ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಂಡರ್ ಅಕ್ರಮದಲ್ಲಿ ₹ 34 ಕೋಟಿ ಕಿಕ್ ಬ್ಯಾಕ್: ಸರ್ಕಾರದ ವಿರುದ್ಧ ಉಗ್ರಪ್ಪ ಕಿಡಿ

Last Updated 11 ಸೆಪ್ಟೆಂಬರ್ 2021, 22:00 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ಕಾರಿ ಉಪಕರಣಾಗಾರ ಹಾಗೂ ತರಬೇತಿ ಕೇಂದ್ರದ (ಜಿಟಿಟಿಸಿ) ಟೆಂಡರ್‌ನಲ್ಲಿ ಅಕ್ರಮ ನಡೆದಿದ್ದು, ಸುಮಾರು ₹ 34 ಕೋಟಿ ಕಿಕ್ ಬ್ಯಾಕ್ ಪಡೆಯಲಾಗಿದೆ’ ಎಂದು ಕಾಂಗ್ರೆಸ್‌ ನಾಯಕ ವಿ.ಎಸ್‌. ಉಗ್ರಪ್ಪ ಆರೋಪಿಸಿದರು.

ಪಕ್ಷದ ಮತ್ತೊಬ್ಬ ನಾಯಕ ಎಚ್.ಎಂ. ರೇವಣ್ಣ ಜತೆ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಉನ್ನತ ಶಿಕ್ಷಣ ಸಚಿವಾಲಯ ವ್ಯಾಪ್ತಿಯಲ್ಲಿ ಬರುವ ಜಿಟಿಟಿಸಿಯಲ್ಲಿ ಉಪಕರಣಗಳ ಖರೀದಿ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಅವರ ಅನುಮತಿ ಮೇರೆಗೆ ನಡೆದಿದೆ. ಈ ವಿಚಾರವಾಗಿ ಸಿಬಿಐ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

‘ರಾಜಾಜಿನಗರ ಕೈಗಾರಿಕಾ ಪ್ರದೇಶದಲ್ಲಿರುವ ಜಿಟಿಟಿಸಿಯ ವ್ಯವಸ್ಥಾಪಕ ನಿರ್ದೇಶಕ, ಆಡಳಿತ ವ್ಯವಸ್ಥಾಪಕ ಮತ್ತು ಖರೀದಿ ಅಧಿಕಾರಿ, ಸಚಿವರ ಗಮನದಲ್ಲೇ ₹ 61.52 ಕೋಟಿ ಮೊತ್ತದ ಎಂಟು ಟೆಂಡರ್ ಕರೆದಿದ್ದಾರೆ. ಖರೀದಿಗೆ ಕಾರ್ಯಾದೇಶ ನೀಡಿದ ಉಪಕರಣಗಳ ಮಾರುಕಟ್ಟೆ ಮೊತ್ತ ₹ 27.15 ಕೋಟಿ ಮಾತ್ರ. ಈ ಟೆಂಡರ್‌ಗಳಲ್ಲಿ ಬಹುತೇಕ ಬಿಡ್‌ಗಳನ್ನು ಅಕ್ವಾ ಟೆಕ್ವಿಪ್ಮೆಂಟ್ಸ್‌ಗೆ ನೀಡಲಾಗಿದೆ. ಬಿಡ್ ನಂ. 7 ಅನ್ನು ರವಿತೇಜ ಎಲೆಕ್ಟೋಸಿಸ್ಟಮ್ಸ್‌ಗೆ ನೀಡಲಾಗಿದ್ದು, ಇದು ಅಕ್ವಾ ಟೆಕ್ವಿಪ್ಮೆಂಟ್ಟ್‌ನ ಸ್ನೇಹಿತರಾಗಿದ್ದಾರೆ. ಮೊದಲ ಬಿಡ್ ಅನ್ನು ಲಾರೆನ್ಸ್ ಅಂಡ್ ಮೇಯೋ ಅವರಿಗೆ ನೀಡಿದ್ದಾರೆ. ಈ ಟೆಂಡರ್‌ನಲ್ಲಿ ಭಾಗಿಯಾಗಿರುವವರು ಉತ್ಪನ್ನ ತಯಾರಕರಲ್ಲ, ಸರಬರಾಜು ಏಜೆನ್ಸಿಗಳೂ ಅಲ್ಲ’ ಎಂದರು.

‘ಪಾರದರ್ಶಕ ಟೆಂಡರ್ ಕಾಯ್ದೆ ಪ್ರಕಾರ ₹ 1 ಕೋಟಿಗೂ ಹೆಚ್ಚು ಮೊತ್ತ‌ದ ಟೆಂಡರ್‌ಗೆ ಪೂರ್ವಭಾವಿ ಸಭೆ ಕರೆಯಬೇಕು. ಯಾವುದೇ ಪೂರ್ವಭಾವಿ ಸಭೆ ನಡೆಸಿಲ್ಲ. 2019ರಲ್ಲಿ ತಲಾ ₹ 28.98 ಲಕ್ಷಕ್ಕೆ 5 ಸಿಎಂಸಿ ಯಂತ್ರಗಳನ್ನು ಖರೀದಿಸಿದ್ದರೆ, ಅದೇ ಯಂತ್ರಗಳನ್ನು 2021ರಲ್ಲಿ ತಲಾ ₹ 31.27 ಲಕ್ಷ ನೀಡಿ 6 ಖರೀದಿಸಲಾಗಿದೆ. ಮಾರ್ಚ್‌ನಲ್ಲಿ ₹ 99.12 ಲಕ್ಷದಂತೆ 4 ಯಂತ್ರ ಖರೀದಿಸಲಾಗಿದೆ. ಹೀಗೆ ಒಂದು ಯಂತ್ರವನ್ನು ಮೂರು ಪಟ್ಟು ಬೆಲೆಯಲ್ಲಿ ಖರೀದಿಸಲಾಗಿದೆ’ ಎಂದು ಆರೋಪಿಸಿದರು.

‘ಪಾರದರ್ಶಕ ಕಾಯ್ದೆ ಪ್ರಕಾರ ಒಂದು ಅಥವಾ ಎರಡು ಕಂಪನಿಗಳು ಟೆಂಡರ್‌ನಲ್ಲಿ ಭಾಗವಹಿಸಿದ್ದರೆ, ಅದನ್ನು ರದ್ದುಗೊಳಿಸಿ ಮರು ಟೆಂಡರ್ ಕರೆಯಬೇಕು. 8 ಟೆಂಡರ್‌ಗಳಲ್ಲಿ 2 ಕಂಪನಿಗಳು ಭಾಗವಹಿಸಿದ್ದರೂ ಮರು ಟೆಂಡರ್ ಕರೆಯಲಿಲ್ಲ‘ ಎಂದರು.

ಲ್ಯಾಪ್‌ಟಾಪ್ ಖರೀದಿ: ‘ಎಸ್‌ಸಿ, ಎಸ್‌ಟಿ ಮಕ್ಕಳಿಗಾಗಿ ಎಸಿಆರ್ ಕಂಪನಿಯಿಂದ ತಲಾ ₹ 14,500ಕ್ಕೆ 28 ಸಾವಿರ ಲ್ಯಾಪ್‌ಟಾಪ್ ಖರೀದಿಸಿದ್ದಕ್ಕೆ ಯಡಿಯೂರಪ್ಪ ಹೋರಾಟ ಮಾಡಿದ್ದರು. ಆದರೆ, ಅಶ್ವತ್ಥನಾರಾಯಣ ಅದೇ ಎಸಿಆರ್ ಕಂಪನಿಯಿಂದ ಅದೇ ಲ್ಯಾಪ್‌ಟಾಪ್‌ನ್ನು ತಲಾ ₹ 28 ಸಾವಿರ ನೀಡಿ 1.10 ಲಕ್ಷ ಲ್ಯಾ‍ಪ್‌ಟಾಪ್ ಖರೀದಿಸಿದ್ದಾರೆ’ ಎಂದು ಎಚ್‌.ಎಂ. ರೇವಣ್ಣ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT