ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡರಗಿ: ವೆಂಟಿಲೇಟರ್‌ ಸಿಗದೇ ನಾಲ್ಕು ಮಂದಿ ಕೋವಿಡ್ ಸೋಂಕಿತರ ಸಾವು

ಜಿಮ್ಸ್‌ ಬಿಟ್ಟರೆ ಯಾವ ತಾಲ್ಲೂಕು ಆಸ್ಪತ್ರೆಗಳಲ್ಲೂ ವೆಂಟಿಲೇಟರ್‌ ಸೌಲಭ್ಯ ಇಲ್ಲ
Last Updated 10 ಮೇ 2021, 19:30 IST
ಅಕ್ಷರ ಗಾತ್ರ

ಮುಂಡರಗಿ (ಗದಗ ಜಿಲ್ಲೆ): ವೆಂಟಿಲೇಟರ್‌ ದೊರೆಯದೆ ನಾಲ್ಕು ಮಂದಿ ಕೋವಿಡ್ ಸೋಂಕಿತರು ಮೃತಪಟ್ಟಿರುವ ಘಟನೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ನಡೆದಿದೆ.

ಮುಂಡರಗಿ ತಾಲ್ಲೂಕಿನ ಬಿದರಳ್ಳಿ ಗ್ರಾಮದ ಕಸ್ತೂರೆವ್ವ ಮತ್ತೂರು, ಬೂದಿಹಾಳ ಗ್ರಾಮದ ಕನಕಪ್ಪ ತಳವಾರ, ಮುಂಡರಗಿಯ ಮಾಬುಂಬಿ ಹಾಗೂ ಕೊಪ್ಪಳ ತಾಲ್ಲೂಕಿನ ನೀಲಮ್ಮ ಮೃತ‍ರು.

ಕೊರೊನಾ ಗಂಭೀರ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ ರೋಗಿಗಳ ದೇಹದಲ್ಲಿ ಆಮ್ಲಜನಕದ ಪ್ರಮಾಣ 60ಕ್ಕೆ ಕುಸಿದಿತ್ತು. ಇಲ್ಲಿಯ ವೈದ್ಯರು ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ತಕ್ಷಣ ವೆಂಟಿಲೇಟರ್‌ ವ್ಯವಸ್ಥೆಯುಳ್ಳ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

‘ಮುಂಡರಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ 50 ಆಮ್ಲಜನಕ ಸಹಿತ ಹಾಸಿಗೆಗಳಿವೆ. ಆಸ್ಪತ್ರೆಗೆ ಪ್ರತಿದಿನ 16 ಜಂಬೋ ಸಿಲಿಂಡರ್‌ ಆಮ್ಲಜನಕ ಬೇಕಿದ್ದು, ಜಿಮ್ಸ್‌ನಿಂದ ಪೂರೈಸುತ್ತಾರೆ. ಆದರೆ, ತಾಲ್ಲೂಕು ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ಸೌಲಭ್ಯ ಇಲ್ಲ. ಚಿಕಿತ್ಸೆಗೆ ವೆಂಟಿಲೇಟರ್‌ ಅಗತ್ಯವಿರುವ ರೋಗಿಗಳನ್ನು ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ಕಳುಹಿಸುತ್ತೇವೆ. ಆದರೆ, ‌ಜಿಮ್ಸ್‌ನಲ್ಲೂ ವೆಂಟಿಲೇಟರ್‌ ಬೆಡ್‌ ಖಾಲಿ ಇರಲಿಲ್ಲ. ಇವತ್ತು ಇಲ್ಲಿ ಮೃತಪಟ್ಟ ಸೋಂಕಿತರೆಲ್ಲರೂ ಆಸ್ತಮಾ, ಅಧಿಕ ರಕ್ತದೊತ್ತಡ, ಮಧುಮೇಹ ಹಾಗೂ ಥೈರಾಯ್ಡ್‌ನಂತಹ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದರು’ ಎಂದು ಆಸ್ಪತ್ರೆಯ ವೈದ್ಯ ಡಾ. ಕೀರ್ತಿಶೇಷ ತಿಳಿಸಿದ್ದಾರೆ.

‘ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್‌) ಕೋವಿಡ್‌ ಆಸ್ಪತ್ರೆಯಲ್ಲಿ ಒಟ್ಟು 400 ಹಾಸಿಗೆಗಳಿದ್ದು, ಅವುಗಳಲ್ಲಿ 58 ಬೆಡ್‌ಗಳಿಗೆ ವೆಂಟಿಲೇಟರ್‌ ಸೌಲಭ್ಯ ಇದೆ. ಜಿಮ್ಸ್‌ನ ವೆಂಟಿಲೇಟರ್‌ ಬೆಡ್‌ಗಳೆಲ್ಲವೂ ಭರ್ತಿಯಾಗಿವೆ. ಮುಂಡರಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಕೋವಿಡ್‌ ರೋಗಿಗಳು ವೆಂಟಿಲೇಟರ್‌ ಸಿಗದೇ ಸಾವನ್ನಪ್ಪಿದರು ಎಂಬುದಕ್ಕಿಂತ ಅವರು ಆಸ್ಪತ್ರೆಗೆ ಬಂದು ದಾಖಲಾಗುವ ವೇಳೆಗಾಗಲೇ ಅವರ ದೇಹದಲ್ಲಿ ಆಮ್ಲಜನಕದ ಪ್ರಮಾಣ ತೀವ್ರ ಕಡಿಮೆ ಆಗಿತ್ತು. ಅದರಿಂದಾಗಿಯೇ ರೋಗಿಗಳು ಮೃತಪಟ್ಟಿದ್ದಾರೆ’ ಎಂದು ಡಿಎಚ್‌ಒ ಡಾ. ಸತೀಶ್‌ ಬಸರಿಗಿಡದ ಸ್ಪಷ್ಟಪಡಿಸಿದ್ದಾರೆ.

‘ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸೌಲಭ್ಯ ಇಲ್ಲದ ಕಾರಣದಿಂದಾಗಿ ನಾಲ್ಕು ಮಂದಿ ಸೋಂಕಿತರು ಜೀವ ಕಳೆದುಕೊಂಡಿದ್ದಾರೆ. ಸರ್ಕಾರದ ಬೇಜವಾಬ್ದಾರಿಯಿಂದಲೇ ನಾಲ್ಕು ಜೀವಗಳು ಬಲಿಯಾಗಿವೆ. ಸರ್ಕಾರ ತಕ್ಷಣವೇ ತಾಲ್ಲೂಕು ಆಸ್ಪತ್ರೆಗಳಿಗೂ ವೆಂಟಿಲೇಟರ್‌ ಸೌಲಭ್ಯ ಕಲ್ಪಿಸಬೇಕು. ಅದಕ್ಕೆ ಅಗತ್ಯವಿರುವ ತಾಂತ್ರಿಕ ಸಿಬ್ಬಂದಿಯನ್ನು ನೇಮಿಸಬೇಕು. ಮೃತ ವ್ಯಕ್ತಿಗಳ ಕುಟುಂಬಕ್ಕೆ ಸೂಕ್ತ ಪರಿಹಾರ ವಿತರಿಸಬೇಕು’ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT