ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಮೌನವೇ ನಿರ್ಲಕ್ಷ್ಯ, ತಾರತಮ್ಯಕ್ಕೆ ಕಾರಣ: ಪ್ರೊ.ಶಾಂತಿಶ್ರೀ ಅಭಿಮತ

ಅಕ್ಕಮಹಾದೇವಿ ಮಹಿಳಾ ವಿವಿ ಘಟಿಕೋತ್ಸವದಲ್ಲಿ ಪ್ರೊ.ಶಾಂತಿಶ್ರೀ ಅಭಿಮತ
Last Updated 19 ಡಿಸೆಂಬರ್ 2022, 13:03 IST
ಅಕ್ಷರ ಗಾತ್ರ

ವಿಜಯಪುರ:ಪ್ರಪಂಚದ ಅರ್ಧದಷ್ಟು ಜನಸಂಖ್ಯೆ ಇರುವ ಮಹಿಳೆಯರು ಮೌನವಾಗಿರುವುದರಿಂದಲೇ ಎಲ್ಲ ರಂಗದಲ್ಲಿ ಅಂಚಿನಲ್ಲಿದ್ದಾರೆ. ತಾರತಮ್ಯಕ್ಕೆ ಒಳಗಾಗುತ್ತಿದ್ದಾರೆ. ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ ಎಂದುಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಾಂತಿಶ್ರೀ ಧೂಳಿಪುಡಿ ಪಂಡಿತ್ ಹೇಳಿದರು.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ 13 ಮತ್ತು 14ನೇ ಘಟಿಕೋತ್ಸವದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು.

ಬದಲಾವಣೆಗಳು ಯಾವಾಗಲೂ ನಿಧಾನ. ಅಂತರರಾಷ್ಟ್ರೀಯಮಟ್ಟದಲ್ಲಿ ಪ್ರಸಿದ್ಧವಾಗಿರುವ ಮತ್ತು ಉನ್ನತ ಶ್ರೇಣಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯವು ತನ್ನ ಮೊದಲ ಮಹಿಳಾ ಉಪಕುಲಪತಿಯಾಗಿ ನನ್ನನ್ನು ನಾಮನಿರ್ದೇಶನ ಮಾಡಲು ಐದು ದಶಕಗಳಿಗಿಂತಲೂ ಹೆಚ್ಚು ಸಮಯ ತೆಗೆದುಕೊಂಡಿತು. ಇದೇ ರೀತಿ ದೇಶದ ಇತರ ಕೇಂದ್ರ, ರಾಜ್ಯ ಮತ್ತು ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪರಿಸ್ಥಿತಿ ಭಿನ್ನವಾಗಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಸಶಕ್ತ ಮಹಿಳೆಯರು ಸಮಾಜಕ್ಕೆ ಸಂಪತ್ತು ಮತ್ತು ಬುದ್ಧಿವಂತಿಕೆಯ ಮೂಲವಾಗಿದ್ದಾರೆ. ಆದಾಗ್ಯೂ, ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಗಳಲ್ಲಿ ಮಹಿಳೆಯರು ಅಲ್ಪ ಪ್ರಮಾಣದ ಉಪಸ್ಥಿತಿಯನ್ನು ಹೊಂದಿದ್ದಾರೆ. ವಿಶ್ವವಿದ್ಯಾಲಯಗಳು, ಕಾರ್ಪೊರೇಟ್‌ಗಳು ಮತ್ತು ಸಂಸತ್ತಿನಲ್ಲಿ ಮಹಿಳೆಯರ ಪ್ರಾತಿನಿದ್ಯ ಹೆಚ್ಚಬೇಕಿದೆ ಎಂದು ಹೇಳಿದರು.

ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಮೌನ ಮತ್ತು ತ್ಯಾಗ ಬಹು ದೊಡ್ಡದಾಗಿದೆ. ಮನೆಯಲ್ಲಿ ಅವರ ಕಠಿಣ ಪರಿಶ್ರಮ, ಕುಟುಂಬ ವ್ಯವಹಾರ ಮತ್ತು ಕೃಷಿ ನಿರ್ವಹಣೆಯು ಯಾವುದೇ ಲಾಭಾಂಶವಿಲ್ಲದ ಕರ್ತವ್ಯವಾಗಿದೆ ಎಂದರು.

ಘಟಿಕೋತ್ಸವದಲ್ಲಿ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿ ತೇರ್ಗಡೆಯಾದ ಒಟ್ಟು 167 ವಿದ್ಯಾರ್ಥಿನಿಯರಿಗೆ 202 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.

ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವ ಪ್ರೊ.ಬಿ.ಎಸ್.ನಾವಿ, ಮೌಲ್ಯಮಾಪನ ಕುಲಸಚಿವ ಪ್ರೊ.ರಮೇಶ ಕೆ.ಘಟಿಕೋತ್ಸವದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT