ಚೀನಾ ವೈದ್ಯಕೀಯ ಪದವಿ ಮಾನ್ಯ ಮಾಡದ್ದನ್ನು ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿ ವಜಾ

ಬೆಂಗಳೂರು: ‘ಚೀನಾದಲ್ಲಿ ಪಡೆದಿರುವ ನನ್ನ ವೈದ್ಯಕೀಯ ಪದವಿ ಮಾನ್ಯ ಮಾಡಿಲ್ಲ’ ಎಂದು ಆಕ್ಷೇಪಿಸಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿಂಬರಹ ಪ್ರಶ್ನಿಸಿ ಡಾ.ಸತ್ಯಕ್ ಎಂಬುವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
‘ವಿದೇಶಿ ವಿಶ್ವವಿದ್ಯಾಲಯಗಳು ನೀಡುವ ವೈದ್ಯಕೀಯ ಪದವಿಗಳನ್ನು ಉದ್ಯೋಗಕ್ಕೆ ಮಾನ್ಯ ಮಾಡುವ ನಿಟ್ಟಿನಲ್ಲಿ ಮಹಾರಾಷ್ಟ್ರ ರಾಜ್ಯ ಸರ್ಕಾರ ಅನುಸರಿಸುತ್ತಿರುವ ನೀತಿಯನ್ನು ಕರ್ನಾಟಕವೂ ಪಾಲನೆ ಮಾಡುವುದು ಕಡ್ಡಾಯವಲ್ಲ’ ಎಂಬ ರಾಜ್ಯ ಸರ್ಕಾರದ ವಾದವನ್ನು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಎತ್ತಿಹಿಡಿದಿದೆ.
‘ಅರ್ಜಿದಾರರು ಈ ಪ್ರಕರಣದಲ್ಲಿ ಸಕ್ಷಮ ಪ್ರಾಧಿಕಾರ ನಿಗದಿಪಡಿಸಿದ್ದ ಅರ್ಹತೆಯ ಮಾನ ದಂಡವನ್ನು ಹೊಂದಿಲ್ಲ. ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವಾಗ ಅದಕ್ಕೆ ಹೊಂದುವಂತಹ ಅರ್ಹತೆಗಳನ್ನು ನಿಗದಿಪಡಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ’ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: ಸಕ್ಷಮ ಪ್ರಾಧಿಕಾರವು ನಾನಾ ವಿಭಾಗಗಳಲ್ಲಿ ವೈದ್ಯಾಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಲು 2020ರ ಸೆಪ್ಟೆಂಬರ್ 10ರಂದು ಅರ್ಜಿ ಆಹ್ವಾನಿಸಿತ್ತು. ಭಾರತದಲ್ಲಿ ಸ್ಥಾಪನೆಯಾದ ಯಾವುದೇ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಪಡೆದಿರಬೇಕು ಎಂಬ ಅರ್ಹತೆಯನ್ನು ಇದರಲ್ಲಿ ನಿಗದಿಪಡಿಸಲಾಗಿತ್ತು.
ಅರ್ಜಿದಾರ ಡಾ. ಸತ್ಯಕ್ ವೈದ್ಯಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಪ್ರಾಧಿಕಾರವು, ‘ಇವರು ವಿದೇಶಿ ವಿವಿಯಲ್ಲಿ ವೈದ್ಯ ಪದವಿ ಪಡೆದಿದ್ದಾರೆ’ ಎಂಬ ಕಾರಣಕ್ಕೆ ಅರ್ಜಿ ತಿರಸ್ಕರಿಸಿತ್ತು.
ಇದಕ್ಕೆ ಸ್ಪಷ್ಟನೆ ನೀಡಿದ್ದ ಅರ್ಜಿದಾರರು, ‘ಹುದ್ದೆಗೆ ನಾನು ಅರ್ಹನಾಗಿದ್ದೇನೆ. ಮಹಾರಾಷ್ಟ್ರದಲ್ಲಿ ವಿದೇಶಿ ವಿವಿಗಳಲ್ಲಿ ಪಡೆದ ವೈದ್ಯ ಪದವಿಯನ್ನು ಮಾನ್ಯ ಮಾಡಲಾಗುತ್ತದೆ. ಅದೇ ರೀತಿ ಕರ್ನಾಟಕ ಸರ್ಕಾರವೂ ಈ ಮಾನದಂಡ ಅನುಸರಿಸಿ ನನ್ನ ಅರ್ಜಿ ಪರಿಗಣಿಸಬೇಕು’ ಎಂದು ಕೋರಿದ್ದರು.
ಆದರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಕೋರಿಕೆಯನ್ನು ತಿರಸ್ಕರಿಸಿ, ಡಾ. ಸತ್ಯಕ್ ಅವರಿಗೆ ಹಿಂಬರಹ ನೀಡಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.