ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹು ಸಂಸ್ಕೃತಿ ನಾಶದ ಪ್ರವೃತ್ತಿ ಹೆಚ್ಚುತ್ತಿದೆ: ಬರಗೂರು ರಾಮಚಂದ್ರಪ್ಪ

ಸಾಹಿತಿ ಬರಗೂರು ರಾಮಚಂದ್ರಪ್ಪ ಬೇಸರ l ಅಲಿಡಾ ಗೆವಾರ, ಎಸ್ತಿಫಾನಿಯಾಗೆ ನಾಗರಿಕ ಸನ್ಮಾನ
Last Updated 19 ಜನವರಿ 2023, 22:49 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದಲ್ಲಿ ಬಹುಮುಖದ ಆಶಯದಲ್ಲಿ ಸರ್ವಾಧಿಕಾರ ನಡೆಯುತ್ತಿದೆ. ಹುಸಿ ಸಂಸ್ಕೃತಿಯನ್ನೇ ನಿಜ ಸಂಸ್ಕೃತಿ ಎಂದು ಮೆರೆಯಲಾಗುತ್ತಿದೆ. ಬಹುತ್ವ ಪ್ರತಿಪಾದಿಸುವ ಈ ದೇಶದಲ್ಲಿ ಬಹು ಸಂಸ್ಕೃತಿಯನ್ನು ನಾಶ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಬೇಸರ ವ್ಯಕ್ತಪಡಿಸಿದರು.

ವಿವಿಧ ಸಂಘಟನೆಗಳ ಸೌಹಾರ್ದ ಸಮಿತಿ ನಗರದಲ್ಲಿ ಗುರುವಾರ ಹಮ್ಮಿಕೊಂಡ ಕ್ಯೂಬಾ ಸೌಹಾರ್ದತೆಯ ಸಮಾರಂಭದಲ್ಲಿ ಚೆ ಗೆವಾರ ಅವರ ಪುತ್ರಿ ಡಾ. ಅಲಿಡಾ ಗೆವಾರ ಮತ್ತು ಮೊಮ್ಮಗಳು ಎಸ್ತಿಫಾನಿಯಾ ಅವರಿಗೆ ನಾಗರಿಕ ಸನ್ಮಾನ ಮಾಡಲಾಯಿತು.

‘ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ನಾಗಿದ್ದ ಅವಧಿಯಲ್ಲಿ ‘ಸಾಮಾಜಿಕ ಚಿಂತನ ಮಾಲೆ’ ಎಂಬ ಕೃತಿಯನ್ನು ಹೊರತರಲಾಗಿತ್ತು. ಚೆ ಗೆವಾರ ಅವರ ಕುರಿತಾದ ಲೇಖನವೂ ಅದರಲ್ಲಿತ್ತು. ಅದು ಪ್ರಜಾಪ್ರಭುತ್ವದ ಸ್ವಾತಂತ್ರ್ಯ. ಈಗ ಆ ರೀತಿಯ ಲೇಖನ ಪ್ರಕಟಿಸಿದರೆ ದೇಶದ್ರೋಹಿಗಳಾಗುತ್ತೇವೆ. ಚೆ ಗೆವಾರ ಅವರು ಅಗಲಿ 55 ವರ್ಷಗಳಾದರೂ ಜಗತ್ತು ಅವರ ಕ್ರಾಂತಿಯನ್ನು ನೆನಪಿಸಿಕೊಳ್ಳುತ್ತದೆ. ಟಿ ಶರ್ಟ್, ಟೋಪಿ, ಹಚ್ಚೆ ಸೇರಿ ವಿವಿಧೆಡೆ ಅವರ ಭಾವಚಿತ್ರವನ್ನು ಕಾಣಬಹುದು. ಅವರು ಜನ ಸಂಸ್ಕೃತಿಯನ್ನು ಪ್ರತಿಪಾದಿಸಿದ್ದರು. ಅವರು ಆಶಾವಾದಕ್ಕೆ ಪ್ರೇರಣೆ ಆಗಿದ್ದಾರೆ’ ಎಂದು ಬರಗೂರು ರಾಮಚಂದ್ರಪ್ಪ ಹೇಳಿದರು.

‘ಸಮಾನತೆ, ಸೌಹಾರ್ದತೆ ಪರವಾದ ಬದ್ಧತೆ ಭಾರತಕ್ಕೆ ಬೇಕು. ಜಾತಿವಾದ, ಕೋಮುವಾದದ ವಿರುದ್ಧದ ಹೋರಾಟಕ್ಕೆ ಚೆ ಗೆವಾರ ಅವರೇ ನಮ್ಮ ಚೇತನ’ ಎಂದರು.

ಚಿಂತಕ ಜಿ. ರಾಮಕೃಷ್ಣ, ‘ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶ್ವ ನಾಯಕ ಎಂದು ಉಲ್ಲೇಖಿಸುವವರು ಭ್ರಮಾ ಲೋಕದಲ್ಲಿ ಬದುಕುತ್ತಿದ್ದಾರೆ. ವಿಶ್ವದಲ್ಲಿ ಯಾರಾದರೂ ವಿಶ್ವ ನಾಯಕ ಇದ್ದರೆ, ಅದು ಕೇವಲ ಚೆ ಗೆವಾರ ಮಾತ್ರ. ಅವರ ಕ್ರಾಂತಿಯ ಪಾಠ ನಮಗೆ ಬೇಕಾಗಿದೆ. ನಮ್ಮ ದೇಶ 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆ ಸಾಧಿಸಲಿದೆ ಎನ್ನುವವರಿಗೆ ಇದರ ಮೌಲ್ಯವನ್ನು ರೂಪಾಯಿಗಳಲ್ಲಿ ಹೇಳಲು ಬರುತ್ತಿಲ್ಲ. ಯಾರನ್ನು ದ್ವೇಷಿಸುವುದಿಲ್ಲ ಎಂದು ಹೇಳುತ್ತ ಎಲ್ಲರನ್ನೂ ದ್ವೇಷ ಮಾಡಲಾಗುತ್ತಿದೆ. ನಮಗೆ ಚೆ ಗೆವಾರ ಅವರ ವಿಶ್ವಮಾನವ ಕಲ್ಪನೆ ಅಗತ್ಯ’ ಎಂದು ಹೇಳಿದರು.

ನ್ಯಾಯದ ವಿರುದ್ಧ ಒಗ್ಗಟ್ಟಿನ ಹೋರಾಟ: ಡಾ. ಅಲಿಡಾ ಗೆವಾರ
‘ಚೆ ಗೆವಾರ ಹಾಗೂ ಫಿಡೆಲ್ ಕ್ಯಾಸ್ಟ್ರೊ ಅವರು ಹೇಳಿದಂತೆ ಜನರು ಒಗ್ಗಟ್ಟಾಗಿ ಹೋರಾಡಿದಲ್ಲಿ ಅನ್ಯಾಯ ನಡುಗಿ ಹೋಗುತ್ತದೆ. ಜನಸಾಮಾನ್ಯರಿಗೆ ನಮ್ಮ ಮೌಲ್ಯಗಳನ್ನು ತಲುಪಿಸುವುದು ಅತ್ಯಂತ ಅಗತ್ಯ. ಕೋವಿಡ್ ಕಾಣಿಸಿಕೊಂಡ ಬಳಿಕ ನಮ್ಮಲ್ಲಿ ಹಲವು ಸಾಮಾಜಿಕ ಬದಲಾವಣೆಯಾಗಿದ್ದು, ಮಾನವೀಯತೆಯ ಪಾಠವನ್ನು ಕಲಿತಿದ್ದೇವೆ. ಕೋವಿಡ್‌ನಿಂದಾಗಿ ಕ್ಯೂಬಾ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಸಂಕಷ್ಟವನ್ನು ಅನುಭವಿಸಿತು’ ಎಂದು ಮಕ್ಕಳ ವೈದ್ಯೆಯೂ ಆಗಿರುವ ಡಾ. ಅಲಿಡಾ ಗೆವಾರ ತಿಳಿಸಿದರು.

‘ಕ್ಯೂಬಾದಲ್ಲಿ ವೈದ್ಯ ವೃತ್ತಿಯನ್ನು ಮಾನವೀಯ ಸೇವೆಯೆಂದು ಪರಿಗಣಿಸಲಾಗಿದೆ. ಅಮೆರಿಕಾದ ನಿರ್ಬಂಧಗಳ ನಡುವೆಯೂ ಲಸಿಕೆಯನ್ನು ಆವಿಷ್ಕರಿಸಿ, ಹೋರಾಟ ನಡೆಸಲಾಯಿತು. ಚೆ ಗೆವಾರ ಅವರು ಗೆಲ್ಲುವವರೆಗೂ ಹೋರಾಡುತ್ತಲೇ ಇರೋಣ ಎಂದು ಹೇಳಿದ್ದಾರೆ. ಇದನ್ನು ಕ್ಯೂಬಾದ ಜನರು ಪಾಲಿಸುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT