ಗುರುವಾರ , ಆಗಸ್ಟ್ 18, 2022
25 °C
ವಿಜ್ಞಾನಿ ವಿ.ಕೆ. ಅತ್ರೆ ಸಮಿತಿ ಶಿಫಾರಸು

ವಿ.ವಿಗಳ ಸಾಂಸ್ಥಿಕ ರಚನೆಯೇ ಬದಲು: ಕುಲಪತಿ ಇನ್ನು ಮುಂದೆ ಸಿಇಒ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಸರ್ಕಾರದ ಅಧೀನದ ವಿಶ್ವವಿದ್ಯಾಲಯಗಳ ಸಾಂಸ್ಥಿಕ ರಚನೆಯಲ್ಲಿ ಬದಲಾವಣೆ, ಕುಲಪತಿಗಳ ನೇಮಕಕ್ಕೆ ಇನ್ನಷ್ಟು ಕಠಿಣ ನಿಯಮಾವಳಿಗಳೂ ಸೇರಿ ವಿಶ್ವವಿದ್ಯಾಲಯಗಳಿಗೆ ಸಮಗ್ರವಾಗಿ ಕಾಯಕಲ್ಪ ನೀಡುವ ಅಂಶಗಳನ್ನು ಒಳಗೊಂಡಿರುವ ವರದಿಯನ್ನು ವಿಜ್ಞಾನಿ ಡಾ.ವಾಸುದೇವ ಅತ್ರೆ (ವಿ.ಕೆ.ಅತ್ರೆ) ಅಧ್ಯಕ್ಷತೆಯ ಸಮಿತಿ ಸರ್ಕಾರಕ್ಕೆ ಸಲ್ಲಿಸಿದೆ.

‘ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಮಸೂದೆ 2017’ ಅನ್ನು ಪರಿಷ್ಕರಿಸುವ ಉದ್ದೇಶದಿಂದ ವರದಿಯನ್ನು ಪಡೆಯಲು ರಾಜ್ಯ ಸರ್ಕಾರ ಅತ್ರೆ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿತ್ತು. ಉನ್ನತ ಶಿಕ್ಷಣ ಇಲಾಖೆ ವರದಿಯ ಬಗ್ಗೆ ಸಾರ್ವಜನಿಕ ಚರ್ಚೆ ಮತ್ತು ಆಕ್ಷೇಪಣೆ ಸಲ್ಲಿಕೆಗಾಗಿ ವರದಿಯನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿದೆ. ರಾಜ್ಯದ 24 ವಿಶ್ವವಿದ್ಯಾಲಯಗಳನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ (ಐಐಎಂ) ಮಾದರಿಯಲ್ಲಿ ಅಭಿವೃದ್ಧಿ
ಪಡಿಸಲು ಸರ್ಕಾರ ಉದ್ದೇಶಿಸಿದೆ. 

ವರದಿಯ ಪ್ರಮುಖ ಅಂಶಗಳು:

ಉನ್ನತ ಶಿಕ್ಷಣ ಸಂಸ್ಥೆಗಳು (ಹೈಯರ್‌ ಎಜುಕೇಷನ್‌ ಇನ್‌ಸ್ಟಿಟ್ಯೂಟ್ಸ್‌): ವಿಶ್ವವಿದ್ಯಾಲಯ ಅಥವಾ ಕಾಲೇಜನ್ನು ‘ಉನ್ನತ ಶಿಕ್ಷಣ ಸಂಸ್ಥೆ’ ಎಂದು ಕರೆಯಲಾಗುತ್ತದೆ. ಈ ಉನ್ನತ ಶಿಕ್ಷಣ ಸಂಸ್ಥೆಯಡಿ ಅಂತರ್‌ ಶಿಸ್ತೀಯ ವಿಶ್ವವಿದ್ಯಾಲಯಗಳು, ಕಾಲೇಜುಗಳು, ಉನ್ನತ ಶಿಕ್ಷಣ
ಸಂಸ್ಥೆಯ ಕ್ಲಸ್ಟರ್‌ಗಳು, ಜ್ಞಾನ ಕೇಂದ್ರ ಇರುತ್ತವೆ. 

ಉನ್ನತ ಶಿ‌ಕ್ಷಣ ಸಂಸ್ಥೆಗಳನ್ನು ಮೂರು ವಿಧವಾಗಿ ವರ್ಗೀಕರಿಸಲಾಗಿದೆ–

l ‘ರೀಸರ್ಚ್‌ ಇಂಟೆನ್ಸಿವ್‌ ಯುನಿವರ್ಸಿಟೀಸ್‌’ (ಆರ್‌ಐಯು)– ಇಲ್ಲಿ ಗಂಭೀರ ಸಂಶೋಧನೆಗಳಿಗೆ ಒತ್ತು ನೀಡಲಾಗುವುದು. ಬೋಧನೆ ಮತ್ತು ಸಂಶೋಧನೆಗಳಿಗೆ ಆದ್ಯತೆ.

l ‘ಟೀಚಿಂಗ್‌ ಇಂಟೆನ್ಸಿವ್‌ ಯುನಿವರ್ಸಿಟೀಸ್‌ (ಟಿಐಯು)– ಈ ವಿಶ್ವವಿದ್ಯಾಲಯಗಳಲ್ಲಿ ಬೋಧನೆಗೆ ಪ್ರಧಾನ ಆದ್ಯತೆ ಇದ್ದರೂ ಸಂಶೋಧನೆಗಳಿಗೂ ಒತ್ತು ನೀಡಲಾಗುವುದು.

l ಸ್ವಾಯುತ್ತ ಪದವಿ ಕಾಲೇಜುಗಳು– ಪದವಿಗಳನ್ನು ನೀಡುವುದರ ಜತೆಗೆ ಬೋಧನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

ಸೆನೆಟ್‌, ಸಿಂಡಿಕೇಟ್‌ ಹೆಸರು ಬದಲು: ಹಲವು ದಶಕಗಳಿಂದ ಇದ್ದ ಸೆನೆಟ್‌, ಸಿಂಡಿಕೇಟ್‌, ಅಕಾಡೆಮಿಕ್‌ ಕೌನ್ಸಿಲ್‌ಗಳು ಇನ್ನು ಮುಂದೆ ಇರುವುದಿಲ್ಲ. ಇವುಗಳ ಹೆಸರನ್ನು ಬದಲಿಸಿ, ‘ಅಕಾಡೆಮಿಕ್‌  ಸೆನೆಟ್‌’ ಮತ್ತು ‘ಬೋರ್ಡ್‌ ಆಫ್‌ ಗವರ್ನರ್ಸ್‌’ ಎಂದು ಕರೆಯಲಾಗುವುದು.

‘ಫ್ಯಾಕಲ್ಟಿ’ಗಳನ್ನು ‘ಸ್ಕೂಲ್ಸ್‌’ ಎಂದೂ ಬದಲಿಸಲು ಸೂಚಿಸಲಾಗಿದೆ.

l ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳು ಅಂತರ್‌ ಶಿಸ್ತೀಯ ಸಂಸ್ಥೆಯಾಗಿ ರೂಪುಗೊಳ್ಳಬೇಕು. ಆ ಬಳಿಕ ಅಗತ್ಯಕ್ಕೆ ತಕ್ಕಂತೆ ವಿದ್ಯಾರ್ಥಿಗಳ ಸಂಖ್ಯೆಯನ್ನೂ ಹೆಚ್ಚಿಸಬೇಕು. 2040ರ ವೇಳೆಗೆ ಪ್ರತಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 3,000 ತಲುಪುತ್ತದೆ.

l ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌ ಮತ್ತು ಗಣಿತದ ಜತೆ ಮಾನವಿಕ ವಿಷಯಗಳನ್ನೂ ಅಳವಡಿಸಲಾಗುವುದು.

l ಈ ವರದಿಗೆ ಒಪ್ಪಿಗೆ ಸಿಕ್ಕಿ
ವಿಧಾನಮಂಡಲದಲ್ಲಿ ಮಸೂದೆ ಅನುಮೋದನೆಗೊಂಡರೆ, ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆ 2000, ಕನ್ನಡ ವಿಶ್ವವಿದ್ಯಾಲಯ ಕಾಯ್ದೆ 1991, ವಿಟಿಯು ಕಾಯ್ದೆ 1994, ಕರ್ನಾಟಕ ರಾಜ್ಯ ಮುಕ್ತ
ವಿಶ್ವವಿದ್ಯಾಲಯಗಳ ಕಾಯ್ದೆ 1992, ಡಾ.ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ 2009, ಸಂಸ್ಕೃತ ವಿಶ್ವವಿದ್ಯಾಲಯ ಕಾಯ್ದೆ 2009, ಜನಪದ ವಿಶ್ವವಿದ್ಯಾಲಯ ಕಾಯ್ದೆ 2011 ಮತ್ತು ಡಾ.ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕಾನಮಿಕ್ಸ್‌
ಕಾಯ್ದೆ 2018 ನಿಷ್ಕ್ರಿಯಗೊಳ್ಳಲಿದೆ.

ಕುಲಪತಿ ಇನ್ಮುಂದೆ ಸಿಇಒ!

ವಿಶ್ವವಿದ್ಯಾಲಯಗಳ ಕುಲಪತಿಗಳು ‘ಮುಖ್ಯ ಕಾರ್ಯನಿರ್ವಾಹಕ ಮತ್ತು ಅಕಾಡೆಮಿಕ್‌ ಅಧಿಕಾರಿ’ಯಾಗಿ ಕಾರ್ಯನಿರ್ವಹಿಸಬೇಕು. ವಿಶ್ವವಿದ್ಯಾಲಯಕ್ಕೆ ಇವರದ್ದೇ ನಾಯಕತ್ವ. ವಿಶ್ವವಿದ್ಯಾಲಯದ ಮೇಲುಸ್ತುವಾರಿಯ ಜತೆಗೆ ಎಲ್ಲ ವ್ಯವಹಾರಗಳ ಮೇಲೂ ನಿಯಂತ್ರಣವನ್ನು ಹೊಂದಿರುತ್ತಾರೆ. ವಿವಿಧ ಅಧಿಕಾರಿಗಳ ನಿರ್ಣಯದ ಮೇಲೂ ಹಿಡಿತವಿರುತ್ತದೆ.

ಕುಲಪತಿ ಹುದ್ದೆಗೆ ನೇಮಕ ಆಗುವವರು ವಿಷಯದಲ್ಲಿ ಅತ್ಯುತ್ಕೃಷ್ಟ ಸಾಧನೆ ಮಾಡಿರಬೇಕಲ್ಲದೇ, ಸಾಮರ್ಥ್ಯ, ಸಮಗ್ರತೆ, ನೈತಿಕತೆ, ಸಾಂಸ್ಥಿಕ ಬದ್ಧತೆ, ಆಡಳಿತದ ಚಾಕಚಕ್ಯತೆ ಜತೆಗೆ ಯುಜಿಸಿ ನಿಗದಿಪಡಿಸಿರುವ ಮಾನದಂಡಕ್ಕೆ ಅನುಗುಣವಾಗಿರಬೇಕು. 

ಕುಲಪತಿಯ ನೇಮಕದ ಅಧಿಕಾರ ‘ಬೋರ್ಡ್‌ ಆಫ್‌ ಗವರ್ನರ್ಸ್‌’ ಗೆ ಇರುತ್ತದೆ. ಬೋರ್ಡ್‌ ಆಫ್‌ ಗವರ್ನರ್ಸ್‌ ಇದಕ್ಕಾಗಿ ಶೋಧನಾ ಸಮಿತಿಯನ್ನು ರಚಿಸುತ್ತದೆ. ಶೋಧನಾ ಸಮಿತಿ ನೀಡುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಒಂದನ್ನು ಆಯ್ಕೆ ಮಾಡಲಾಗುತ್ತದೆ. ಹಾಲಿ ಕುಲಪತಿ ಅವಧಿ ಮುಗಿಯುವುದಕ್ಕೆ ಮೂರು ತಿಂಗಳು ಮೊದಲೇ ಶೋಧನಾ ಸಮಿತಿ ನೇಮಿಸಲಾಗುತ್ತದೆ. ಈ ಸಮಿತಿಯಲ್ಲಿ ಮೂವರು ಸದಸ್ಯರಿರುತ್ತಾರೆ.

ಖಾಸಗಿ ಟ್ಯೂಷನ್‌ಗೆ ನಿರ್ಬಂಧ

ವಿಶ್ವವಿದ್ಯಾಲಯಗಳು ಮತ್ತು ಅದಕ್ಕೆ ಸಂಯೋಜನೆಗೊಂಡ ಕಾಲೇಜು ಅಥವಾ ಶಿಕ್ಷಣ ಸಂಸ್ಥೆಗಳ ಅಧ್ಯಾಪಕ ಖಾಸಗಿ ಟ್ಯೂಷನ್‌ ನಡೆಸುವಂತಿಲ್ಲ. ಒಂದು ವೇಳೆ ಖಾಸಗಿ ಟ್ಯೂಷನ್‌ ನಡೆಸಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು.

ನೌಕರರಿಗೆ ಒಂದು ವಿಶ್ವವಿದ್ಯಾಲಯದಿಂದ ಮತ್ತೊಂದು ವಿಶ್ವವಿದ್ಯಾಲಯ ವರ್ಗಾವಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆಡಳಿತಾತ್ಮಕ ಕಾರಣಗಳು ಮತ್ತು ಕೋರಿಕೆಯ ಮೇಲೆ ಯಾವುದೇ ವಿಶ್ವವಿದ್ಯಾಲಯಕ್ಕೂ ವರ್ಗಾವಣೆ ಮಾಡಬಹುದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು