ಭಾನುವಾರ, ಜೂನ್ 20, 2021
29 °C

ಸಾರಿಗೆ ಮುಷ್ಕರ: ಪರ್ಯಾಯ ವ್ಯವಸ್ಥೆಯತ್ತ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾರಿಗೆ ಸಂಸ್ಥೆಗಳ ನೌಕರರು ಏ.7ರಿಂದ ಮುಷ್ಕರಕ್ಕೆ ಅಣಿಯಾಗುತ್ತಿರುವ ಬೆನ್ನಲ್ಲೇ, ಸಾರ್ವಜನಿಕರಿಗೆ ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಒಪ್ಪಂದದ ತಾತ್ಕಾಲಿಕ ರಹದಾರಿ ನೀಡಲು ಖಾಸಗಿ ಬಸ್, ಮಿನಿ ಬಸ್, ಮ್ಯಾಕ್ಸಿಕ್ಯಾಬ್ ಮಾಲೀಕರಿಂದ ಅರ್ಜಿ ಆಹ್ವಾನಿಸಿದೆ.

ಮುಷ್ಕರದ ಅವಧಿಯಲ್ಲಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸಲು ಆಲೋಚಿಸಿದೆ. ಮ್ಯಾಕ್ಸಿಕ್ಯಾಬ್ ಮತ್ತು ಬಸ್‌ಗಳಿಗೆ ತಾತ್ಕಾಲಿಕ ರಹದಾರಿ ನೀಡಲು ನಿರ್ಧರಿಸಿದೆ. ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಅವರನ್ನು ಸಂಪರ್ಕಿಸಿ ರಹದಾರಿಗಾಗಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ.

ಈ ಹಿಂದಿನ ಮುಷ್ಕರದ ವೇಳೆ 9 ಬೇಡಿಕೆಗಳ ಈಡೇರಿಕೆಗೆ ಸರ್ಕಾರ ನೀಡಿದ್ದ ಭರವಸೆ ಈಡೇರಿಸಿಲ್ಲ ಎಂದು ಆರೋಪಿಸಿ ಮತ್ತೊಮ್ಮೆ ಮುಷ್ಕರಕ್ಕೆ ಸಾರಿಗೆ ನೌಕರರ ಕೂಟ ನಿರ್ಧರಿಸಿದೆ. ಈ ಸಂಬಂಧ ಸರ್ಕಾರಕ್ಕೆ ನೋಟಿಸ್ ನೀಡಿದೆ.

‘8 ಬೇಡಿಕೆಗಳನ್ನು ಈಗಾಗಲೇ ಈಡೇರಿಸಲಾಗಿದ್ದು, 6ನೇ ವೇತನ ಆಯೋಗದ ಜಾರಿಯೊಂದು ಬಾಕಿ ಇದೆ. ಅದಕ್ಕೆ ಸಿದ್ಧತೆಯೂ ನಡೆದಿದೆ’ ಎಂದು ಸರ್ಕಾರ ಹೇಳುತ್ತಿದೆ. 6ನೇ ವೇತನ ಆಯೋಗದ ಶಿಫಾರಸು ಜಾರಿಯ ಬೇಡಿಕೆ ಈಡೇರಿಲ್ಲ. ಹೀಗಾಗಿ ಮುಷ್ಕರ  ಅನಿವಾರ್ಯ’ ಎಂದು ಸಾರಿಗೆ ನೌಕರರ ಕೂಟ ಹೇಳಿದೆ.

‘ಸರ್ಕಾರ ಹಟಮಾರಿ ಧೋರಣೆ ಮುಂದುವರಿಸಿದೆ. ನಮ್ಮ ಜತೆ ಮಾತುಕತೆಗೂ ಮುಂದಾಗದ ಸರ್ಕಾರ, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ಮುಷ್ಕರಕ್ಕೆ ನಾವೂ ಸಿದ್ಧತೆ ಮಾಡುತ್ತಿದ್ದೇವೆ’ ಎಂದು ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದರು.‌

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು