ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿಯಲ್ಲಿ ಟಿಕೆಟ್‌ ಮಿತಿ; ಪ್ರವಾಸಿಗರಿಗೆ ಫಜೀತಿ

ಸ್ಮಾರಕ ನೋಡಲಾಗದೆ ನಿರಾಶರಾಗಿ ವಾಪಸಾಗುತ್ತಿರುವ ನೂರಾರು ಪ್ರವಾಸಿಗರು
Last Updated 9 ನವೆಂಬರ್ 2020, 7:02 IST
ಅಕ್ಷರ ಗಾತ್ರ

ಹೊಸಪೇಟೆ: ಇಲ್ಲಿನ ಹಂಪಿ ಸ್ಮಾರಕಗಳ ವೀಕ್ಷಣೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು (ಎಎಸ್‌ಐ) ಟಿಕೆಟ್‌ಗಳಿಗೆ ಮೀತಿ ಹೇರಿರುವುದರಿಂದ ಸ್ಮಾರಕಗಳನ್ನು ನೋಡಲಾಗದೆ ನಿತ್ಯ ನೂರಾರು ಪ್ರವಾಸಿಗರು ನಿರಾಶರಾಗಿ ಹಿಂತಿರುಗುತ್ತಿದ್ದಾರೆ.

ಕೋವಿಡ್‌–19 ಕಾರಣಕ್ಕಾಗಿ ಎಎಸ್‌ಐ ಆನ್‌ಲೈನ್‌ ಟಿಕೆಟ್‌ ಖರೀದಿ ವ್ಯವಸ್ಥೆ ಜಾರಿಗೆ ತಂದಿದೆ. ದಿನಕ್ಕೆ ಎರಡು ಸಾವಿರ ಟಿಕೆಟ್‌ ಮಾರಾಟಕ್ಕಷ್ಟೇ ವ್ಯವಸ್ಥೆ ಮಾಡಿದೆ. ಮೊದಲು ಟಿಕೆಟ್‌ ಖರೀದಿಸಿದ ಎರಡು ಸಾವಿರ ಜನರಷ್ಟೇ ಸ್ಮಾರಕಗಳಿಗೆ ಭೇಟಿ ನೀಡಬಹುದು. ಅದರ ನಂತರದವರಿಗೆ ಟಿಕೆಟ್‌ ಸಿಗುವುದಿಲ್ಲ. ಟಿಕೆಟ್‌ ಇಲ್ಲವೆಂದರೆ ಸ್ಮಾರಕಗಳಿಗೂ ಪ್ರವೇಶವಿಲ್ಲ.

ಹಂಪಿಯಲ್ಲಿನ ಎಎಸ್‌ಐ ವಸ್ತು ಸಂಗ್ರಹಾಲಯ, ಸಪ್ತಸ್ವರ ಮಂಟಪ, ಕಲ್ಲಿನ ರಥವಿರುವ ವಿಜಯ ವಿಠಲ ದೇವಸ್ಥಾನ, ಕಮಲ ಮಹಲ್‌, ಗಜಶಾಲೆ ಇರುವ ಪರಿಸರಕ್ಕೆ ಭೇಟಿ ನೀಡಬೇಕಾದರೆ ಟಿಕೆಟ್‌ ಪಡೆಯುವುದು ಕಡ್ಡಾಯ. ಆದರೆ, ಟಿಕೆಟ್‌ ಸಿಗದೆ ನಿತ್ಯ ಅಸಂಖ್ಯ ಜನ ಪ್ರಮುಖ ಸ್ಮಾರಕಗಳನ್ನು ನೋಡದೆ ವಾಪಸಾಗುತ್ತಿದ್ದಾರೆ.

ಕೌಂಟರ್‌ ಬದಲು ಆನ್‌ಲೈನ್‌ನಲ್ಲೇ ಟಿಕೆಟ್‌ ಖರೀದಿಸುವ ವ್ಯವಸ್ಥೆ ಜಾರಿಗೆ ತಂದಿರುವುದರಿಂದ ಸ್ಮಾರ್ಟ್‌ಫೋನ್‌ ಇದ್ದವರಷ್ಟೇ ಹಂಪಿ ನೋಡುವಂತಾಗಿದೆ. ಖರೀದಿಸಿದ ಟಿಕೆಟ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಅದನ್ನು ಸ್ಮಾರಕದ ಪ್ರವೇಶ ದ್ವಾರದಲ್ಲಿ ಭದ್ರತಾ ಸಿಬ್ಬಂದಿಗೆ ತೋರಿಸಿ ಒಳಹೋಗಬೇಕು. ಆದರೆ, ಸ್ಮಾರ್ಟ್‌ಫೋನ್‌ ಇಲ್ಲದವರು ಅಸಹಾಯಕರಾಗಿ ಹಿಂತಿರುಗುತ್ತಿದ್ದಾರೆ.

ಅದರಲ್ಲೂ ಗ್ರಾಮೀಣ ಪ್ರದೇಶದವರು ಹೆಚ್ಚಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಒಂದುವೇಳೆ ಸ್ಮಾರ್ಟ್‌ಫೋನ್‌ ಇದ್ದವರು ನೇರವಾಗಿ ಹಂಪಿಗೆ ಬಂದರೂ ಸಹ ನೆಟ್‌ವರ್ಕ್‌ ಸಮಸ್ಯೆಯಿಂದ ಟಿಕೆಟ್‌ ಖರೀದಿಸಲು ಆಗುತ್ತಿಲ್ಲ. ಹಂಪಿಯಿಂದ ಎರಡ್ಮೂರು ಕಿ.ಮೀ ದೂರ ಹೋಗಿ, ನೆಟ್‌ವರ್ಕ್‌ ಇರುವ ಕಡೆ ಆನ್‌ಲೈನ್‌ ಟಿಕೆಟ್‌ ಖರೀದಿಸುವ ಪರಿಸ್ಥಿತಿ ಇದೆ.

‘ಆಂಧ್ರ ಪ್ರದೇಶದ ಅನಂತಪುರದಿಂದ ಕುಟುಂಬ ಸಮೇತರಾಗಿ ಹಂಪಿ ನೋಡಲು ಬಂದಿದ್ದೇವೆ. ಇಲ್ಲಿಗೆ ಬರುವಷ್ಟರಲ್ಲಿ ಮಧ್ಯಾಹ್ನ 2ಗಂಟೆಯಾಗಿತ್ತು. ಎರಡು ಸಾವಿರ ಜನಕ್ಕಷ್ಟೇ ಟಿಕೆಟ್‌ ಖರೀದಿಸುವ ವ್ಯವಸ್ಥೆ ಇದ್ದು, ಎಲ್ಲ ಟಿಕೆಟ್‌ ಮಾರಾಟವಾಗಿದ್ದರಿಂದ ನಮಗೆ ಟಿಕೆಟ್‌ ಸಿಗಲಿಲ್ಲ. ಸ್ಮಾರಕಗಳನ್ನು ನೋಡದೆ ಹಿಂತಿರುಗುತ್ತಿದ್ದೇವೆ. ಮನೆಯವರೆಲ್ಲರಿಗೂ ಬೇಜಾರಾಗಿದೆ’ ಎಂದು ಪ್ರವಾಸಿಗ ರಾಮಣ್ಣ ಗೋಳು ತೋಡಿಕೊಂಡರು.

‘ಲಾಕ್‌ಡೌನ್‌ ತೆರವಾದ ನಂತರ ನಿತ್ಯ ಹಂಪಿಗೆ ಎರಡ್ಮೂರು ಸಾವಿರ ಜನ ಭೇಟಿ ಕೊಡುತ್ತಿದ್ದಾರೆ. ವಾರಾಂತ್ಯಕ್ಕೆ ಈ ಸಂಖ್ಯೆ ಐದು ಸಾವಿರ ಗಡಿ ದಾಟುತ್ತದೆ. ಆದರೆ, ಟಿಕೆಟ್‌ಗೆ ಮಿತಿ ಹೇರಿರುವ ಕಾರಣ ಅನೇಕ ಜನ ದೂರದಿಂದ ಬಂದು ಏನನ್ನೂ ನೋಡದೆ ವಾಪಸ್‌ ಹೋಗುತ್ತಿದ್ದಾರೆ. ಅದರಲ್ಲೂ ಹಳ್ಳಿಯಿಂದ ಬರುವವರು ತೊಂದರೆ ಅನುಭವಿಸುತ್ತಿದ್ದಾರೆ. ಈ ನಿಯಮ ಸರಿಯಿಲ್ಲ. ನೆಟ್‌ವರ್ಕ್‌ ತೊಂದರೆಯೂ ಇದ್ದು, ಸ್ಮಾರಕಗಳ ಪರಿಸರದಲ್ಲಿ ವೈ–ಫೈ್‌ ವ್ಯವಸ್ಥೆ ಮಾಡಬೇಕು’ ಎಂದು ಹಿರಿಯ ಮಾರ್ಗದರ್ಶಿ ಗೋಪಾಲ್‌ ಆಗ್ರಹಿಸಿದರು.

***

ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ಈ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲೇ ಟಿಕೆಟ್‌ ಮಿತಿ ತೆಗೆಯುವ ಭರವಸೆ ಸಿಕ್ಕಿದೆ.
–ಪಿ. ಕಾಳಿಮುತ್ತು, ಡೆಪ್ಯುಟಿ ಸೂಪರಿಟೆಂಡೆಂಟ್‌, ಎಎಸ್‌ಐ ಹಂಪಿ ವೃತ್ತ

***

ಟಿಕೆಟ್‌ ಪಡೆಯುವುದು ಹೇಗೆ?
ಗೂಗಲ್‌ನಲ್ಲಿ asi payumoney.com ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಬಳಿಕ Herigate monuments of India ಕ್ಲಿಕ್‌ ಮಾಡಬೇಕು. ನಂತರ ನಗರಗಳ ಪಟ್ಟಿಯಲ್ಲಿ ಹಂಪಿ ಸೆಲೆಕ್ಟ್‌ ಮಾಡಿ, ಸ್ಮಾರಕಗಳ ಪಟ್ಟಿಯಲ್ಲಿ Group of monuments Hampi ಸೆಲೆಕ್ಟ್‌ ಮಾಡಬೇಕು. ದಿನಾಂಕ, ಭೇಟಿ ಸಮಯ ನಮೂದಿಸಬೇಕು. ಭಾರತೀಯರಿದ್ದರೆ ಭಾರತೀಯ, ವಿದೇಶಿದಿಂದ ಬಂದವರಾದರೆ ವಿದೇಶಿಯರು ಸೆಲೆಕ್ಟ್‌ ಮಾಡಿ, ವಯಸ್ಕರು, ಮಕ್ಕಳ ವಿವರ, ಇಮೇಲ್‌ ವಿಳಾಸ ಮರೆಯದೇ ದಾಖಲಿಸಬೇಕು. ನಂತರ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌, ವ್ಯಾಲೆಟ್‌, ನೆಟ್‌ ಬ್ಯಾಂಕಿಂಗ್‌ ಅಥವಾ ಯುಪಿಐ ಮೂಲಕ ಹಣ ಪಾವತಿಸಬೇಕು. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ನೀವು ನಮೂದಿಸಿರುವ ಇಮೇಲ್‌ ವಿಳಾಸಕ್ಕೆ ಟಿಕೆಟ್‌ ಬರುತ್ತದೆ. ಅದನ್ನು ಡೌನ್‌ಲೋಡ್‌ ಮಾಡಿಕೊಂಡು, ಸ್ಮಾರಕಗಳ ಪ್ರವೇಶ ದ್ವಾರದ ಬಳಿಯಿರುವ ಸಿಬ್ಬಂದಿಗೆ ತೋರಿಸಿ ಒಳ ಹೋಗಬೇಕು. 15 ವರ್ಷದೊಳಗಿನವರಿಗೆ ಉಚಿತ ಪ್ರವೇಶ ಇದೆ. ಅದಕ್ಕಿಂತ ಮೇಲಿನ ಭಾರತೀಯರಿಗೆ ₹35, ವಿದೇಶಿಯರಿಗೆ ₹550 ಟಿಕೆಟ್‌ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT