ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ದಲಿತ ಯುವಕನ ಕೊಲೆ ಪ್ರಕರಣ: ಇಬ್ಬರು ಆರೋಪಿಗಳು ಪೊಲೀಸ್‌ ವಶಕ್ಕೆ

Last Updated 28 ಆಗಸ್ಟ್ 2020, 17:02 IST
ಅಕ್ಷರ ಗಾತ್ರ

ವಿಜಯಪುರ: ಸಿಂದಗಿ ತಾಲ್ಲೂಕಿನ ಬೂದಿಹಾಳ ಪಿ.ಎಚ್‌.ಗ್ರಾಮದಲ್ಲಿ ‘ದೇವಸ್ಥಾನದ ಕಟ್ಟೆ ಮೇಲೆ ತಮಗೆ ಸರಿಸಮನಾಗಿ ಕುಳಿತಿದ್ದಾನೆ’ ಎಂಬ ಕಾರಣಕ್ಕೆ ಪರಿಶಿಷ್ಟ ಜಾತಿಗೆ ಸೇರಿದ ಅನಿಲ ಇಂಗಳಗಿ (28) ಎಂಬ ಯುವಕನನ್ನು ಕೊಲೆ ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.

ಬೂದಿಹಾಳ ಪಿ.ಎಚ್‌. ಗ್ರಾಮದ ಲಿಂಗಾಯತ ಗಾಣಿಗ ಸಮಾಜಕ್ಕೆ ಸೇರಿದ ಸಿದ್ದು ಬಿರಾದಾರ(25) ಮತ್ತು ಮಣ್ಣೂರ ಗ್ರಾಮದ ಸಂತೋಷ ಹಿರ್ಲಾಕುಂಡ(21)ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್‌ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ, ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಾಥಮಿಕ ಮಾಹಿತಿ ಪ್ರಕಾರ ಘಟನೆಗೂ ಮೂರ್ನಾಲ್ಕು ದಿನಗಳ ಹಿಂದೆ ಗ್ರಾಮದ ದೇವಸ್ಥಾನದ ಬಳಿ ಅನಿಲ ಇಂಗಳಗಿ ಕುಳಿತಿದ್ದಾಗ ಆರೋಪಿಗಳು ಆಕ್ಷೇಪ ವ್ಯಕ್ತಪಡಿಸಿ, ಗಲಾಟೆ ಮಾಡಿದ್ದರು. ಬಳಿಕ ಇದೇ ವೈಷಮ್ಯದ ಹಿನ್ನೆಲೆಯಲ್ಲಿ ಆರೋಪಿಗಳು ಯುವಕನನ್ನು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ’ ಎಂದರು.

‘ಬಂಧಿತರ ವಿಚಾರಣೆ ನಡೆದಿದೆ. ಸಾಕ್ಷ್ಯಗಳನ್ನು ಸಂಗ್ರಹಿಸಿ, ಕೋರ್ಟ್‌ಗೆ ಹಾಜರು ಪಡಿಸಲಾಗುವುದು. ಆರೋಪಿಗಳ ವಿರುದ್ಧ ಕಠಿಣಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಆಗ್ರಹ:‘ಕುಟುಂಬಕ್ಕೆ ನ್ಯಾಯ ಸಿಗಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಇಲ್ಲವಾದರೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು’ ಎಂದು ಕರ್ನಾಟಕ ಆದಿ ಜಾಂಬವ ಜನ ಸಂಘದ ಉತ್ತರ ಕರ್ನಾಟಕ ವಲಯದ ಅಧ್ಯಕ್ಷ ಸಾಯಿಬಣ್ಣ ದೇವರಮನಿ ಆಗ್ರಹಿಸಿದರು.

ಪರಿಹಾರ ವಿತರಣೆ:ಕೊಲೆಯಾದ ಯುವಕನ ಕುಟುಂಬಕ್ಕೆಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಮೊದಲ ಹಂತದಲ್ಲಿ ₹4,12,500 ಪರಿಹಾರಧನ ನೀಡಲಾಗಿದೆ.

ಪ್ರಕರಣಕ್ಕೆ ತಿರುವು:ಕೊಲೆ ಆರೋಪಿಗಳು ಮತ್ತು ಕೊಲೆಯಾದ ಯುವಕನ ನಡುವೆ ಹಣಕಾಸು ವಿಷಯವಾಗಿ ವಿವಾದ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಪರಸ್ಪರ ಗಲಾಟೆಯಾಗಿ, ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸ್‌ ಮೂಲಗಳು ಖಚಿತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT