ಮಂಗಳವಾರ, ಜುಲೈ 27, 2021
21 °C

ದೇವರು ಬಲಭಾಗದಿಂದ ಹೂ ಪ್ರಸಾದ ನೀಡಿದರೆ ಮಾತ್ರ ಲಸಿಕೆ ಪಡೆಯಲು ಬರುವ ಜನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ಖಂಡನೇಹಳ್ಳಿ ಗೊಲ್ಲರಹಟ್ಟಿ ಜನರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ದೇವರ ಅಪ್ಪಣೆ ಪಡೆಯುತ್ತಾರೆ. ಸಾಣಿಕೆರೆಯ ಕೆರೆ ಅಂಗಳದಲ್ಲಿ ದೇವರಿಗೆ ಹರಕೆ ಕಟ್ಟಿಕೊಂಡು ಕೂರುತ್ತಾರೆ. ದೇವರು ಬಲ ಭಾಗಕ್ಕೆ ಹೂ ಪ್ರಸಾದ ನೀಡಿದರೆ ಮಾತ್ರ ಲಸಿಕೆ ಪಡೆಯುತ್ತಾರೆ.

ಪ್ರತಿ ಸೋಮವಾರ ಇಲ್ಲಿ ದೇವರ ಹರಕೆ ಪೂಜೆ ನಡೆಯುತ್ತದೆ. ಸುತ್ತಲಿನ ಗ್ರಾಮಸ್ಥರು ಇಲ್ಲಿಗೆ ಬರುತ್ತಾರೆ. ನಿರೀಕ್ಷೆಯಂತೆ ಪ್ರಸಾದ ಸಿಕ್ಕರಷ್ಟೇ ಲಸಿಕೆ ಹಾಕಿಸಿಕೊಳ್ಳುತ್ತಾರೆ.

‘ಲಸಿಕೆ ಹಾಕಿಸಿಕೊಳ್ಳಲು ದೇವರು ಇನ್ನೂ ಹೇಳಿಕೆ ನೀಡಿಲ್ಲ. ಮುಂದಿನ ಅಮಾವಾಸ್ಯೆಗೆ ಬರುವಂತೆ ಪೂಜಾರಿ ಸೂಚಿಸಿದ್ದಾರೆ. ದೇವರು ಬಲಗಡೆ ಹೂ ನೀಡಿದರಷ್ಟೇ ಲಸಿಕೆ ಹಾಕಿಸಿಕೊಳ್ಳುತ್ತೇವೆ...’ ಎನ್ನುತ್ತಾರೆ ಖಂಡನೇಹಳ್ಳಿ ಗೊಲ್ಲರಹಟ್ಟಿ ಶಾಂತಮ್ಮ. ಚಳ್ಳಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕಿನ ಹಲವೆಡೆ ಇಂತಹ ಮೂಢನಂಬಿಕೆ ಬಲವಾಗಿವೆ.

ಲಸಿಕೆ ಹಾಕಿಸಿಕೊಂಡರಷ್ಟೇ ಪಡಿತರ

‘ನಮ್ಮ ಕಾಲೊನಿಯಲ್ಲಿ ಯಾರೂ ಲಸಿಕೆ ಹಾಕಿಸಿಕೊಂಡಿರಲಿಲ್ಲ. ಲಸಿಕೆ ಹಾಕಿಸಿಕೊಳ್ಳದಿದ್ದರೆ ಬಿಪಿಎಲ್‌ ಕಾರ್ಡ್‌ಗೆ ಅಕ್ಕಿ ಕೊಡೋದಿಲ್ಲ ಎಂದು ಹೇಳಿದರು. ಹೆಬ್ಬೆಟ್ಟು ಕೊಟ್ಟುಬಂದು 10 ದಿನ ಕಳೆದರೂ ಅಕ್ಕಿ ಕೊಟ್ಟಿರಲಿಲ್ಲ. ಹೀಗಾಗಿ ನಮ್ಮ ಕಾಲೊನಿಯ ಹಿರಿಯರೆಲ್ಲರೂ ಒಟ್ಟಿಗೇ ಲಸಿಕೆ ಹಾಕಿಸಿಕೊಂಡರು’ ಎನ್ನುತ್ತಾರೆ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಅಂಜನಾನಗರ ನಿವಾಸಿ ಕಾಳಾಚಾರ್.

‘ಸುತ್ತಮುತ್ತಲಿನ ಮೂರು ಹಳ್ಳಿಯವರಿಗೆ ಒಂದೇ ಸೊಸೈಟಿಯಲ್ಲಿ ಅಕ್ಕಿ ಕೊಡೋದು. ಮೂರು ಹಳ್ಳಿಯ ಜನಕ್ಕೂ ಹೀಗೇ ಬೆದರಿಸಿ, ಲಸಿಕೆ ಹಾಕಿಸಿದ್ದರು. ಸೊಸೈಟಿ ಮಾತ್ರವಲ್ಲ, ಹಾಲಿನ ದುಡ್ಡು ಬಟವಾಡೆ ಮಾಡುವುದನ್ನು ತಡೆಹಿಡಿದಿದ್ದರು. ಲಸಿಕೆ ಹಾಕಿಸಿಕೊಂಡಿದ್ದವರಿಗೆ ಮಾತ್ರ ಹಾಲಿನ ದುಡ್ಡು ಬಟವಾಡೆ ಮಾಡಿದ್ದರು. ಹೀಗಾಗಿ ನಮ್ಮ ಕಾಲೊನಿಯ ಎಲ್ಲಾ ಹಿರಿಯರೂ ಲಸಿಕೆ ಹಾಕಿಸಿಕೊಂಡಿದ್ದಾರೆ’ ಎಂದು ಅವರು ವಿವರಿಸಿದರು.

ಈ ಬಗ್ಗೆ ವಿಚಾರಿಸಿದಾಗ ನ್ಯಾಯಬೆಲೆ ಅಂಗಡಿಯವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು