ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವಿಯಲ್ಲಿ ಕನ್ನಡ ಭಾಷೆ ‌ಕಡ್ಡಾಯಗೊಳಿಸಿ: ಟಿ.ಎಸ್. ನಾಗಾಭರಣ ಆಗ್ರಹ

Last Updated 13 ಜನವರಿ 2022, 20:06 IST
ಅಕ್ಷರ ಗಾತ್ರ

ಬೆಂಗಳೂರು: ‘ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಕನ್ನಡ ಭಾಷಾ ವಿಷಯವನ್ನುಪದವಿಯಲ್ಲಿ ಕಡ್ಡಾಯವಾಗಿ ಬೋಧಿಸಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಆಗ್ರಹಿಸಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇತ್ತೀಚಿನ ವರ್ಷಗಳಲ್ಲಿ ಕಲಿಕೆ ಮತ್ತು ಕಲಿಸುವ ವ್ಯವಸ್ಥೆಯಲ್ಲಿ ಸಾಕಷ್ಟು ಸ್ಥಿತ್ಯಂತರಗಳಾಗಿವೆ. ವಿವಿಧ ಆಯಾಮದ ಕಾರ್ಪೋರೇಟ್ ಶಿಕ್ಷಣ ವ್ಯವಸ್ಥೆಯಿಂದ ಜನಭಾಷೆಯಾದ ಕನ್ನಡದ ಸ್ಥಾನಮಾನ ಏರುಪೇರಾಗುತ್ತಿರುವುದು ವಿಷಾದನೀಯ. ಇಲ್ಲಿ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಕನ್ನಡ ಜ್ಞಾನ ಪಡೆಯುವುದು ಅವಶ್ಯ. ಶಿಕ್ಷಣದಲ್ಲಿ ಇಂಗ್ಲಿಷ್‌ನಂತೆ ಕನ್ನಡವನ್ನೂ ಕಡ್ಡಾಯಗೊಳಿಸಬೇಕು. ಇಲ್ಲವಾದಲ್ಲಿ ಹಿಂಬಾಗಿಲ ಮೂಲಕ ನಡೆಯುವ ಭಾಷಾ ಕಲಿಕೆಯ ಮಸಲತ್ತುಗಳನ್ನು ಪರಿಹರಿಸಲು ಸಾಧ್ಯವಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಇಲ್ಲಿನ ಕಾಲೇಜುಗಳಲ್ಲಿ ಅಧ್ಯಯನ ಮಾಡುವ ಪದವಿ ವಿದ್ಯಾರ್ಥಿಗಳು ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಯುವ ನಿಯಮ‌ ಕಡ್ಡಾಯಗೊಳಿಸುವುದು ಅನಿವಾರ್ಯ. ಈ ನಾಡಿನಲ್ಲಿ ಶಿಕ್ಷಣ ಪಡೆದು‌ ಉದ್ಯೋಗ ಪಡೆಯ ಬಯಸುವವರು ಇಲ್ಲಿನ ಪ್ರಧಾನ ಭಾಷಿಕರೊಡನೆ ವ್ಯವಹಾರ ನಡೆಸಬೇಕಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಭಾಷೆ ಕಲಿಯದವನು ಸಮಾಜದಲ್ಲಿ ಯಾವ ರೀತಿ ಜನಸೇವೆ ಮಾಡಬಲ್ಲ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ’ ಎಂದು ತಿಳಿಸಿದರು.

ಭಾಷೆ ಕಲಿಕೆ ಉತ್ತರದಾಯಿತ್ವ: ‘ಎರಡು ಸಾವಿರ ವರ್ಷಗಳಷ್ಟು ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಕಲಿಯುವುದರಿಂದ ಸಂಸ್ಕೃತದ ವಿದ್ಯಾರ್ಥಿಗಳಿಗೆ ಅಥವಾ ಸಂಸ್ಕೃತದ ಪ್ರಾಧ್ಯಾಪಕರಿಗೆ ಯಾವ ರೀತಿಯ ಹಾನಿಯುಂಟಾಗುತ್ತದೆ? ಕನ್ನಡ ನಾಡಿನ ಸಂಪನ್ಮೂಲಗಳನ್ನು ಬಳಸಿಕೊಂಡು ವಿದ್ಯೆ ಕಲಿಯಲು ಬಂದಿರವ ಅನ್ಯ ಭಾಷಿಕರು ಈ ನೆಲದ ಜನರ ಭಾಷೆ ಕಲಿಯುವುದು ಅವರ ಉತ್ತರದಾಯಿತ್ವ’ ಎಂದು ಹೇಳಿದರು.

‘ಕನ್ನಡದ ಮಕ್ಕಳಿಗೆ ಕರ್ನಾಟಕದಲ್ಲಿ ಕನ್ನಡದ ಕಲಿಸದೇ ಇನ್ನೆಲ್ಲಿ ಕಲಿಸಬೇಕು? ಇಲ್ಲಿನ ಜನರೊಂದಿಗೆ ಸಂವಹನ ನಡೆಸಲು ಕನ್ನಡ ಅಗತ್ಯವೇ ಹೊರತು ಸಂಸ್ಕೃತವಲ್ಲ. ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಸಂಸ್ಕೃತ ಭಾರತ ಟ್ರಸ್ಟ್‌ನ ಪ್ರಮುಖರು ಮತ್ತು ಇತರರು ಇದನ್ನು ಆಲೋಚಿಸಬೇಕು’ ಎಂದು ತಿಳಿಸಿದರು.

ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT