ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ರೋಹಿಣಿ ಅರಸಿಬಂದ ರಂಗ ಪ್ರಶಸ್ತಿ

ನಿರಂತರ ಆರು ದಶಕಗಳ ಕಾಲ ಕಲಾ ಸೇವೆ ನೀಡಿದ ಕಲಾವಿದೆ
Last Updated 6 ಫೆಬ್ರುವರಿ 2021, 2:08 IST
ಅಕ್ಷರ ಗಾತ್ರ

ಮಂಗಳೂರು: ‘ಕಲೆಯನ್ನು ಶ್ರದ್ಧೆಯಿಂದ ಸ್ವೀಕರಿಸಿದರೆ, ಅದರ ಪ್ರತಿಫಲ ಖಂಡಿತವಾಗಿ ಸಿಕ್ಕೇ ಸಿಗುತ್ತದೆ. ಕೊಂಚ ತಡವಾಗಬಹುದು. ಆದರೆ, ಕಾಯುವ ತಾಳ್ಮೆ ಕಲಾವಿದನಲ್ಲಿರಬೇಕು. ಪ್ರಶಸ್ತಿಗಾಗಿ ಪ್ರದರ್ಶನವಲ್ಲ. ಪಾತ್ರದೊಳಗೆ ಒಂದಾಗುವ ತಾದಾತ್ಮ್ಯತೆ ಕಲಾವಿದನಲ್ಲಿರಬೇಕು’ ಎನ್ನುತ್ತ ಮಾತಿಗಾರಂಭಿಸಿದರು ಹಿರಿಯ ಕಲಾವಿದೆ ರೋಹಿಣಿ ಜಗರಾಂ.

ನಾಟಕ ಅಕಾಡೆಮಿಯ ವಾರ್ಷಿಕ ರಂಗ ಪ್ರಶಸ್ತಿಗೆ ಆಯ್ಕೆಯಾದ ಸಂಭ್ರಮದಲ್ಲಿ ‘ಪ್ರಜಾವಾಣಿ’ ಅವರನ್ನು ಸಂಪರ್ಕಿಸಿದಾಗ, ‘ಕಲೆಯನ್ನು ಗುರುತಿಸಿ ಸರ್ಕಾರ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಖುಷಿಯಾಗಿದೆ. ಕಲಾವಿದರಿಗೆ ಕಲೆಯಲ್ಲಿ ಶ್ರದ್ಧೆ–ಭಕ್ತಿ ಇದ್ದರೆ, ಎಂದಾದರೂ ಒಮ್ಮೆ ಅವರು ವಿಜಯಿ ಆಗೇ ಆಗುತ್ತಾರೆ’ ಎಂದರು.

ರೋಹಿಣಿ ಅವರ ಶರೀರಕ್ಕೆ ಮುಪ್ಪು ಆವರಿಸುತ್ತಿದೆ, ಆದರೆ, ಅವರೊಳಗಿನ ಕಲೆ ಇನ್ನೂ ಯೌವ್ವನೆ. 77ರ ಹರೆಯದ ಅವರು ಈಗಲೂ ನಾಟಕ, ಚಲನಚಿತ್ರಗಳಲ್ಲಿ ಪಾತ್ರ ಮಾಡುತ್ತಾರೆ. ಮಂಗಳೂರು ಸಮೀಪದ ಬಲ್ಲಾಳಬಾಗ್‌ನ ದಿವಂಗತ ರಘುರಾಂ ಮತ್ತು ಕಮಲಾ ದಂಪತಿ ಪುತ್ರಿ ರೋಹಿಣಿ, ಒಂಬತ್ತನೇ ವಯಸ್ಸಿಗೆ ಗೆಜ್ಜೆ ಕಟ್ಟಿದವರು. ಮಾಸ್ಟರ್ ವಿಠಲ್ ಅವರಲ್ಲಿ ಭರತನಾಟ್ಯ ಕಲಿತು, ರಂಗ ಪ್ರವೇಶಿಸಿದ ಅವರು, ರಾಜ್ಯ, ಹೊರರಾಜ್ಯಗಳಲ್ಲಿ ಕಲಾ ಪ್ರದರ್ಶನ ನೀಡಿದ್ದಾರೆ. ಕಲಿತ ಶಾಸ್ತ್ರೀಯ ನೃತ್ಯ ವಿದ್ಯೆಯನ್ನು ಇತರರಿಗೆ ಕಲಿಸಿ ಮನೆಯನ್ನೇ ಕಲಾಶಾಲೆಯನ್ನಾಗಿಸಿದ್ದು ಅವರ ಕಲಾ ಜೀವನದ ಹೆಮ್ಮೆಯ ಸಂಗತಿ.

ಈ ನಡುವೆ ರಂಗಭೂಮಿ ಅವರನ್ನು ಸೆಳೆಯಿತು. ‘ಹೌದಾದ್ರೇ ಹೌದೆನ್ನಿ’ ನಾಟಕದಿಂದ ಬಣ್ಣದ ಬದುಕು ತೆರೆದುಕೊಂಡಿತು. ನಾಟ್ಯರಾಣಿ ಶಾಂತಲಾ ಅವರ ಅಚ್ಚುಮೆಚ್ಚಿನ ಪಾತ್ರ. ಚಕ್ರವ್ಯೂಹ, ಈರ್ ದೂರ ಮೊದಲಾದ 1000ಕ್ಕೂ ಹೆಚ್ಚು ತುಳು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ವಿದೇಶಗಳಲ್ಲೂ ಪ್ರದರ್ಶನ ನೀಡಿದ್ದಾರೆ. ಹಿನ್ನೆಲೆ ಗಾಯಕಿಯಾಗಿ 1500ಕ್ಕೂ ಹೆಚ್ಚು ನಾಟಕಗಳಿಗೆ ಕಂಠದಾನ ಮಾಡಿದ್ದಾರೆ. ರಸಮಂಜರಿ ಕಚೇರಿಗಳನ್ನು ನಡೆಸಿದ್ದಾರೆ. ಆಕಾಶವಾಣಿಯಲ್ಲಿ ಅವರ ಗಾನಲಹರಿ ಬಿತ್ತರಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT