ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ಬೇಪಾರಿಯಂತೆ ಓಡಾಡುತ್ತಿರುವ ಸಿದ್ದರಾಮಯ್ಯ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ವಿಚಾರ:
Last Updated 13 ನವೆಂಬರ್ 2022, 13:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಸಿದ್ದರಾಮಯ್ಯ ಅವರು ಎಲ್ಲಿಗೇ ಹೋದರೂ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವುದಿಲ್ಲ. ಹಾಗಾಗಿ, ಪ್ರತಿ ಸಲ ಚುನಾವಣೆ ಬಂದಾಗ ಅಬ್ಬೇಪಾರಿಯಂತ ಕ್ಷೇತ್ರಗಳನ್ನು ಹುಡುಕಿಕೊಂಡು ಓಡಾಡುತ್ತಿದ್ದಾರೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದರು.

ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸುತ್ತಾರೆಂಬ ವಿಚಾರ ಕುರಿತು, ನಗರದಲ್ಲಿ ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಚಾಮುಂಡೇಶ್ವರಿಯಲ್ಲಿ ಕೆಲಸ ಮಾಡದ ಅವರನ್ನು ಜನ ಸೋಲಿಸಿ ಮನೆಗೆ ಕಳಿಸಿದರು. ಬಾದಾಮಿಯಲ್ಲಿ ಏನು ಪುಣ್ಯ ಇತ್ತೋ ಆರಿಸಿ ಬಂದರು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ದೊಡ್ಡ ನಾಯಕರಾದವರಿಗೆ ಇಂತಹ ಗತಿ ಬರಬಾರದಿತ್ತು’ ಎಂದರು.

‘ಕೋಲಾರಕ್ಕೆ ಬಂದಿರುವ ಸಿದ್ದರಾಮಯ್ಯ ಅವರಿಗೆ ಅಲ್ಲಿನ ಜನರು ಚಾಮುಂಡೇಶ್ವರಿಯಲ್ಲಿ ಏನು ಮಾಡಿದ್ರಿ? ಬಾದಾಮಿಯಲ್ಲಿ ಏನು ಮಾಡಿದ್ರಿ? ಎಂದು ಕೇಳಬೇಕು. ಅಲ್ಲಿಯೂ ಅವರನ್ನು ಸೋಲಿಸಿ ಮನೆಗೆ ಕಳಿಸಬೇಕು ಎಂದು ಅಲ್ಲಿನ ಜನರಿಗೆ ಹೇಳುವೆ. ಅಲ್ಲದೆ, ಇನ್ನು ಸ್ವಲ್ಪ ದಿನದಲ್ಲಿ ಅವರು ಯಾವ ಪಕ್ಷಕ್ಕೆ ಹೋಗುತ್ತಾರೆಂದು ಕಾದು ನೋಡೋಣ’ ಎಂದು ಹೇಳಿದರು.

ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ‘ಸಿದ್ದರಾಮಯ್ಯ ಅವರು ಕ್ಷೇತ್ರ ಅದಲು ಬದಲು ಮಾಡಿಕೊಂಡೇ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ರಾಜಕಾರಣದಲ್ಲಿ ಒಂದು ಕ್ಷೇತ್ರ ಗಟ್ಟಿಯಾಗಿ ಹಿಡಿದುಕೊಂಡು ಜನರ ಮನಸ್ಸನ್ನು ಗೆದ್ದು ನಾಯಕರಾಗಬೇಕು’ ಎಂದು ಎಂದರು.

ಶಾಸಕ ಜಗದೀಶ ಶೆಟ್ಟರ್, ‘ಐದು ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದವರಿಗೆ ಒಮ್ಮೆ ಗೆದ್ದ ಕ್ಷೇತ್ರದಲ್ಲಿ ಮತ್ತೆ ಚುನಾವಣೆಗೆ ಸ್ಪರ್ಧಿಸಲು ಹೆದರಿಕೆ ಇದೆ ಅಂದರೆ, ಅವರ ವ್ಯಕ್ತಿತ್ವ ಎಂತಹದ್ದು ಎಂಬುದು ಅರ್ಥ ಆಗುತ್ತದೆ. ಬಾದಾಮಿಯಲ್ಲಿ ಕನಿಷ್ಠ ಮತಗಳ ಅಂತರದಿಂದ ಗೆದ್ದಿದ್ದ ಅವರು, ಅಲ್ಲಿ ಗೆದ್ದೂ ಸೋತಂತೆಯೇ ಆಗಿದ್ದರು. ಕಾಂಗ್ರೆಸ್ ಅಧೋಗತಿಗೆ ತಲುಪಿದೆ. ಏನೇ ಆದರೂ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT