ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರು, ಬಂಗಲೆ‌‌ ಮರಳಿಸಿದ ವಿಧಾನ ಪರಿಷತ್ ಸಭಾಪತಿ ಕೆ.‌ ಪ್ರತಾಪಚಂದ್ರ ಶೆಟ್ಟಿ 

Last Updated 21 ಡಿಸೆಂಬರ್ 2020, 15:38 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಪರಿಷತ್‌ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ವಿಧಾನ ಮಂಡಲದಿಂದ ತಮಗೆ ಒದಗಿಸಿದ್ದ ಕಾರು ಮತ್ತು ಬಂಗಲೆಯನ್ನು ಹಿಂದಿರುಗಿಸಿದ್ದಾರೆ.

ಪ್ರತಾಪಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಅಂಗೀಕರಿಸಿ, ಅವರನ್ನು ಸಭಾಪತಿ ಸ್ಥಾನದಿಂದ ಕೆಳಕ್ಕಿಳಿಸಲು ಬಿಜೆಪಿ ಮತ್ತು ಜೆಡಿಎಸ್‌ ಒಂದಾಗಿವೆ. ವಿಧಾನ ಮಂಡಲದ ಕಳೆದ ಅಧಿವೇಶನ ಮತ್ತು ಡಿಸೆಂಬರ್‌ 15ರಂದು ನಡೆದ ವಿಧಾನ ಪರಿಷತ್‌ ಅಧಿವೇಶನದಲ್ಲಿ ನಿರ್ಣಯ ಮಂಡನೆಗೆ ಉಭಯ ಪಕ್ಷಗಳು ಯತ್ನಿಸಿದ್ದವು. ಈ ಎಲ್ಲ ಬೆಳವಣಿಗೆಗಳಿಂದ ಬಹುತೇಕ ಪರಿಷತ್‌ ಸಭಾಪತಿ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರಕ್ಕೆ ಬಂದಿರುವ ಅವರು, ಈ ಕಾರಣಕ್ಕಾಗಿಯೇ ಕಾರು ಮತ್ತು ಬಂಗಲೆ ಹಿಂದಿರುಗಿಸಿದ್ದಾರೆ ಎನ್ನಲಾಗಿದೆ.

ಡಿ.15ರ ಅಧಿವೇಶನದಲ್ಲಿ ಉಪ ಸಭಾಪತಿ ಎಸ್‌.ಎಲ್‌. ಧರ್ಮೇಗೌಡ ಅವರನ್ನು ಸಭಾಪತಿ ಪೀಠದಲ್ಲಿ ಕುಳ್ಳಿರಿಸಿದ್ದ ಬಿಜೆಪಿ, ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಿತ್ತು. ಈ ಕಾರಣಕ್ಕಾಗಿಯೇ ಸದನದಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು. ಬಳಿಕ ಕಲಾಪವನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಲಾಗಿತ್ತು.

ಅಧಿವೇಶನ ಮುಗಿಸಿದ ಬಳಿಕ ಬೆಂಗಳೂರಿನಿಂದ ಊರಿಗೆ ಹಿಂದಿರುಗಿದ ಸಭಾಪತಿ, ಶನಿವಾರವೇ ಸರ್ಕಾರಿ ಕಾರನ್ನು ವಾಪಸ್‌ ಕಳುಹಿಸಿದ್ದಾರೆ. ಆ ದಿನವೇ ವಿಧಾನಮಂಡಲ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದು ಬಂಗಲೆಯನ್ನು ಸ್ವಾಧೀನಕ್ಕೆ ಪಡೆಯುವಂತೆ ಕೋರಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪ್ರತಾಪಚಂದ್ರ ಶೆಟ್ಟಿ, ‘ಶನಿವಾರವೇ ಕಾರನ್ನು ಸರ್ಕಾರಕ್ಕೆ ಮರಳಿಸಿದ್ದೇನೆ. ಬಂಗಲೆಯನ್ನೂ ತೆರವು ಮಾಡಿದ್ದೇನೆ. ಪರಿಶೀಲನೆ ನಡೆಸಿ ಸ್ವಾಧೀನಕ್ಕೆ ಪಡೆಯುವಂತೆ ಪತ್ರವನ್ನೂ ಬರೆದಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT