ಶನಿವಾರ, ಡಿಸೆಂಬರ್ 4, 2021
26 °C
ಶೀಘ್ರ ತಜ್ಞರ ಸಮಿತಿ ರಚನೆ– ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ

ಹುದ್ದೆ ಭರ್ತಿ: ವಿವಿಗಳಿಗೆ ಸ್ವಾಯತ್ತತೆ- ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಖಾಲಿ ಇರುವ ಬೋಧಕ ಹುದ್ದೆಗಳನ್ನು ತುಂಬುವ ಜೊತೆಗೆ, ಆರ್ಥಿಕ ಹೊಣೆಗಾರಿಕೆ ನಿಭಾಯಿಸಲು ಪೂರಕವಾಗುವಂತೆ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಿಗೆ ‘ಸ್ವಾಯತ್ತತೆ’ ನೀಡಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಅಲ್ಲದೆ, ನೇಮಕಾತಿ ಪ್ರಾಧಿಕಾರದ ಮೂಲಕ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಿ ‘ಅರ್ಹರ ಪಟ್ಟಿ’ಯೊಂದನ್ನು ಸಿದ್ಧಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ. ಆ ಪಟ್ಟಿಯಿಂದಲೇ ಅವಶ್ಯಕತೆಗೆ ತಕ್ಕಂತೆ ಬೋಧಕರನ್ನು ಎಲ್ಲಾ ವಿಶ್ವವಿದ್ಯಾಲಯಗಳು ಭರ್ತಿ ಮಾಡಿಕೊಳ್ಳಲು ಅವಕಾಶವಾಗುವಂತೆ ನೂತನ ಪದ್ಧತಿ ಅಳವಡಿಸಿಕೊಳ್ಳಲು ಇಲಾಖೆ ಮುಂದಾಗಿದೆ.

‘ಪ್ರಜಾವಾಣಿ’ ಜೊತೆ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ‘ಈ ಉದ್ದೇಶದಿಂದ ಆರ್ಥಿಕ ಇಲಾಖೆ, ಉನ್ನತ ಶಿಕ್ಷಣ ಪರಿಷತ್‌ ಅಧಿಕಾರಿಗಳ ಜೊತೆ ಈಗಾಗಲೇ ಚರ್ಚಿಸಿದ್ದೇನೆ. ಸಮಗ್ರವಾದ ರೂಪರೇಷೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಹಾಲಿ– ಮಾಜಿ ಕುಲಪತಿಗಳ ಸಮಿತಿಯೊಂದನ್ನು ಶೀಘ್ರದಲ್ಲಿ ರಚಿಸಲಾಗುವುದು. ಎಲ್ಲ ವಿಶ್ವವಿದ್ಯಾಲಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಸಮಿತಿ ಒಂದು ತಿಂಗಳ ಒಳಗೆ ಸರ್ಕಾರಕ್ಕೆ ಶಿಫಾರಸುಗಳನ್ನು ಸಲ್ಲಿಸಲಿದೆ’ ಎಂದರು.

‘ಎಲ್ಲ ವಿಶ್ವವಿದ್ಯಾಲಯಗಳು ಕೇಂದ್ರೀಕೃತವಾಗಿವೆ ನಿಜ. ಸ್ವಾಯತ್ತತೆ ಕೊಟ್ಟಿದ್ದರೂ, ಅವು ಪೂರ್ತಿ ಸ್ವಾಯತ್ತ ಆಗಿಲ್ಲ ಎನ್ನುವುದೂ ವಾಸ್ತವ. ಹಲವಾರು ಆಡಳಿತಾತ್ಮಕ ಸವಾಲುಗಳಿವೆ. ಹುದ್ದೆಗಳನ್ನು ಮಂಜೂರು ಮಾಡಿದ್ದರೂ ಅವುಗಳನ್ನು ಭರ್ತಿ ಮಾಡಲು ಹಣಕಾಸು ಅಥವಾ ಇತರ ಕಾರಣ ನೀಡಿ ವ್ಯವಸ್ಥೆಯು ತನ್ನದೇ ಆದ ಸಮಯ ತೆಗೆದುಕೊಳ್ಳುತ್ತಿದೆ. ಹೀಗಾಗಿ, ಹಲವು ವಿಶ್ವವಿದ್ಯಾಲಯಗಳಲ್ಲಿ ಸುದೀರ್ಘ ಅವಧಿಯಿಂದ ನೂರಾರು ಹುದ್ದೆಗಳು ಖಾಲಿ ಇವೆ. ಈ ದಿಕ್ಕಿನಲ್ಲಿ ವ್ಯವಸ್ಥೆಯನ್ನು ಸಡಿಲಗೊಳಿಸಬೇಕಿದೆ. ಆ ಮೂಲಕ, ವಿಶ್ವವಿದ್ಯಾಲಯಗಳಿಗೆ ಸ್ವಾಯತ್ತತೆ ನೀಡಿ, ಅಲ್ಲಿಯೇ ನೇಮಕಾತಿ ಮಾಡಿಕೊಳ್ಳುವ ಅವಕಾಶ ಕಲ್ಪಿಸಲು ನಿರ್ಧರಿಸಿದ್ದೇನೆ’ ಎಂದರು.

‘ವಿಶ್ವವಿದ್ಯಾಲಯಗಳಲ್ಲಿ ಯಾವುದೋ ಕಾಲದಲ್ಲಿ ಯಾವುದೋ ವಿಷಯದ ಹುದ್ದೆಗೆ ಮಂಜೂರಾತಿ ಕೊಡುತ್ತೇವೆ. ನಿಜಕ್ಕೂ ಅದು ಅಗತ್ಯವಿದೆಯೇ, ಇಲ್ಲವೇ ಎಂಬುದು ಗೊತ್ತಿರುವುದಿಲ್ಲ. ಮುಂದಿನ ದಿನಗಳಲ್ಲಿ ಆ ಹುದ್ದೆಗಳನ್ನೇ ಭರ್ತಿ ಮಾಡುವ ವ್ಯವಸ್ಥೆ ಇದೆ. ನೇಮಕಾತಿಗೆ ಈಗ ವರ್ಷಗಟ್ಟಲೆ ತೆಗೆದುಕೊಳ್ಳುತ್ತಿದ್ದೇವೆ. ಇನ್ನು ಮುಂದೆ ಅದಕ್ಕೆ ಅವಕಾಶ ಆಗಬಾರದು. ಅವಶ್ಯಕತೆ ಆಧರಿತವಾಗಿ ನೇಮಕಾತಿಗಳು ನಡೆಯಬೇಕು. ಯಾವ ವಿಷಯ, ಯಾವ ಹುದ್ದೆ ಎಂದು ನಿರ್ಧರಿಸಲು ಮತ್ತು ಹಣಕಾಸು ವಿಚಾರದಲ್ಲಿ ಸರ್ಕಾರದ ಪಾಲುದಾರಿಕೆ ಯಾವ ರೀತಿಯಲ್ಲಿ ಇರಬೇಕು ಎಂದು ತೀರ್ಮಾನಗಳನ್ನು ತೆಗೆದುಕೊಂಡು ವಿಶ್ವವಿದ್ಯಾಲಯಗಳಿಗೆ ಸ್ವಾಯತ್ತತೆ‌ ಕೊಡಲು ಉದ್ದೇಶಿಸಲಾಗಿದೆ. ತಜ್ಞರ ಸಮಿತಿ ಈ ಬಗ್ಗೆ ಅಧ್ಯಯನ ಮಾಡಿ ಪ್ರಸ್ತಾವ ಸಲ್ಲಿಸಲಿದೆ’ ಎಂದು ಅವರು ವಿವರಿಸಿದರು.

‘ಗುಣಮಟ್ಟ, ಪ್ರತಿಭೆ ಇಲ್ಲ. 5 ವರ್ಷಕ್ಕೊಮ್ಮೆ 10 ವರ್ಷಕ್ಕೊಮ್ಮೆ ನೇಮಕಾತಿ ನಡೆಯುತ್ತಿದೆ ಎಂಬ ಆರೋಪ ಉನ್ನತ ಶಿಕ್ಷಣ ವಲಯದಲ್ಲಿದೆ. ಅವುಗಳಿಗೆ ಕೊನೆ ಹಾಡಬೇಕಿದೆ. ಬೋಧನೆ ಅತ್ಯುತ್ತಮ ಮಟ್ಟದ್ದಾಗಿರಬೇಕು ಎಂಬ ಉದ್ದೇಶದಿಂದ ಬೋಧಕರಿಗೆ ಯುಜಿಸಿ (ವಿಶ್ವವಿದ್ಯಾಲಯ ಅನುದಾನ ಆಯೋಗ) ವೇತನ ನೀಡಲಾಗುತ್ತಿದೆ. ಹುದ್ದೆಗಳು ಖಾಲಿ ಆಗುತ್ತಿದ್ದಂತೆ ಭರ್ತಿ ಆಗಬೇಕು. ಪ್ರತಿ ವರ್ಷ ನೇಮಕಾತಿಗಳು ನಡೆಯಬೇಕು. ಕೋರ್ಸ್‌ಗೂ ಮೊದಲೇ ಅಗತ್ಯ ಸಂಖ್ಯೆಯ ಬೋಧಕರನ್ನು ನೇಮಕಾತಿ ಮಾಡಿಕೊಳ್ಳಬೇಕಿದೆ. ಆ ಮೂಲಕ, ಉನ್ನತ ಶಿಕ್ಷಣದ ಧ್ಯೇಯೋದ್ದೇಶ ಈಡೇರಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ಅರ್ಹ ಬೋಧಕರ ಪಟ್ಟಿ’

‘ಹುದ್ದೆ ಖಾಲಿ ಆಗುತ್ತಿದ್ದಂತೆ ಪ್ರತಿವರ್ಷ ನೇಮಕಾತಿ ಮಾಡಿಕೊಳ್ಳಲು ಸಾಧ್ಯವಾಗುವಂತೆ ರಾಜ್ಯಮಟ್ಟದಲ್ಲಿ ‘ಕಾಮನ್ ಪೂಲ್‌’ (ಅರ್ಹರ ಪಟ್ಟಿ) ಸಿದ್ಧಪಡಿಸಿಟ್ಟುಕೊಳ್ಳಲು ತೀರ್ಮಾನಿಸಲಾಗಿದೆ. ಅರ್ಹತಾ ಪರೀಕ್ಷೆ (ಕೆ–ಸೆಟ್‌, ನೆಟ್‌) ಪಾಸಾದವರನ್ನು ನೇಮಕಾತಿ ಪ್ರಾಧಿಕಾರದ ಮೂಲಕ ಪಾರದರ್ಶಕ ಆಯ್ಕೆ ಮಾಡಿ ಪಟ್ಟಿ ತಯಾರಿಸಲಾಗುವುದು. ಅವಶ್ಯ ಇರುವ ವಿಶ್ವವಿದ್ಯಾಲಯಗಳು, ಅನುದಾನಿತ ಸಂಸ್ಥೆಗಳು ತಮಗೆ ಅಗತ್ಯ ಇರುವ ಬೋಧಕ ಸಿಬ್ಬಂದಿಯನ್ನು ಈ ಪಟ್ಟಿಯಿಂದ ನೇಮಿಸಿಕೊಳ್ಳಬಹುದು ಅಥವಾ ನೇಮಕಾತಿ ಪ್ರಾಧಿಕಾರದಿಂದ ಪಡೆದುಕೊಳ್ಳಬಹುದು. ಮಧ್ಯವರ್ತಿಗಳ, ಸರ್ಕಾರದ ಹಸ್ತಕ್ಷೇಪಕ್ಕೆ ಅವಕಾಶವೇ ಇರುವುದಿಲ್ಲ. ಪಾರದರ್ಶಕ ಮತ್ತು ದುರ್ಬಳಕೆಗೆ ಅವಕಾಶ ಸಿಗದಂತೆ ಈ ವ್ಯವಸ್ಥೆಯನ್ನು ರೂಪಿಸಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದರು.

₹ 50 ಲಕ್ಷ ಲಂಚ: ಸಚಿವ ವಿಷಾದ

‘ಸದ್ಯದ ಬೇಡಿಕೆ–ಪೂರೈಕೆ ಗಮನಿಸಿ, ಖಾಲಿ ಹುದ್ದೆಯನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಅರ್ಹರ ಸಂಖ್ಯೆ ಕಡಿಮೆ ಇದೆ. ಅನೇಕರಿಗೆ ಈ ವಿಷಯ ಗೊತ್ತಿಲ್ಲ. ಹೀಗಾಗಿ, ₹ 50 ಲಕ್ಷ, ₹ 60 ಲಕ್ಷ ಲಂಚ ಕೊಟ್ಟು ಹುದ್ದೆ ಪಡೆಯಲು ಪೈಪೋಟಿಗಿಳಿಯುವ ವ್ಯವಸ್ಥೆ ನಿರ್ಮಾಣವಾಗಿದೆ. ಭ್ರಷ್ಟಾಚಾರ, ಅಕ್ರಮ ನೇಮಕಾತಿಗಳಿಗೆ ಅವಕಾಶವಾಗುತ್ತಿದೆ. ಅದರಲ್ಲೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಸಂಬಳದಲ್ಲಿಯೇ ಪಾಲು ಪಡೆಯುವ ವ್ಯವಸ್ಥೆಯ ಬಗ್ಗೆಯೂ ಆರೋಪಗಳಿವೆ. ಈ ಎಲ್ಲವನ್ನೂ ತಡೆಯಬೇಕಿದೆ. ಹುದ್ದೆ ಭರ್ತಿಯ ವೇಳೆ ಗುಣಮಟ್ಟಕ್ಕೆ ಆದ್ಯತೆ, ಪ್ರತಿಭಾವಂತರಿಗೆ ಅವಕಾಶ ಸಿಗಬೇಕು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು