ಶುಕ್ರವಾರ, ಅಕ್ಟೋಬರ್ 30, 2020
20 °C
ಆರೋಗ್ಯ ಇಲಾಖೆಗೆ ಸವಾಲಾದ ಕೋವಿಡ್ ಪೀಡಿತರ ಸಂಪರ್ಕ ಪತ್ತೆ

2.44 ಲಕ್ಷ ಮಂದಿಯ ಸೋಂಕಿನ ಮೂಲ ನಿಗೂಢ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದಲ್ಲಿ ವರದಿಯಾದ ಕೋವಿಡ್‌ ಪ್ರಕರಣಗಳಲ್ಲಿ ಶೇ 97.1ರಷ್ಟು ಮಂದಿಗೆ ಸೋಂಕಿನ ಲಕ್ಷಣಗಳು ಬಹಿರಂಗವಾಗಿ ಗೋಚರಿಸಿಲ್ಲ. ಇದರಿಂದಾಗಿ ಕೋವಿಡ್‌ ಪೀಡಿತರಲ್ಲಿ 2.44 ಲಕ್ಷ ಮಂದಿಗೆ ಸೋಂಕಿನ ಮೂಲ ತಿಳಿದಿಲ್ಲ.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏರುಗತಿ ಪಡೆದ ಬಳಿಕ ಸಂಪರ್ಕ ಪತ್ತೆ, ಸಾಂಸ್ಥಿಕ ಕ್ವಾರಂಟೈನ್, ನೇರ ಮತ್ತು ಪರೋಕ್ಷ ಸಂಪರ್ಕಿತರಿಗೆ ಕೋವಿಡ್ ಪರೀಕ್ಷೆ ಸೇರಿದಂತೆ ವಿವಿಧ ಪ್ರಕ್ರಿಯೆಗೆ ಹಿನ್ನಡೆಯಾಗಿದೆ. ಬಹುತೇಕರಲ್ಲಿ ಸೋಂಕಿನ ಲಕ್ಷಣಗಳು ಗೋಚರಿಸದ ಪರಿಣಾಮ ಅವರ ನೇರ ಹಾಗೂ ಪರೋಕ್ಷ ಸಂಪರ್ಕಿತರನ್ನು ಗುರುತಿಸುವುದು ಕೂಡ
ಆರೋಗ್ಯ ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದೆ. 

ರಾಜ್ಯದಲ್ಲಿ ವರದಿಯಾದ ಕೋವಿಡ್ ಪ್ರಕರಣಗಳನ್ನು ಆಧರಿಸಿ (ಅ.9ರವರೆಗೆ) ರಾಜ್ಯ ಕೋವಿಡ್ ವಾರ್‌ ರೂಮ್ ವಿಶ್ಲೇಷಣೆ ನಡೆಸಿದೆ. ಅದರ ಅನುಸಾರ ಹಲವರಿಗೆ ಸೋಂಕು ಹೇಗೆ ತಗುಲಿತು ಎನ್ನುವುದನ್ನು ಈವರೆಗೂ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಸೋಂಕಿತರಲ್ಲಿ 2.75 ಲಕ್ಷ ಮಂದಿ ದೇಶೀಯ ಪ್ರಯಾಣ ಮಾಡಿದ ಇತಿಹಾಸ ಹೊಂದಿದ್ದಾರೆ ಎನ್ನುವುದು ತಿಳಿದುಬಂದಿದೆ.

ಕೋವಿಡ್ ಪೀಡಿತರಲ್ಲಿ 78,563 ಮಂದಿ ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ (ಐಎಲ್ಐ) ಎದುರಿಸಿದ್ದಾರೆ. ರೋಗಿಗಳ ಸಂಪರ್ಕದಿಂದ 56,690 ಮಂದಿ ಸೋಂಕಿತರಾಗಿದ್ದಾರೆ. 941 ಮಂದಿ ಅಂತರರಾಷ್ಟ್ರೀಯ ಪ್ರಯಾಣದ ಇತಿಹಾಸ ಹೊಂದಿದ್ದಾರೆ. 651 ಮಂದಿ ತೀವ್ರ ಉಸಿರಾಟದ ಸಮಸ್ಯೆ (ಸಾರಿ) ಎದುರಿಸಿದ್ದಾರೆ ಎನ್ನುವುದು ವಾರ್‌ ರೂಮ್ ನಡೆಸಿದ ವಿಶ್ಲೇಷಣೆಯಿಂದ ದೃಢಪಟ್ಟಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.