ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ನೌಕರರ ಮುಷ್ಕರ ಅಂತ್ಯ

Last Updated 21 ಏಪ್ರಿಲ್ 2021, 20:27 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು ವೇತನ ಪರಿಷ್ಕರಣೆಗೆ ಆಗ್ರಹಿಸಿ 15 ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಬುಧವಾರ ಸಂಜೆ ಅಂತ್ಯಗೊಳಿಸಿದರು.

ಹೈಕೋರ್ಟ್‌ ಸೂಚನೆಗೆ ಮಣಿದ ಸಾರಿಗೆ ನೌಕರರ ಕೂಟ, ಮುಷ್ಕರ ಕೈಬಿಡುವ ನಿರ್ಧಾರ ಘೋಷಿಸಿದೆ.

‘ಕೋವಿಡ್‌ ಎರಡನೇ ಅಲೆ ವ್ಯಾಪಿಸುತ್ತಿರುವುದರಿಂದ ಸಾರಿಗೆ ನೌಕರರು ಮುಷ್ಕರ ನಡೆಸುವ ಸಮಯ ಇದಲ್ಲ’ ಎಂದು ಹೈಕೋರ್ಟ್‌ ಮಂಗಳವಾರ ಕಟುವಾಗಿ ಹೇಳಿತ್ತು. ಬುಧವಾರ ಬೆಳಿಗ್ಗೆ ಯಿಂದಲೇ ಕರ್ತವ್ಯಕ್ಕೆ ಹಾಜರಾದ ನೌಕರರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿತ್ತು. ಸಂಜೆ ಪತ್ರಿಕಾ ಗೋಷ್ಠಿ ನಡೆಸಿದ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌, ಮುಷ್ಕರ ಅಂತ್ಯ ಗೊಳಿಸುವ ನಿರ್ಧಾರ ಪ್ರಕಟಿಸಿದರು.

‘ಹೈಕೋರ್ಟ್‌ ನ್ಯಾಯಮೂರ್ತಿಗಳ ಸೂಚನೆಗೆ ತಲೆಬಾಗಿ ಸಾರಿಗೆ ನೌಕರರು ಮುಷ್ಕರ ಅಂತ್ಯಗೊಳಿಸುತ್ತಿದ್ದಾರೆ. ಕರ್ತವ್ಯಕ್ಕೆ ಹಾಜರಾಗಬೇಕು ಎಂಬ ನ್ಯಾಯಾಲಯದ ಸೂಚನೆಯನ್ನು ನೌಕರರು ತಕ್ಷಣದಿಂದಲೇ ಪಾಲಿಸು
ತ್ತಾರೆ. ಬುಧವಾರ ಎರಡನೇ ಪಾಳಿಯ ನೌಕರರು ಕರ್ತವ್ಯಕ್ಕೆ ಹಾಜರಾಗಲಿದ್ದು, ಗುರುವಾರ ಎಲ್ಲ ನೌಕರರೂ ಕರ್ತವ್ಯಕ್ಕೆ ಮರಳುತ್ತಾರೆ’ ಎಂದು ತಿಳಿಸಿದರು.

‘ಕೋವಿಡ್‌ ಸಂಕಷ್ಟದ ಕಾಲದಲ್ಲಿ ಜನರಿಗೆ ತೊಂದರೆ ಮಾಡಬಾರದು ಎಂಬ ಸೂಚನೆಯನ್ನು ನ್ಯಾಯಾಲಯ ನೀಡಿದೆ. ಆ ಮಾತನ್ನು ಗೌರವಿಸಿ ತಾತ್ಕಾಲಿಕವಾಗಿ ಮುಷ್ಕರವನ್ನು ಅಂತ್ಯಗೊಳಿಸಲಾಗುತ್ತಿದೆ’ ಎಂದರು.

15 ದಿನಗಳ ಹಗ್ಗ ಜಗ್ಗಾಟ: ಏಪ್ರಿಲ್‌ 7ರ ಮಧ್ಯಾಹ್ನದಿಂದಲೇ ಸಾರಿಗೆ ನಿಗಮಗಳ ನೌಕರರು ಮುಷ್ಕರ ಆರಂಭಿಸಿದ್ದರು. ಏ.8ರಿಂದ ರಾಜ್ಯದಾದ್ಯಂತ ಸಾರಿಗೆ ನಿಗಮಗಳ ಬಸ್‌ ಸಂಚಾರ ಬಹುತೇಕ ಸ್ಥಗಿತಗೊಂಡಿತ್ತು. ನೋಟಿಸ್‌ ಜಾರಿ, ವರ್ಗಾವಣೆ, ಅಮಾನತು, ಕೆಲಸದಿಂದ ವಜಾ ಮಾಡುವ ಮೂಲಕ ನೌಕರರನ್ನು ಮಣಿಸಲು ಸಾರಿಗೆ ನಿಗಮಗಳು ಪ್ರಯತ್ನಿಸಿದ್ದವು.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಮತ್ತು ಎನ್‌ಇಕೆಆರ್‌ಟಿಸಿಯ 975ಕಾಯಂ ನೌಕರರನ್ನು ಸೇವೆಯಿಂದ ವಜಾ ಮಾಡಲಾಗಿತ್ತು. ನಾಲ್ಕೂ ನಿಗಮಗಳ 995 ಟ್ರೈನಿ ನೌಕರರನ್ನು ಕೆಲಸದಿಂದ ಕೈಬಿಡಲಾಗಿದೆ. 2,941 ನೌಕರರನ್ನು ಅಮಾನತು ಮಾಡುವ ಮೂಲಕ ಉಳಿದ ಸಿಬ್ಬಂದಿಗೆ ಎಚ್ಚರಿಕೆಯ ಸಂದೇಶ ರವಾನಿಸಲು ಸಾರಿಗೆ ನಿಗಮಗಳು ಪ್ರಯತ್ನಿಸಿದ್ದವು.

13,000 ಬಸ್‌ ಸಂಚಾರ: ಮಂಗಳ ವಾರ ನಾಲ್ಕು ನಿಗಮಗಳ ಒಟ್ಟು 7,848 ಬಸ್‌ಗಳು ಸಂಚರಿಸಿದ್ದವು. ಹೈಕೋರ್ಟ್‌ ಸೂಚನೆಯ ಪರಿಣಾಮವಾಗಿ ಬುಧವಾರ ಬೆಳಿಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದರು. ರಾತ್ರಿಯವರೆಗೂ ಒಟ್ಟು 13,000 ಬಸ್‌ಗಳು ಸಂಚಾರ ನಡೆಸಿವೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಮುಷ್ಕರದ ನಡುವೆಯೂ ಹಲವು ನೌಕರರು ಕರ್ತವ್ಯಕ್ಕೆ ಹಾಜರಾಗಿ ಸಹಕಾರ ನೀಡಿದ್ದಾರೆ. ಬುಧವಾರ 13,000 ಬಸ್‌ಗಳು ಸಂಚರಿಸಿದ್ದು, ಗುರುವಾರ ದಿಂದ ಪೂರ್ಣ ಪ್ರಮಾಣದಲ್ಲಿ ಬಸ್‌ ಗಳು ಸಂಚರಿಸಲಿವೆ’ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

₹ 287 ಕೋಟಿ ಆದಾಯ ನಷ್ಟ

15 ದಿನಗಳ ಅವಧಿಯ ನೌಕರರ ಮುಷ್ಕರದಿಂದಾಗಿ ನಾಲ್ಕು ಸಾರಿಗೆ ನಿಗಮ ಗಳಿಗೆ ಒಟ್ಟು ₹ 287 ಕೋಟಿ ಆದಾಯ ನಷ್ಟವಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕೆಎಸ್‌ಆರ್‌ಟಿಸಿಗೆ ₹ 122.50 ಕೋಟಿ, ಬಿಎಂಟಿಸಿಗೆ ₹ 45 ಕೋಟಿ, ಎನ್‌ಡಬ್ಲ್ಯುಕೆಆರ್‌ಟಿಸಿಗೆ ₹ 57.50 ಕೋಟಿ ಮತ್ತು ಎನ್‌ಇಕೆಆರ್‌ಟಿಸಿಗೆ ₹ 62 ಕೋಟಿ ಆದಾಯ ನಷ್ಟವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT