೂರಿದ್ದಾರೆ.

ಜ್ಯೇಷ್ಠತಾ ಪಟ್ಟಿ ಇನ್ನೂ ಅಂತಿಮಗೊಂಡಿಲ್ಲ. ಸಿ.ಎಸ್‌. ನಿರ್ದೇಶನದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ಸ್ಪಷ್ಟೀಕರಣ ಪಡೆದು ಈ ಬಗ್ಗೆ ತೀರ್ಮಾನಿಸಲಾಗುವುದು ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ. ಮಹೇಶ್ವರ ರಾವ್‌ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು