ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಹಂತದ ತರಬೇತಿ: ಚುನಾವಣೆ ಸಿದ್ಧತೆ ಆರಂಭಿಸಿದ ಆಯೋಗ

ಮೇ 9ರಿಂದ ದೆಹಲಿಯಲ್ಲಿ ಅಧಿಕಾರಿಗಳಿಗೆ ಮೊದಲ ಹಂತದ ತರಬೇತಿ
Last Updated 26 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಕೇಂದ್ರ ಚುನಾವಣಾ ಆಯೋಗ ಸಿದ್ಧತೆ ಆರಂಭಿಸಿದೆ. ಚುನಾವಣಾ ಪ್ರಕ್ರಿಯೆ ಕುರಿತು ‘ಮಾಸ್ಟರ್‌ ತರಬೇತುದಾರ’ರಾಗಿ ಕೆಳಹಂತದ ಅಧಿಕಾರಿಗಳಿಗೆ ತರಬೇತಿ ನೀಡುವುದಕ್ಕಾಗಿ 54 ಹಿರಿಯ ಅಧಿಕಾರಿಗಳಿಗೆ ಮೇ 9ರಿಂದ 14ರವರೆಗೆ ದೆಹಲಿಯಲ್ಲಿ ತರಬೇತಿ ನೀಡಲಾಗುತ್ತಿದೆ.

ಐದು ತಂಡಗಳಲ್ಲಿ ಅಧಿಕಾರಿಗಳಿಗೆ ತರಬೇತಿ ನಡೆಯಲಿದೆ. ಈ ಪಟ್ಟಿಹೊರಬೀಳುತ್ತಿದ್ದಂತೆಯೇ ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ನಡೆಯಬಹುದೇ ಎಂಬ ಚರ್ಚೆ ಅಧಿಕಾರಿಗಳ ವಲಯದಲ್ಲಿ ಆರಂಭವಾಗಿದೆ. ಆದರೆ, ವರ್ಷಕ್ಕೂ ಮೊದಲು ಅಧಿಕಾರಿಗಳನ್ನು ಚುನಾವಣೆಗೆ ಸಜ್ಜುಗೊಳಿಸುವುದು ಸಾಮಾನ್ಯ ಪ್ರಕ್ರಿಯೆ ಎಂದು ಆಯೋಗದ ಮೂಲಗಳು ಹೇಳಿವೆ.

ಚುನಾವಣೆಗೆ ಸ್ಪರ್ಧಿಸುವವರ ಅರ್ಹತೆಗಳು, ನಾಮಪತ್ರ ಸಲ್ಲಿಕೆ, ಪರಿಶೀಲನೆ, ನಾಮಪತ್ರ ಹಿಂಪಡೆಯುವುದು, ಚಿಹ್ನೆಗಳ ಹಂಚಿಕೆ, ಮತದಾನದ ಸಿದ್ಧತೆ, ಸಮಸ್ಯೆಗಳನ್ನು ಗುರುತಿಸುವುದು, ಮಾದರಿ ನೀತಿಸಂಹಿತೆ ಅನುಷ್ಠಾನ, ಚುನಾವಣಾ ವೆಚ್ಚದ ಮೇಲೆ ನಿಗಾ ಇರಿಸುವುದು, ಅಂಚೆ ಮತಪತ್ರ, ಮಾಹಿತಿ ತಂತ್ರಜ್ಞಾನದ ಬಳಕೆ, ವಿದ್ಯುನ್ಮಾನ ಮತಯಂತ್ರ ಮತ್ತು ವಿವಿಪ್ಯಾಟ್‌ ಯಂತ್ರಗಳ ಬಳಕೆ, ಮತ ಎಣಿಕೆ, ಫಲಿತಾಂಶ ಘೋಷಣೆ ಕುರಿತು ತರಬೇತಿ ನಡೆಯಲಿದೆ ಎಂದು ಆಯೋಗ ತಿಳಿಸಿದೆ.

ಕರ್ನಾಟಕ, ನಾಗಾಲ್ಯಾಂಡ್‌ ಮತ್ತು ತ್ರಿಪುರಾ ರಾಜ್ಯಗಳ ಅಧಿಕಾರಿಗಳಿಗೆ ಒಂದೇ ಬಾರಿಗೆ ತರಬೇತಿ ಆಯೋಜಿಸಲಾಗಿದೆ. ರಾಜ್ಯದ ಅಧಿಕಾರಿಗಳನ್ನು ತರಬೇತಿಗೆ ನಿಯೋಜಿಸುವಂತೆ ಆಯೋಗ ಏಪ್ರಿಲ್‌ 11ರಂದು ಪತ್ರ ಬರೆದಿತ್ತು. 54 ಅಧಿಕಾರಿಗಳ ಪಟ್ಟಿ ಸಿದ್ಧಪಡಿಸಿರುವ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ತರಬೇತಿಯಲ್ಲಿ ಪಾಲ್ಗೊಳ್ಳುವಂತೆ ನಿರ್ದೇಶನ ನೀಡಿದೆ.

ಹೆಚ್ಚುವರಿ ಜಿಲ್ಲಾಧಿಕಾರಿಗಳು, ವಿಶೇಷ ಭೂಸ್ವಾಧೀನಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರ್‌ ಸೇರಿದಂತೆ ಹಿರಿಯ ಮತ್ತು ಕಿರಿಯ ಶ್ರೇಣಿಯ ಕೆಎಎಸ್‌ ಅಧಿಕಾರಿಗಳು, ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನ್ಯಾಸಕರು, ಪಿಯು ಕಾಲೇಜುಗಳ ಉಪನ್ಯಾಸಕರು ಈ ಪಟ್ಟಿಯಲ್ಲಿದ್ದಾರೆ.

‘ಚುನಾವಣಾ ಪ್ರಕ್ರಿಯೆ ಕುರಿತು ವರ್ಷಕ್ಕೂ ಮೊದಲೇ ತರಬೇತಿ ಆರಂಭಿಸುವ ಪದ್ಧತಿಯನ್ನು ಆಯೋಗ ಕೆಲವು ವರ್ಷಗಳಿಂದ ಅನುಸರಿಸುತ್ತಿದೆ. ಅದೇ ರೀತಿ ಕರ್ನಾಟಕದ ಅಧಿಕಾರಿಗಳಿಗೂ ಮೇ ತಿಂಗಳಲ್ಲಿ ತರಬೇತಿ ಆರಂಭವಾಗುತ್ತಿದೆ. ಮುಂದೆ ಇನ್ನೂ ಕೆಲವು ತಂಡಗಳಲ್ಲಿ ತರಬೇತಿಗೆ ಕಳುಹಿಸಲಾಗುತ್ತದೆ. ಮೊದಲು ತರಬೇತಿ ಪಡೆದವರು ‘ಮಾಸ್ಟರ್‌ ತರಬೇತುದಾರ’ರಾಗಿ ಕೆಳಹಂತದ ಅಧಿಕಾರಿಗಳು, ಸಿಬ್ಬಂದಿಗೆ ತರಬೇತಿ ನೀಡುತ್ತಾರೆ’ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT