ಮಂಗಳವಾರ, ಜೂನ್ 15, 2021
21 °C

ಟಗ್‌ ಮುಳುಗಡೆ: ವಿಚಾರಣೆಗೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ತೌತೆ’ ಚಂಡಮಾರುತದ ಅಬ್ಬರದ ವೇಳೆಯಲ್ಲಿ ಮಂಗಳೂರು ಪೆಟ್ರೋಕೆಮಿಕಲ್ಸ್ ಅಂಡ್‌ ರಿಫೈನರಿ ಲಿಮಿಟೆಡ್‌ಗೆ (ಎಂಆರ್‌ಪಿಎಲ್‌) ಸೇರಿದ ಎರಡು ಟಗ್‌ಗಳು ದುರಂತಕ್ಕೀಡಾದ ಘಟನೆ ಕುರಿತು ವಿಚಾರಣೆ ನಡೆಸಲು ನಿರ್ಧರಿಸಿರುವ ಕಂದಾಯ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಿದೆ.

ಎರಡು ಟಗ್‌ಗಳು ಶುಕ್ರವಾರ ಮಧ್ಯಾಹ್ನ ಎನ್‌ಎಂಪಿಟಿ ಬಂದರಿನಿಂದ ಲಂಗರು ಕಡಿದುಕೊಂಡು ಸಮುದ್ರ ಪಾಲಾಗಿದ್ದವು. ‘ಅಲಯನ್ಸ್‌’ ಹೆಸರಿನ ಟಗ್‌ ನೀರಿನಲ್ಲಿ ಮಗುಚಿ ಬಿದ್ದಿತ್ತು. ಅದರಲ್ಲಿದ್ದ ಎಂಟು ಮಂದಿಯಲ್ಲಿ ಇಬ್ಬರ ಶವ ಪತ್ತೆಯಾಗಿದ್ದು, ಮೂವರನ್ನು ರಕ್ಷಿಸಲಾಗಿದೆ. ಮೂವರು ಇನ್ನೂ ನಾಪತ್ತೆಯಾಗಿದ್ದಾರೆ. ಕೋರಮಂಡಲ್‌ ಸಪೋರ್ಟರ್‌–9 ಹೆಸರಿನ ಟಗ್‌ ಮೂಲ್ಕಿ ಬಳಿ ಬಂಡೆಗಳ ನಡುವೆ ಸಿಲುಕಿತ್ತು. ಅದರಲ್ಲಿದ್ದ ಒಂಬತ್ತು ಕಾರ್ಮಿಕರನ್ನು ನೌಕಾಪಡೆಯ ಹೆಲಿಕಾಪ್ಟರ್‌ ನೆರವಿನಲ್ಲಿ ಭಾನುವಾರ ರಕ್ಷಿಸಲಾಗಿದೆ.

ಚಂಡಮಾರುತದಿಂದ ಗಾಳಿ, ಮಳೆ ಹಾಗೂ ಸಮುದ್ರ ಪ್ರಕ್ಷುಬ್ಧಗೊಳ್ಳುವ ಕುರಿತು ಮೇ 13ರಂದೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ತಕ್ಷಣವೇ ಎಲ್ಲ ದೋಣಿಗಳು, ಹಡಗು ಮತ್ತು ಸಣ್ಣ ನೌಕೆಗಳನ್ನು ಸಮುದ್ರಕ್ಕೆ ಇಳಿಸದಂತೆ ಭಾರತೀಯ ಕೋಸ್ಟ್‌ ಗಾರ್ಡ್‌ ಎಚ್ಚರಿಕೆ ನೀಡಿತ್ತು. ಅವೆಲ್ಲವನ್ನೂ ಮೀರಿ ಎರಡು ಟಗ್‌ಗಳು ಹೇಗೆ ಸಮುದ್ರದಲ್ಲಿ ಸಿಲುಕಿದವು? ದುರಂತಕ್ಕೆ ಕಾರಣಗಳೇನು ಎಂಬುದರ ಕುರಿತು ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯ ವಿಪ‍ತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ್‌ ಪ್ರಸಾದ್‌ ಮಂಗಳವಾರ ಹೊರಡಿಸಿರುವ ಆದೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು