ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗಕ್ಕೆ ಬಂತು ಮೊದಲ ವಿಮಾನ: ಡಬಲ್ ಎಂಜಿನ್ ಸರ್ಕಾರದ ಕ್ರಾಂತಿ ಎಂದ ಬಿಜೆಪಿ

Last Updated 22 ಫೆಬ್ರುವರಿ 2023, 7:30 IST
ಅಕ್ಷರ ಗಾತ್ರ

ಬೆಂಗಳೂರು: ಶಿವಮೊಗ್ಗದ ಸೋಗಾನೆಯ ನೂತನ ವಿಮಾನ ನಿಲ್ದಾಣದ ರನ್‌ವೇಗೆ ಮಂಗಳವಾರ ಮುತ್ತಿಕ್ಕಿದ ವಾಯುಸೇನೆಯ ಬೋಯಿಂಗ್ 737 ವಿಮಾನ ಮಲೆನಾಡಿನಲ್ಲಿ ಲೋಹದ ಹಕ್ಕಿಗಳ ಕಲರವಕ್ಕೆ ಮುನ್ನುಡಿ ಬರೆದಿದೆ.

ದೆಹಲಿಯಿಂದ ಬೆಳಿಗ್ಗೆ 11.45ಕ್ಕೆ ಹೊರಟ 180 ಪ್ರಯಾಣಿಕರ ಸಾಮರ್ಥ್ಯದ ಈ ಬೃಹತ್ ಏರ್‌ಬಸ್, ಮಧ್ಯಾಹ್ನ 2.15ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇಳಿಯಿತು. ವಾಯುಸೇನೆಯ ಗ್ರೂಪ್‌ ಕ್ಯಾಪ್ಟನ್ ಹುಡ್ಡಾ ಅವರ ನೇತೃತ್ವದಲ್ಲಿ ಬಂದ ಸಿಬ್ಬಂದಿಯನ್ನು ವಿಮಾನ ನಿಲ್ದಾಣದ ಚೀಫ್ ಆಪರೇಟಿಂಗ್ ಆಫೀಸರ್ ಬ್ರಿಗೇಡಿಯರ್ ಡಿ.ಎಂ.ಪೂರ್ವಿಮಠ್ ನೇತೃತ್ವದಲ್ಲಿ ಬರಮಾಡಿಕೊಳ್ಳಲಾಯಿತು.

ಈ ಕುರಿತು ಟ್ವಿಟರ್‌ನಲ್ಲಿ ಸಂತಸ ವ್ಯಕ್ತಪಡಿಸಿರುವ ಬಿಜೆಪಿ, ‘ಶಿವಮೊಗ್ಗ ಜಿಲ್ಲೆಯ ಜನತೆಯ ಹಲವು ವರ್ಷಗಳ ಕನಸು ನನಸಾಗಿದೆ. ಶಿವಮೊಗ್ಗ ಏರ್‌ಪೋರ್ಟ್‌ಗೆ ವಾಯುಸೇನೆಯ ಮೊದಲ ಪ್ರಾಯೋಗಿಕ ವಿಮಾನ ಬಂದಿಳಿಯಿತು. ಇದು ಡಬಲ್ ಎಂಜಿನ್ ಸರ್ಕಾರದಿಂದ ಸಂಪರ್ಕ ಕ್ರಾಂತಿಯಾಗಿದೆ’ ಎಂದು ಬರೆದುಕೊಂಡಿದೆ.

ಮೊದಲು ಇಳಿದ ವಿಮಾನಕ್ಕೆ ಸಂಪ್ರದಾಯದಂತೆ ಎರಡು ಅಗ್ನಿಶಾಮಕ ವಾಹನಗಳ ಮೂಲಕ ನೀರು ಎರಚಿ ವಾಟರ್ ಕೆನನ್ ಗೌರವ ಸಲ್ಲಿಸಲಾಯಿತು. ಈ ವೇಳೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಇದ್ದರು.

ಇದೇ ಮೊದಲು: ‘ಹೊಸ ವಿಮಾನ ನಿಲ್ದಾಣದಲ್ಲಿ ಪರೀಕ್ಷಾರ್ಥವಾಗಿ ಇಳಿಯಲು ಕರ್ನಾಟಕದಲ್ಲಿ ಎಲ್ಲಿಯೂ ವಾಯುಪಡೆಯ ವಿಮಾನ ಬಳಸಿಲ್ಲ. ಇದೇ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಬಳಸಿದ್ದೇವೆ. ಸಾಮಾನ್ಯವಾಗಿ ವಾಣಿಜ್ಯ ವಿಮಾನಗಳನ್ನು ತರಿಸುತ್ತಾರೆ. ಆದರೆ ಅದಕ್ಕೆ ಮೂರು ತಿಂಗಳು ಕಾಯಬೇಕಿತ್ತು’ ಎಂದು ಪೂರ್ವಿಮಠ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ವಿಮಾನ ಇಳಿಯಲು ಇದು ಸೂಕ್ತವಾಗಿದೆಯೇ ಎಂಬುದನ್ನು ಪರೀಕ್ಷಿಸಲು ಅಷ್ಟೇ ಸಾಮರ್ಥ್ಯದ ಈ ವಿಮಾನವನ್ನು ಇಳಿಸಿ ಪರೀಕ್ಷಿಸಲಾಯಿತು ಎಂದರು. ಮಧ್ಯಾಹ್ನ 3 ಗಂಟೆಗೆ ವಾಪಸ್ ಹೊರಟ ವಿಮಾನ ಸಂಜೆ 5.15ಕ್ಕೆ ದೆಹಲಿಗೆ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT