ಮಂಗಳವಾರ, ಮಾರ್ಚ್ 21, 2023
28 °C

ಕಾಂಗ್ರೆಸ್ ಕಾಲದಲ್ಲಿ ಮಹಿಳೆಯರು ಬಹಿರ್ದೆಸೆಗಾಗಿ ಕತ್ತಲೆಗೆ ಕಾಯಬೇಕಿತ್ತು: ಬಿಜೆಪಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಕಾಂಗ್ರೆಸ್‌ ಸರ್ಕಾರದ ಆಡಳಿತಾವಧಿಯಲ್ಲಿ ಮಹಿಳೆಯರು ಬಹಿರ್ದೆಸೆಗೆ ಹೋಗಲು ಕತ್ತಲಾಗಲು ಕಾಯಬೇಕಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸ್ವಚ್ಛ ಭಾರತ ಯೋಜನೆಯಡಿ ಪ್ರತಿ ಮನೆಗೂ ಶೌಚಾಲಯ ನಿರ್ಮಿಸಿದೆ’ ಎಂದು ಬಿಜೆಪಿ ಹೇಳಿದೆ. 

ಕೇಂದ್ರ ಬಜೆಟ್‌ ಕುರಿತಾದ ಕಾಂಗ್ರೆಸ್‌ ನಾಯಕರ ಟೀಕೆಗಳಿಗೆ ಬಿಜೆಪಿ ಟ್ವಿಟರ್‌ನಲ್ಲಿ ತಿರುಗೇಟು ಕೊಟ್ಟಿದೆ. 

‘ಸಿದ್ದರಾಮಯ್ಯನವರು ಬಜೆಟ್‌ ಬಗ್ಗೆ ತಮ್ಮ ಅಭಿಪ್ರಾಯ ಹೇಳಲು ಮಂಡನೆಯವರೆಗೂ ಕಾಯಬೇಕಿರಲಿಲ್ಲ. ಬಜೆಟ್‌ ರೈತ ವಿರೋಧಿ, ಕರ್ನಾಟಕ ವಿರೋಧಿ, ಬಡವರ ವಿರೋಧಿ ಎಂದು ತಮ್ಮ ಪೂರ್ವಾಗ್ರಹ ಪೀಡಿತ ಹೇಳಿಕೆಯನ್ನು ಮೊದಲೇ ನೀಡಬಹುದಿತ್ತು’ ಎಂದು ಬಿಜೆಪಿ ವ್ಯಂಗ್ಯವಾಡಿದೆ. 

‘ಪ್ರಧಾನಿ ಮೋದಿ ಅವರ ಸರ್ಕಾರದ ಉತ್ತಮ ಆರ್ಥಿಕ ನೀತಿಗಳಿಂದಾಗಿ ರೈತರು ತಮ್ಮ ಬೆಳೆಗೆ ಉತ್ತಮ ಬೆಲೆ ಪಡೆಯುತ್ತಿದ್ದಾರೆ. ಸಿದ್ದರಾಮಯ್ಯ ಅವರ ಪಕ್ಷ ಆಡಳಿತ ನಡೆಸುತ್ತಿದ್ದ ಕಾಲದಲ್ಲಿ, ರೈತರ ಹೆಸರಲ್ಲಿ ಸಬ್ಸಿಡಿ ಘೋಷಿಸಿ ನಂತರ ಅದನ್ನು ಕಂಡವರ ಪಾಲು ಮಾಡುತ್ತಿದ್ದದ್ದು ನೆನಪಿದೆ’ ಎಂದು ಬಿಜೆಪಿ ಟೀಕಿಸಿದೆ. 

‘ವಿವಿಧ ದೇಶಗಳ 2023 ಹಾಗೂ 2024ರ ಆರ್ಥಿಕ ಅಭಿವೃದ್ಧಿ ದರದ ಮೂನ್ಸೂಚಿಯನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಪ್ರಕಟಿಸಿದೆ. ಭಾರತದ ಜಿಡಿಪಿ ಅಂದಾಜು ಕ್ರಮವಾಗಿ ಶೇ 6.1ರಿಂದ ಶೇ. 6.8ಕ್ಕೆ ಏರಲಿದೆ ಎಂದಿದೆ. ಕೋವಿಡ್‌ ನಂತರ ವಿಶ್ವವೇ ಆರ್ಥಿಕ ಹಿಂಜರಿತದಲ್ಲಿದ್ದರೂ, ಮೋದಿ ಸಾರಥ್ಯದ ಭಾರತ ವಿಶ್ವದಲ್ಲೇ ಅತಿವೇಗದಲ್ಲಿ ಬೆಳೆಯುತ್ತಿದೆ’ ಎಂದು ಸಿದ್ದರಾಮಯ್ಯಗೆ ಬಿಜೆಪಿ ತಿರುಗೇಟು ನೀಡಿದೆ. 

ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಪೂರ್ಣಾವಧಿ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಮಂಡಿಸಿದ್ದರು. 

ಎನ್‌ಡಿಎ ಸರ್ಕಾರದ ಎರಡನೇ ಅವಧಿಯ ಪೂರ್ಣ ಪ್ರಮಾಣದ ಬಜೆಟ್‌ ಇದಾಗಿದ್ದು, ಈ ಬಾರಿಯ ಬಜೆಟ್‌ನಲ್ಲಿ ಜನಸಾಮಾನ್ಯರು ಬಳಸುವ ಕೆಲವು ಸರಕುಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಿದ್ದರೆ, ಇನ್ನು ಹಲವು ಸರಕುಗಳ ಮೇಲಿನ ಸುಂಕವನ್ನು ಕಡಿಮೆ ಮಾಡಲಾಗಿದೆ.

ಕೇಂದ್ರ ಬಜೆಟ್‌ ವಿಚಾರವಾಗಿ ಸರಣಿ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ, ಕೇಂದ್ರದ ಟ್ರಬಲ್ ಎಂಜಿನ್ ಬಿಜೆಪಿ ಸರ್ಕಾರ ಕಳೆದ 8 ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ ‘ಅಮೀರ್ ಕೆ ಸಾಥ್, ಗರೀಬ್ ಕಾ ವಿನಾಶ್' (ಶ್ರೀಮಂತರ ಪರ ಮತ್ತು ಬಡವರ ವಿನಾಶ) ಎಂಬ ಜನವಿರೋಧಿ ನೀತಿಯ ಮುಂದುವರಿದ ಭಾಗವಾಗಿ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-2024ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದರು.

ಓದಿ... ಕೇಂದ್ರ ಸರ್ಕಾರದ ಬಜೆಟ್ ಸ್ವತಃ ಬಿಜೆಪಿ ಸಂಸದರಿಗೇ ಅರ್ಥವಾಗಿಲ್ಲ: ಕಾಂಗ್ರೆಸ್ ಟೀಕೆ

ಇದನ್ನೂ ಓದಿ... ನಿಮಗೆ ಶೂ ಕಳಿಸುತ್ತೇವೆ, ಪಾದಯಾತ್ರೆಗೆ ಬನ್ನಿ: ಕೆಸಿಆರ್‌ಗೆ ಸವಾಲೆಸೆದ ಶರ್ಮಿಳಾ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು