ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ ವೇ 2024ರ ಜನವರಿಯಲ್ಲಿ ಲೋಕಾರ್ಪಣೆ: ಗಡ್ಕರಿ

Last Updated 5 ಜನವರಿ 2023, 18:30 IST
ಅಕ್ಷರ ಗಾತ್ರ

ಬೆಂಗಳೂರು: ಅರಣ್ಯ ಭೂಮಿ ಸ್ವಾಧೀನಕ್ಕೆ ಸಂಬಂಧಿಸಿದಂತೆ ಇರುವ ಅನುಮತಿಗಳನ್ನು ರಾಜ್ಯ ಸರ್ಕಾರ ನೀಡಿದರೆ ಚೆನ್ನೈ–ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿಯನ್ನು 2024ರ ಜನವರಿ 26ರಂದು ವಾಹನ ಸಂಚಾರಕ್ಕೆ ಸಮರ್ಪಿಸಲಾಗುವುದು ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದರು.

ಹೊಸಕೋಟೆ ಬಳಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿಯನ್ನು ವೈಮಾನಿಕ ಸಮೀಕ್ಷೆ ನಡೆಸಿದ ಅವರು, ‘ಕಾಮಗಾರಿ ಪೂರ್ಣಗೊಳಿಸಲು 2024ರ ಮಾರ್ಚ್‌ ತನಕ ಗಡುವಿದೆ’ ಎಂದು ಹೇಳಿದರು.

ಸದ್ಯ 300 ಕಿಲೋ ಮೀಟರ್ ಇರುವ ರಸ್ತೆಯಲ್ಲಿ ಸಾಗಲು 5 ಗಂಟೆ ಬೇಕಾಗುತ್ತಿದ್ದು, ಹೊಸ ರಸ್ತೆ 262 ಕಿಲೋ ಮಿಟರ್‌ಗೆ ಇಳಿಕೆಯಾಗಿದೆ. ಹೊಸಕೋಟೆ ಬಳಿಯ ರಿಂಗ್ ರಸ್ತೆಯಿಂದ ಆರಂಭವಾಗಿ ಚೆನ್ನೈ ಹೊರ ವರ್ತುಲ ರಸ್ತೆ ತನಕ 8 ಪಥದ ಈ ರಸ್ತೆಯಲ್ಲಿ ಗಂಟೆಗೆ 120 ಕಿಲೋ ಮೀಟರ್ ವೇಗದಲ್ಲಿ ವಾಹನಗಳು ಚಲಿಸಲು ಸಾಧ್ಯವಿದೆ. ಆದ್ದರಿಂದ 262 ಕಿಲೋ ಮೀಟರ್ ದೂರವನ್ನು 2 ಗಂಟೆ 15 ನಿಮಿಷಗಳಲ್ಲೇ ಕ್ರಮಿಸಲು ಸಾಧ್ಯವಿದೆ‌. ಮುಂದಿನ ದಿನಗಳಲ್ಲಿ ಚೆನ್ನೈಗೆ ಹೋಗಲು ವಿಮಾನ ಪ್ರಯಾಣ ಮಾಡುವ ಜನರೇ ಇಲ್ಲವಾಗಲಿದ್ದಾರೆ ಎಂದರು.

ಕರ್ನಾಟಕದಲ್ಲಿ 71 ಕಿಲೋ ಮೀಟರ್, ಆಂಧ್ರಪ್ರದೇಶದಲ್ಲಿ 85 ಕಿಲೋ ಮೀಟರ್‌ ಮತ್ತು ತಮಿಳುನಾಡಿನಲ್ಲಿ 106 ರಸ್ತೆ ಇರಲಿದೆ. ಒಟ್ಟಾರೆ ₹17 ಸಾವಿಯ ಕೋಟಿ ಮೊತ್ತದ ಯೋಜನೆಯಲ್ಲಿ ಕರ್ನಾಟಕ ಭಾಗದ ರಸ್ತೆಗೆ ₹5069 ಕೋಟಿ ವೆಚ್ಚವಾಗುತ್ತಿದೆ ಎಂದು ವಿವರಿಸಿದರು.

ಉತ್ಪಾದನಾ ವೆಚ್ಚದಲ್ಲಿ ಶೇ 16ರಷ್ಟು ಸಾಗಣೆಗೇ ಬೇಕಾಗುತ್ತಿದೆ. ಚೀನಾದಲ್ಲಿ ಇದು ಶೇ 10ರಷ್ಟು ಇದ್ದರೆ, ಅಮೆರಿಕದಲ್ಲಿ ಶೇ 12ರಷ್ಟು ಇದೆ. ಈ ವೆಚ್ಚ ಕಡಿಮೆ ಮಾಡಲು ಈ ರೀತಿಯ ರಸ್ತೆಗಳು ನೆರವಾಗಲಿವೆ. ಚೆನ್ನೈ–ಬೆಂಗಳೂರು ನಡುವಿನ ಹೊಸ ಹೆದ್ದಾರಿ ಕಾರ್ಯಾರಂಭಗೊಂಡರೆ ಈ ಭಾಗದ ಸರಕು ಸಾಗಣೆ ವೆಚ್ಚ ಶೇ 10ಕ್ಕಿಂತ ಕಡಿಮೆಯಾಗಲಿದೆ ಎಂದು ಹೇಳಿದರು.

ಶೇ 36ರಷ್ಟು ಕಾಮಗಾರಿ ಪೂರ್ಣಗೊಂಡಿದೆ. 231 ಕಿಲೋ ಮೀಟರ್‌ನಲ್ಲೂ ಕಾಮಗಾರಿ ಪ್ರಗತಿಯಲ್ಲಿದೆ. 31 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಅರಣ್ಯ ಭೂಮಿಗೆ ಸಂಬಂಧಿಸಿದಂತೆ ಕೆಲವು ಅನುಮತಿಗಳು ರಾಜ್ಯ ಸರ್ಕಾರದಿಂದ ಸಿಗಬೇಕಿದೆ. ಇದೆಲ್ಲವೂ ಸಿಕ್ಕರೆ 2024ರ ಜನವರಿ 26ರಂದೇ ಉದ್ಘಾಟನೆ ಮಾಡಲು ಯೋಚಿಸಲಾಗಿದೆ ಎಂದರು.

3ರಿಂದ 5 ಎಕರೆ ಜಾಗ ಇರುವ ಕಡೆ ಅಮೃತ ಮಹೋತ್ಸವ ಪಕ್ಷಿಧಾಮ ಮತ್ತು ಅಮೃತ ಸರೋವರ ಯೋಜನೆಗಳನ್ನು ಕೈಗೆತ್ತಿಕೊಳ್ಳುವಂತೆ ಎನ್‌ಎಚ್‌ಎಐ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದೂ ಅವರು ತಿಳಿಸಿದರು.

ಟೋಲ್ ಪ್ಲಾಜಾರಹಿತ ಹೆದ್ದಾರಿ

ಈ ಹೆದ್ದಾರಿಯಲ್ಲಿ ಟೋಲ್ ಪ್ಲಾಜಾಗಳು ಇರುವುದಿಲ್ಲ. ಆದರೆ, ಟೋಲ್‌ ಶುಲ್ಕ ಸಂಗ್ರಹವಾಗುತ್ತದೆ ಎಂದು ನಿತಿನ್ ಗಡ್ಕರಿ ಹೇಳಿದರು.

‘ಪ್ಲಾಜಾಗಳಲ್ಲಿ ವಾಹನಗಳನ್ನು ನಿಲ್ಲಿಸಿ ಫಾಸ್ಟ್‌ಟ್ಯಾಗ್ ಮೂಲಕ ಶುಲ್ಕ ಸಂಗ್ರಹಿಸುವ ಪದ್ಧತಿ ಇರುವುದಿಲ್ಲ. ಕೆಲವು ಪ್ರವೇಶ ಮತ್ತು ನಿರ್ಗಮನ ಸ್ಥಳದಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಯಾವ ವಾಹನ ಹೆದ್ದಾರಿ ಬಳಸಿದೆ ಎಂಬು‌ದು ಅಲ್ಲಿಯೇ ಪತ್ತೆಯಾಗಲಿದ್ದು, ಶುಲ್ಕ ಕೂಡ ಅವರ ಖಾತೆಯಿಂದ ಸಂಗ್ರಹವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT