ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದನವನ್ನು ರಾಜಕೀಯ ವೇದಿಕೆಯಾಗಿಸುವ ಮನಸ್ಥಿತಿಯಿಂದ ಹೊರಬರಬೇಕು: ಕಾಗೇರಿ

Last Updated 25 ಮಾರ್ಚ್ 2021, 10:26 IST
ಅಕ್ಷರ ಗಾತ್ರ

ಬೆಂಗಳೂರು: ‘ವಿರೋಧ ಪಕ್ಷ ಸದನವನ್ನು ರಾಜಕೀಯ ವೇದಿಕೆಯಾಗಿ ಮಾಡುವ ಮನಸ್ಥಿತಿಯಿಂದ ಹೊರಬರಬೇಕು. ರಾಜಕೀಯ ಹೋರಾಟವೇನಿದ್ದರೂ ಸದನದ ಹೊರಗೆ ನಡೆಯಲಿ. ಸದನದ ಒಳಗೆ ಅರ್ಥಪೂರ್ಣ ಚರ್ಚೆ, ತರ್ಕ, ವಿರೋಧ ವ್ಯಕ್ತಪಡಿಸಲು ಅವಕಾಶವಿದೆ. ಆದರೆ, ಅದೇ ಸಂದರ್ಭದಲ್ಲಿ ಸಂಸದೀಯ ಮೌಲ್ಯಗಳನ್ನೂ ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಅಧಿವೇಶನಕ್ಕೆ ಸಚಿವರು, ಶಾಸಕರ ಗೈರಿ, ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸದಿರುವಿಕೆ ವಿಷಾದದ ಸಂಗತಿ’ ಎಂದರು. ‘ಸದನದಲ್ಲಿ ಭಾಗವಹಿಸಿ, ಚರ್ಚೆಗಳಲ್ಲಿ ಭಾಗವಹಿಸುವ ಬಗ್ಗೆ ಶಾಸಕರು, ಸಂಕಲ್ಪ ಮಾಡಬೇಕು’ ಎಂದು ಅವರು ಸಲಹೆ ನೀಡಿದರು.

‘ಈ ಬಾರಿ ಅಧಿವೇಶನವನ್ನು ಎರಡು ದಿನ ಮೊದಲೇ ಮೊಟಕುಗೊಳಿಸಬೇಕಾದ ಅನಿವಾರ್ಯತೆ ಎದುರಾಯಿತು. ಅಧಿವೇಶನದ ಮೊದಲ ಎರಡು ದಿನವನ್ನು ‘ಒಂದು ದೇಶ– ಒಂದು ಚುನಾವಣೆ’ ವಿಷಯದ ಚರ್ಚೆಗೆ ನಿಗದಿಪಡಿಸಲಾಗಿತ್ತು. ಆದರೆ, ವಿರೋಧ ಪಕ್ಷದ ಅಸಹಕಾರದಿಂದ ಚರ್ಚೆಗೆ ಅವಕಾಶ ಸಿಗದೇ ಇದ್ದುದು ಬೇಸರ ಉಂಟು ಮಾಡಿದೆ’ ಎಂದರು.

‘ಸದನ ನಡೆಯುವುದೇ ವರ್ಷಕ್ಕೆ 30ರಿಂದ 40 ದಿನ. ಅದರಲ್ಲಿ ಭಾಗವಹಿಸುವ ವಿಷಯದಲ್ಲಿ ಸಚಿವರು,ಶಾಸಕರು, ಅಧಿಕಾರಿಗಳು ಸ್ವಯಂ ಶಿಸ್ತು, ಸ್ವಯಂ ಜಾಗೃತಿ ಬೆಳೆಸಿಕೊಳ್ಳಬೇಕು. ಆದರೆ, ಅನೇಕರು ಹಾಜರಿ ಪಟ್ಟಿಯಲ್ಲಿ ಸಹಿ ಹಾಕಿದ್ದದ್ದರೂ, ಸದನದ ಒಳಗಡೆ ಕೋರಂ ಇರುವುದಿಲ್ಲ. ಸಚಿವರು, ಶಾಸಕರು ಬೇರೆ, ಬೇರೆ ಕಾರಣ ಹೇಳಿ ಹಾಜರಾತಿಯಿಂದ ವಿನಾಯಿತಿ ಕೇಳುತ್ತಾರೆ. ಭಾಗವಹಿಸಿದವರೂ ಸಕ್ರಿಯರಾಗಿ ತೊಡಗಿಸಿಕೊಳ್ಳುವುದಿಲ್ಲ’ ಎಂದರು.

‘ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಜನರ ಧ್ವನಿಯಾಗಿ ಕೆಲಸ ಮಾಡಬೇಕು. ಸದನ ಎನ್ನುವಂಥದ್ದು ಜನರ ಭಾವನೆಗಳನ್ನು ವ್ಯಕ್ತಪಡಿಸಲು ಇರುವ ವೇದಿಕೆ. ತುರ್ತು ಕಾರಣಗಳಿಗೆ ಗೈರಾಗಲೇ ಬೇಕಾಗುತ್ತದೆ. ಆದರೆ, ನಿತ್ಯದ, ಸಾಮಾನ್ಯ ಕಾರ್ಯಕ್ರಗಳ ಕಾರಣಕ್ಕೆ ಸದನಕ್ಕೆ ಗೈರಾಗುವುದು ಸರಿಯಲ್ಲ’ ಎಂದೂ ಕಾಗೇರಿ ಅಭಿಪ್ರಾಯಪಟ್ಟರು.

‘ಪ್ರಸಕ್ತ ಅಧಿವೇಶನದಲ್ಲಿ ವಿರೋಧ ಪಕ್ಷದ ಪಾತ್ರ ಅತ್ಯಂತ ನೋವು ತಂದಿದೆ. ಆಡಳಿತ ಪಕ್ಷಕ್ಕೆ ಇರುವಷ್ಟೇ ಹೊಣೆಗಾರಿಗೆ ವಿರೋಧ ಪಕ್ಷಕ್ಕೂ ಇದೆ. ಆದರೆ, ಪ್ರತಿಪಕ್ಷದ ವರ್ತನೆ ಖೇದ ತಂದಿದೆ. ಸಂಸದೀಯ ವ್ಯವಸ್ಥೆಗೆ ಶಕ್ತಿ ತುಂಬುವಲ್ಲಿ ವಿರೋಧ ಪಕ್ಷದ ಪಾತ್ರ ಕೂಡಾ ಮಹತ್ವದ್ದು. ಚರ್ಚೆಯಲ್ಲಿ ಭಾಗವಹಿಸಲು ಭಾಗವಹಿಸಲು ಇಷ್ಟ ಇಲ್ಲದಿದ್ದವರು ಇತರ ಸದಸ್ಯರಿಗಾದರೂ ಚರ್ಚೆಯಲ್ಲಿ ಭಾಗವಹಿಸಲು ಅವಕಾಶ ನೀಡಬೇಕಿತ್ತು. ಆದರೆ ಅದಕ್ಕೂ ಅವಕಾಶ ಸಿಗಲಿಲ್ಲ. ಈ ವರ್ತನೆ ಅಕ್ಷಮ್ಯ. ಯಾರೂ ಒಪ್ಪುವಂಥದ್ದಲ್ಲ’ ಎಂದೂ ಅಭಿಪ್ರಾಯಪಟ್ಟರು.

‘ಆಡಳಿತ ಪಕ್ಷದ ಜೊತೆಗಿನ ಭಿನ್ನಾಭಿಪ್ರಾಯದ ಕಾರಣಕ್ಕೆ ಕಲಾಪ ಸಹಲಾ ಸಮಿತಿ ಸಭೆಯಲ್ಲೂ ಅಸಹಕಾರ ತೋರಿಸಿರುವುದು ಸರಿಯಲ್ಲ. ಇದು ದುಃಸ್ಥಿತಿ ಅಲ್ಲದೆ ಇನ್ನೇನು? ಅಭಿಪ್ರಾಯ ಭೇದ ಇದ್ದರೆ ನಿಂತುಕೊಡು ಮಾತನಾಡಬೇಕು. ಉಳಿದ ಸದಸ್ಯರಿಗೂ ಅವಕಾಶ ನೀಡಬೇಕು. ಆದರೆ, ವಿರೋಧ ಪಕ್ಷದ ವರ್ತನೆ ಇಡೀ ವ್ಯವಸ್ಥೆಗೆ ಶೋಭೆ ತರುವಂಥದ್ದಲ್ಲ’ ಎಂದೂ ಹೇಳಿದರು.

‘ಸದನದ ಒಳಗೆ ಮಾತಿನಲ್ಲಿ, ಕ್ರಿಯೆಯಲ್ಲಿ ರಾಜಕೀಯ ಇರಲಿ. ಅದು ಸಂಸದೀಯ ಮೌಲ್ಯಗಳಿಗೆ ಪೂರಕವಾಗಿರಲಿ. ಆಡಳಿತ ಪಕ್ಷದ ನೂನ್ಯತೆಗಳನ್ನು ಎತ್ತಿ ತೋರಿಸಲಿ. ಆ ಚೌಕಟ್ಟಿನಲ್ಲಿ ಚರ್ಚೆ ನಡೆಯಲಿ. ಚರ್ಚೆಗೇ ಅವಕಾಶ ಇಲ್ಲ. ಉಳಿದವರಿಗೂ ಅವಕಾಶ ನೀಡುವುದಿಲ್ಲವೆಂದರೆ ಹೇಗೆ‘ ಎಂದೂ ಪ್ರಶ್ನಿಸಿದರು.

ಪರಿಶೀಲಿಸಿ ಕ್ರಮ: ‘ಸಚಿವ ಡಾ.ಕೆ. ಸುಧಾಕರ್‌ ನೀಡಿರುವ ಹೇಳಿಕೆಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ ದೂರು ನೀಡಿದ್ದಾರೆ. ಸುಧಾಕರ್‌ ಕೂಡಾ ಈಗಾಗಲೇ ಸ್ಪಷ್ಟೀಕರಣ ಕೂಡಾ ನೀಡಿದ್ದಾರೆ. ಎರಡನ್ನೂ ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇನೆ’ ಎಂದು ಕಾಗೇರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT