ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಸ ಕಲಾವಿದ ಸಾವು: ಮೂವರಿಗೆ ನ್ಯಾಯಾಂಗ ಬಂಧನ

‘ಲವ್‌ ಯೂ ರಚ್ಚು’ ಚಿತ್ರೀಕರಣದ ವೇಳೆ ಅವಘಡ
Last Updated 10 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಬಿಡದಿ (ರಾಮನಗರ): ‘ಲವ್‌ ಯೂ ರಚ್ಚು’ ಸಿನಿಮಾ ಚಿತ್ರೀಕರಣದ ವೇಳೆ ಸಾಹಸ ಕಲಾವಿದ ವಿವೇಕ್ ಅವರ ಸಾವು ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದು, ಉಳಿದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಚಿತ್ರದ ನಿರ್ದೇಶಕ ಶಂಕರ್‌ ರಾಜು, ಸಾಹಸ ನಿರ್ದೇಶಕ ವಿನೋದ್‌ಕುಮಾರ್ ಹಾಗೂ ಕ್ರೇನ್‌ ಚಾಲಕ ಮಹದೇವ್‌ ಎಂಬುವರನ್ನು ಮಂಗಳವಾರ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಆರೋಪಿಗಳನ್ನು ಆ. 24ರವರೆಗೆ ನ್ಯಾಯಾಂಗದ ವಶಕ್ಕೆ ಕೋರ್ಟ್‌ ನೀಡಿದೆ ಎಂದು ರಾಮನಗರ ಎಸ್ಪಿ ಗಿರೀಶ್‌ ತಿಳಿಸಿದರು. ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ ಹಾಗೂ ಪ್ರೊಡಕ್ಷನ್ ಮ್ಯಾನೇಜರ್‌ ಫರ್ನಾಂಡಿಸ್‌ ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಜಮೀನಿನ ಮಾಲೀಕ ಪುಟ್ಟರಾಜು ಎಂಬುವರು ಚಿತ್ರತಂಡಕ್ಕೆ ಜಮೀನು ಬಿಟ್ಟುಕೊಟ್ಟಿದ್ದರು. ಆದರೆ ಅನುಮತಿ ಪಡೆಯಬೇಕಾದದ್ದು ಚಿತ್ರತಂಡದ ಜವಾಬ್ದಾರಿ. ಹೀಗಾಗಿ ರೈತನ ವಿರುದ್ಧ ದೂರು ದಾಖಲಿಸಿಲ್ಲ. ಘಟನೆ ಸಂದರ್ಭ ಮ್ಯಾನೇಜರ್‌ ಸ್ಥಳದಲ್ಲೇ ಇದ್ದರು. ನಿರ್ಮಾಪಕರು ಅಲ್ಲಿರಲಿಲ್ಲ ಎಂದು ಎಸ್ಪಿ ಮಾಹಿತಿ ನೀಡಿದರು.ಅವಘಡ ನಡೆದ ಸ್ಥಳವನ್ನು ಬೆಸ್ಕಾಂ ಅಧಿಕಾರಿಗಳು ಮಂಗಳವಾರ ಪರಿಶೀಲಿಸಿದರು.

ಗೃಹ ಸಚಿವರಿಂದ ಕ್ರಮದ ಭರವಸೆ: ಗೃಹಸಚಿವ ಆರಗ ಜ್ಞಾನೇಂದ್ರ ಘಟನೆ ಕುರಿತು ಪ್ರತಿಕ್ರಿಯಿಸಿ ‘ಇಂತಹ ಘಟನೆ ನಡೆದಿರುವುದು ದುರದೃಷ್ಟಕರ. ಚಿತ್ರತಂಡ ಮುನ್ನೆಚ್ಚರಿಕೆ ಕೈಗೊಳ್ಳದ ಕಾರಣ ದುರಂತ ಸಂಭವಿಸಿದೆ. ಚಿತ್ರೀಕರಣಕ್ಕೆ ಅನುಮತಿ ಕಡ್ಡಾಯಗೊಳಿಸಿ, ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ತದ್ವಿರುದ್ಧ ಹೇಳಿಕೆ?: ಘಟನೆಯಲ್ಲಿ ಗಾಯಗೊಂಡಿರುವ ಸಾಹಸ ಕಲಾವಿದ ರಂಜಿತ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಘಟನೆ ಕುರಿತು ಅವರ ಹಾಗೂ ಚಿತ್ರದ ನಾಯಕ ಅಜಯ್‌ ರಾವ್‌ ಹೇಳಿಕೆಗಳು ತದ್ವಿರುದ್ಧವಾಗಿವೆ.

ಘಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅಜಯ್‌ ‘ಅವಘಡ ನಡೆದಾಗ ನಾನು ಅಲ್ಲಿಂದ ಸುಮಾರು 200 ಮೀಟರ್ ದೂರದಲ್ಲಿದ್ದೆ. ಸದ್ದು ಕೇಳಿ ಸ್ಥಳಕ್ಕೆ ಓಡಿ ಬಂದೆ. ಗಾಯಾಳುವನ್ನು ಸಾಗಿಸಲು ನೆರವಾದೆ’ ಎಂದು ಹೇಳಿದ್ದರು.

ಈ ಬಗ್ಗೆ ರಂಜಿತ್‌ ಪ್ರತಿಕ್ರಿಯಿಸಿ ‘ಚಿತ್ರೀಕರಣದಲ್ಲಿ ಅಜಯ್‌ ಅವರೂ ಸ್ಥಳದಲ್ಲೇ ಇದ್ದರು. ವಿವೇಕ್‌ ವಿದ್ಯುತ್‌ ಶಾಕ್‌ನಿಂದ ಕೆಳಗೆ ಬಿದ್ದಾಗ ಕೇವಲ 15 ಮೀಟರ್ ದೂರದಲ್ಲೇ ನಿಂತಿದ್ದರು. ಆದರೆ ನೆರವಿಗೆ ಧಾವಿಸಲಿಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT