ಬುಧವಾರ, ಜುಲೈ 6, 2022
23 °C
ಬಹುಕೋಟಿ ಮೌಲ್ಯದ ಚಿಪ್‌ಗಳ ಕಳವು: ಐದು ತಿಂಗಳಾದರೂ ಸಿಗದ ಸುಳಿವು

ಬಹುಕೋಟಿ ಮೌಲ್ಯದ ಚಿಪ್‌ಗಳ ಕಳವು: ಆಧಾರ್‌ ದತ್ತಾಂಶ ಕೇಂದ್ರಕ್ಕೆ ಕನ್ನ!

ವಿ.ಎಸ್‌. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಆಧಾರ್‌

ಬೆಂಗಳೂರು: ದೇಶದ ಎಲ್ಲ ನಾಗರಿಕರ ಆಧಾರ್‌ ದತ್ತಾಂಶವನ್ನು ಸಂಗ್ರಹಿಸಿಟ್ಟಿರುವ ‘ಯುಐಡಿಎಐ ದತ್ತಾಂಶ ಕೇಂದ್ರ’ದಲ್ಲಿ ಅತಿಭದ್ರತಾ ವಲಯದಲ್ಲಿ ಇರಿಸಿದ್ದ ಬಹುಕೋಟಿ ಮೌಲ್ಯದ ಕಂಪ್ಯೂಟರ್‌ ಚಿಪ್‌ಗಳು ಕಳವಾಗಿ ಐದು ತಿಂಗಳು ಕಳೆದರೂ ನಗರದ ಪೊಲೀಸರಿಗೆ ಆರೋಪಿಗಳ ಸುಳಿವು ಪತ್ತೆಹಚ್ಚಲು ಸಾಧ್ಯವಾಗಿಲ್ಲ.

ಈ ಪ್ರಕರಣದಲ್ಲಿ ಸುಮಾರು ₹ 17 ಕೋಟಿಗೂ ಹೆಚ್ಚು ಮೌಲ್ಯದ ಚಿಪ್‌ಗಳ ಕಳವು ನಡೆದಿದೆ. ₹ 2 ಕೋಟಿ ಮೌಲ್ಯದ ಚಿಪ್‌ಗಳು ಕಳವಾಗಿರುವ ಆರೋಪದ ಮೇಲೆ 2021 ರ ಸೆಪ್ಟೆಂಬರ್‌ 19 ರಂದು ಕೊಡಿಗೆಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿತ್ತು. ಐದು ತಿಂಗಳು ಕಳೆದರೂ ತನಿಖೆ ದಡ ಸೇರಿಲ್ಲ.

ಕ್ರಿಮಿನಲ್‌ ಪ್ರಕರಣಗಳಲ್ಲಿ ಎಫ್‌ಐಆರ್‌ ದಾಖಲಿಸಿದ ಮೂರು ತಿಂಗಳೊಳಗೆ ಆರೋಪಪಟ್ಟಿ ಸಲ್ಲಿಸಬೇಕು. ಆದರೆ, ಈ ಪ್ರಕರಣದಲ್ಲಿ ಗಡುವಿನೊಳಗೆ ಆರೋಪಿಗಳ ಪತ್ತೆ ಸಾಧ್ಯವಾಗಿಲ್ಲ. ಪೊಲೀಸರು ಮೂರು ತಿಂಗಳು ಹೆಚ್ಚುವರಿ ಕಾಲಾವಕಾಶವನ್ನು ನ್ಯಾಯಾಲಯದಿಂದ ಪಡೆದುಕೊಂಡಿದ್ದರು. ಒಂದು ತಿಂಗಳಷ್ಟೇ ಬಾಕಿ ಇದ್ದು, ಆ ವೇಳೆಗೂ ತನಿಖೆ ಗುರಿ ಮುಟ್ಟುವ ಕುರಿತು ಅನುಮಾನಗಳು ಮೂಡಿವೆ.

ಕೊಡಿಗೆಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿರುವ ಟಾಟಾನಗರದ ಎನ್‌.ಟಿ.ಐ. ಬಡಾವಣೆಯಲ್ಲಿ ಆಧಾರ್‌ ದತ್ತಾಂಶ ಕೇಂದ್ರವಿದೆ. ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಕಮಾಂಡೋಗಳು ಭದ್ರತೆ ಒದಗಿಸುತ್ತಾರೆ. ಈ ಕೇಂದ್ರದಲ್ಲಿ ಅಳವಡಿಸಲು ತಂದಿದ್ದ ಹೊಸ ಸರ್ವರ್‌ ಒಂದನ್ನು ಒಡೆದು ಅದರಲ್ಲಿದ್ದ ಕಂಪ್ಯೂಟರ್‌ ಚಿಪ್‌ಗಳನ್ನು ಕಳವು ಮಾಡಿರುವ ಘಟನೆ 2021 ರ ಆಗಸ್ಟ್‌–ಸೆಪ್ಟೆಂಬರ್‌ ಅವಧಿಯಲ್ಲಿ ನಡೆದಿತ್ತು.

ಎಚ್‌ಪಿಇ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಸರ್ವರ್‌ ಪೂರೈಸಿತ್ತು. ಕೆಲವು ದಿನಗಳ ಬಳಿಕ ಅದನ್ನು ಜೋಡಿಸಲು ಕಂಪನಿಯ ತಂತ್ರಜ್ಞರು ಬಂದಿದ್ದಾಗ ಚಿಪ್‌ಗಳನ್ನು ಕಳವು ಮಾಡಿರುವುದು ಪತ್ತೆಯಾಗಿತ್ತು. ಎಚ್‌ಪಿಇ ಕಂಪನಿಯ ವ್ಯವಸ್ಥಾಪಕ ಎನ್‌. ವಿಜಯಕುಮಾರ್ ನೀಡಿದ ದೂರನ್ನು ಆಧರಿಸಿ ಎಫ್‌ಐಆರ್‌
ದಾಖಲಿಸಲಾಗಿತ್ತು.

ಕಳ್ಳರ ಸುಳಿವೇ ಇಲ್ಲ: ಆಧಾರ್‌ ದತ್ತಾಂಶ ಕೇಂದ್ರದಲ್ಲಿ ಸರ್ವರ್‌ಗಳನ್ನು ಅತಿ ಭದ್ರತೆಯಲ್ಲಿ ಇರಿಸಲಾಗಿದೆ. ನಿರಂತರವಾಗಿ ಸಿಐಎಸ್‌ಎಫ್‌ ಕಮಾಂಡೊಗಳ ಕಾವಲಿದೆ.

ನಿಖರ ಮೌಲ್ಯ ₹ 17 ಕೋಟಿ

ರ‍್ಯಾಕ್‌ ಸರ್ವರ್‌ಗಳು, ಬ್ಲೇಡ್‌ ಸರ್ವರ್‌ಗಳು, ನೆಟ್‌ವರ್ಕ್‌ ಸ್ವಿಚ್‌, 20 ಸಿಪಿಯುಗಳು, ವಿವಿಧ ಸಾಮರ್ಥ್ಯದ 108 ಮೆಮೊರಿ ಕಾರ್ಡ್‌, 104 ಹಾರ್ಡ್‌ ಡಿಸ್ಕ್‌ಗಳು, 17 ಏರ್‌ ಫ್ಲೋ ಗೈಡ್‌ಗಳು ಕಳವಾಗಿರುವ ಮಾಹಿತಿ ಎಫ್‌ಐಆರ್‌ನಲ್ಲಿವೆ. ಕಳುವಾಗಿರುವ ಚಿಪ್‌ಗಳ ಮೌಲ್ಯ ₹ 17 ಕೋಟಿಗೂ ಹೆಚ್ಚು ಎನ್ನುತ್ತವೆ ಮೂಲಗಳು.

ರಾಷ್ಟ್ರೀಯ ಭದ್ರತೆ ವ್ಯಾಪ್ತಿಯ ಪ್ರಕರಣ

ಆಧಾರ್‌ ದತ್ತಾಂಶ ಸಂಗ್ರಹ ಕೇಂದ್ರದಲ್ಲಿ ರಾಷ್ಟ್ರದ ಎಲ್ಲ ಜನರ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಿಡಲಾಗಿದೆ. ರಾಷ್ಟ್ರೀಯ ಭದ್ರತೆಯ ವ್ಯಾಪ್ತಿಯಲ್ಲಿ ಈ ಕೇಂದ್ರ ಸೇರಿದೆ. ಕ್ಷಿಪ್ರಗತಿಯಲ್ಲಿ ಆರೋಪಿಗಳನ್ನು ಬಂಧಿಸಬೇಕಿತ್ತು. ಅದು ಸಾಧ್ಯವಾಗದಿದ್ದರೆ ತನಿಖೆಯನ್ನು ಉನ್ನತಮಟ್ಟದ ತಂಡಕ್ಕೆ ವರ್ಗಾಯಿಸಬೇಕಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

* ಕಳ್ಳತನ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ಕೇಂದ್ರದ ಭದ್ರತಾ ಅಧಿಕಾರಿಗಳು ಸೇರಿದಂತೆ ಹಲವರಿಂದ ಮಾಹಿತಿ ಪಡೆಯಬೇಕಿರುವುದರಿಂದ ಸ್ವಲ್ಪ ನಿಧಾನವಾಗುತ್ತಿದೆ.

–ಕಮಲ್‌ ಪಂತ್‌, ಬೆಂಗಳೂರು ನಗರ ಪೊಲೀಸ್ ಕಮಿಷನರ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು