ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಒಕ್ಕಲಿಗ ನಾಯಕತ್ವ: ಎಚ್‌ಡಿಕೆ–ಡಿಕೆಶಿ ಗುದ್ದಾಟ

Last Updated 17 ಅಕ್ಟೋಬರ್ 2020, 9:56 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ಲಿಂಗಾಯತರನ್ನು ಬಿಟ್ಟರೆ ರಾಜಕೀಯವಾಗಿ ಪ್ರಭಾವಿ ಸಮುದಾಯ ಎನಿಸಿಕೊಂಡಿರುವ ಒಕ್ಕಲಿಗರ ನಾಯಕತ್ವಕ್ಕಾಗಿ ‘ದಿಗ್ಗಜ’ರ ಮಧ್ಯೆ ದೊಡ್ಡ ಮಟ್ಟದ ಗುದ್ದಾಟ ಆರಂಭವಾಗಿದೆ. ಎರಡು ಬಾರಿ ಮುಖ್ಯಮಂತ್ರಿಯಾಗಿರುವ ಎಚ್‌.ಡಿ. ಕುಮಾರಸ್ವಾಮಿ, ಮು‌ಖ್ಯಮಂತ್ರಿಯಾಗಲೇಬೇಕೆಂಬ ಶಪಥ ತೊಟ್ಟಿರುವ ಡಿ.ಕೆ. ಶಿವಕುಮಾರ್ ಸಮುದಾಯದ ನಾಯಕತ್ವಕ್ಕಾಗಿ ಜಿದ್ದಿಗೆ ಬಿದ್ದವರಂತೆ ವರ್ತಿಸುತ್ತಿದ್ದಾರೆ.

ಒಕ್ಕಲಿಗರ ಮತಗಳು ಗೆಲುವಿನ ನಿರ್ಣಯದಲ್ಲಿ ಪ್ರಮುಖವಾಗಿರುವ ರಾಜರಾಜೇಶ್ವರಿ ನಗರ ಹಾಗೂ ಶಿರಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆ ಹೊತ್ತಿನೊಳಗೆ ಈ ಸೆಣಸಾಟ ರಂಗೇರಿದೆ. ಹಾಗಂತ ಈ ಎರಡು ಕ್ಷೇತ್ರಗಳ ಫಲಿತಾಂಶವೇನೂ ನಾಯಕತ್ವದ ಪಟ್ಟವನ್ನು ಕಟ್ಟಲಾರದು. ಅದಕ್ಕೆ ಮುಂದಿನ ವಿಧಾನಸಭೆ ಚುನಾವಣೆವರೆಗೂ ಕಾಯಬೇಕಾದೀತು!

ಹಳೆ ಮೈಸೂರು, ಮಲೆನಾಡು, ಕರಾವಳಿ ಭಾಗದಲ್ಲಿ ರಾಜಕೀಯವಾಗಿ ಬಲಿಷ್ಠವಾಗಿರುವ, ವಿಧಾನಸಭಾ ಕ್ಷೇತ್ರಗಳನ್ನು ತಮ್ಮದೇ ಆಗಿರುವ ರಾಜಕೀಯ–ಆರ್ಥಿಕ–ಸಾಮಾಜಿಕ ಕಾರಣಕ್ಕೆ ಪ್ರಭಾವಿಸುವ ಶಕ್ತಿ ಇರುವ ಒಕ್ಕಲಿಗರು ಉತ್ತರ ಕರ್ನಾಟಕದಲ್ಲಿ ಗಮನಾರ್ಹ ಸಂಖ್ಯೆಯಲ್ಲೇನೂ ಇಲ್ಲ. ಹಾಗಿದ್ದರೂ ರಾಜ್ಯದ ರಾಜಕೀಯ ಇತಿಹಾಸ ಗಮನಿಸಿದರೆ ಲಿಂಗಾಯತ–ವೀರಶೈವ ಸಮುದಾಯದವರು 13 ಬಾರಿ ಮುಖ್ಯಮಂತ್ರಿ (ನಿಜಲಿಂಗಪ್ಪ, ವೀರೇಂದ್ರ ಪಾಟೀಲರು ಎರಡು ಬಾರಿ, ಯಡಿಯೂರಪ್ಪನವರು 4 ಬಾರಿ ಸೇರಿದಂತೆ)ಯಾಗಿದ್ದಾರೆ. ವ್ಯಕ್ತಿಗತವಾಗಿ ನೋಡಿದರೆ ಲಿಂಗಾಯತರ ಪೈಕಿ 9 ನಾಯಕರು ಮುಖ್ಯಮಂತ್ರಿ ಪಟ್ಟ ಏರಿದ್ದಾರೆ. ಒಕ್ಕಲಿಗರು 8 ಬಾರಿ ಮುಖ್ಯಮಂತ್ರಿ(ಕುಮಾರಸ್ವಾಮಿ 2 ಬಾರಿ)ಯಾಗಿದ್ದಾರೆ. ಈಗಿನ ಲೆಕ್ಕಾಚಾರದಲ್ಲಿ ರೆಡ್ಡಿ ಸಮುದಾಯವನ್ನು ಒಕ್ಕಲಿಗ ಪಟ್ಟಿಯಲ್ಲಿ ಸೇರಿಸುವುದರಿಂದಾಗಿ ಕೆ.ಸಿ. ರೆಡ್ಡಿ ಅವರನ್ನೂ ಸೇರಿಸಿಕೊಂಡರೆ 7 ಜನರು ಈ ಸಮುದಾಯದಿಂದ ಮುಖ್ಯಮಂತ್ರಿಯಾಗಿದ್ದಾರೆ.

ಹಾಗಂತ ಒಕ್ಕಲಿಗ ಸಮುದಾಯ ಸಾಂಸ್ಕೃತಿಕ ಏಕಾಕೃತಿಯನ್ನು ಹೊಂದಿಲ್ಲ. ಹಳೆ ಮೈಸೂರು ಭಾಗದ ಬಹುತೇಕ ಒಕ್ಕಲಿಗರು ಶಿವನ ಆರಾಧಕರಾದರೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಬಹುತೇಕರು ತಿಮ್ಮಪ್ಪನ (ವಿಷ್ಣು) ಆರಾಧಕರು. ಕರಾವಳಿಗೆ ಇಳಿದರೆ ಪಕ್ಕಾ ನಾಥಪಂಥದ ಅನುಯಾಯಿಗಳು.

ಗಂಗಟಕಾರ, ದಾಸಗೌಡ, ಮುಳ್ಳುಗೌಡ, ಮರಸು ಗೌಡ, ಕುಂಚಿಟಿಗ, ಅರೆಭಾಷಿಕ ಗೌಡ, ನಾಮಧಾರಿ ಗೌಡ, ರೆಡ್ಡಿ ಒಕ್ಕಲಿಗ, ಬಂಟರು ಹೀಗೆ ಒಕ್ಕಲಿಗ ಉಪ ಜಾತಿಗಳನ್ನು ಗುರುತಿಸಲಾಗುತ್ತಿದೆ. ಗಂಗಟಕಾರ ಹಾಗೂ ಮರಸು ಒಕ್ಕಲಿಗರ ಮಧ್ಯೆ ರಾಜಕೀಯ ಪೈಪೋಟಿಯೂ ಇದೆ. ಯಾವಾಗ ಬಾಲಗಂಗಾಧರ ನಾಥ ಸ್ವಾಮೀಜಿ ಅವರು ಆದಿಚುಂಚನಗಿರಿಯಲ್ಲಿ ಒಕ್ಕಲಿಗ ಮಹಾಸಂಸ್ಥಾನವನ್ನು ಪ್ರಬಲವಾಗಿ ಪ್ರತಿಷ್ಠಾಪಿಸಿದರೋ ಆಗ ಸಮುದಾಯದಲ್ಲಿರುವ ಸಾಂಸ್ಕೃತಿಕ ಭಿನ್ನತೆ ಬದಿಗೆ ಸರಿದು ಒಗ್ಗಟ್ಟು ಕಾಣಿಸಿಕೊಂಡಿತು. ಸಮುದಾಯದಲ್ಲಿ ಇದೊಂದು ಪಲ್ಲಟ ಕೂಡ.

ನಾಯಕತ್ವಕ್ಕೆ ಪೈಪೋಟಿ

ಒಕ್ಕಲಿಗ ಸಮುದಾಯಕ್ಕೆ ಸೇರಿದ ಎಸ್.ಎಂ. ಕೃಷ್ಣ, ಸದಾನಂದಗೌಡ, ಆರ್. ಅಶೋಕ, ಸಿ.ಟಿ. ರವಿ, ಶೋಭಾ ಕರಂದ್ಲಾಜೆ ಹೀಗೆ ಅನೇಕರು ಬಿಜೆಪಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೆ, ಸಮುದಾಯದ ನಾಯಕತ್ವವನ್ನು ಕ್ಲೇಮ್‌ ಮಾಡುವಷ್ಟು ಪ್ರಭಾವವನ್ನು ಇವರಲ್ಲಿ ಯಾರೊಬ್ಬರೂ ಈವರೆಗೆ ಹೊಂದಿಲ್ಲ. ಅದಕ್ಕೆ ಕಾರಣ ಎಂದರೆ ಈ ಸಮುದಾಯದಲ್ಲಿ ಭೀಷ್ಮನಂತಿರುವ, ಮಾಜಿ ಪ್ರಧಾನಿಯೂ ಆಗಿರುವ ಎಚ್.ಡಿ. ದೇವೇಗೌಡರ ವರ್ಚಸ್ಸು. ಗೌಡರ ಸಮಕಾಲೀನರೇ ಆಗಿರುವ ಎಸ್.ಎಂ. ಕೃಷ್ಣ ಅವರು ಕಾಂಗ್ರೆಸ್‌ನಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದು, ಕೇಂದ್ರ–ರಾಜ್ಯದಲ್ಲಿ ಸಚಿವರಾಗಿ ಮುಖ್ಯಮಂತ್ರಿಯೂ ಆಗಿದ್ದವರು. ಹಾಗಿದ್ದರೂ ತಮ್ಮ ನಾಯಕ ಎಂದು ಸಮುದಾಯ ಗುರುತಿಸುವುದು ಈಗಲೂ ದೇವೇಗೌಡರನ್ನೇ ಎಂಬುದೇನೂ ಸುಳ್ಳಲ್ಲ.

ಈಗಿನ ವಿಷಯಕ್ಕೆ ಬಂದರೆ ಗೌಡರ ಗರಡಿಯಲ್ಲಿ ಪಳಗಿದ ಅವರ ಮಗ ಎಚ್.ಡಿ. ಕುಮಾರಸ್ವಾಮಿ ಹಾಗೂ ಆರಂಭದಲ್ಲಿ ಬಂಗಾರಪ್ಪನವರ ಜತೆಗೆ ಗುರುತಿಸಿಕೊಂಡು ಕಾಲಾನಂತರದಲ್ಲಿ ಎಸ್.ಎಂ. ಕೃಷ್ಣ ಅವರ ನೀಲಿಕಂಗಳ ಹುಡುಗ ಎಂದೇ ಬಿಂಬಿಸಿಕೊಂಡಿದ್ದ ಡಿ.ಕೆ. ಶಿವಕುಮಾರ್ ಈಗ ಸಮುದಾಯದ ನಾಯಕತ್ವಕ್ಕಾಗಿ ಪೈಪೋಟಿ ಆರಂಭಿಸಿದ್ದಾರೆ.

ಇನ್ನೊಂದು ವಿಶೇಷವೆಂದರೆ ಇಬ್ಬರ ಕಾರ್ಯಕ್ಷೇತ್ರವೂ ರಾಮನಗರ. ಗೌಡರ ಪಟ್ಟುಗಳು ಕುಮಾರಸ್ವಾಮಿ ಅವರಿಗೆ ಗೊತ್ತಿದೆ. ಗೌಡರನ್ನು ಸದಾ ಎದುರು ಹಾಕಿಕೊಂಡೇ ರಾಜಕೀಯ ಮಾಡಿಕೊಂಡು ಬಂದ ಡಿ.ಕೆ. ಶಿವಕುಮಾರ್ ಕೂಡ ಗೌಡರ ಎದುರಿಗಿದ್ದೇ ಅವರ ಒಳಪಟ್ಟುಗಳನ್ನು ಕಲಿತುಕೊಂಡು ಬಂದವರು. ಹಾಗಾಗಿಯೇ ಎಸ್.ಎಂ. ಕೃಷ್ಣ, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಡಿ.ಕೆ. ಶಿವಕುಮಾರ್ ಅವರು ‘ಟ್ರಬಲ್ ಶೂಟರ್‌’ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದವರು.

ಇನ್ನು ಕುಟುಂಬ ರಾಜಕಾರಣದ ವಿಷಯಕ್ಕೆ ಬಂದರೆ ಇಬ್ಬರ ಧೋರಣೆಯೇನೂ ಭಿನ್ನವಾಗಿಲ್ಲ. ಕುಮಾರಸ್ವಾಮಿ, ಅವರ ಪತ್ನಿ ಅನಿತಾ, ಸೋದರ ರೇವಣ್ಣ ಶಾಸಕರಾಗಿದ್ದಾರೆ. ರೇವಣ್ಣ ಪುತ್ರ ಪ್ರಜ್ವಲ್ ಸಂಸದ. ರೇವಣ್ಣ ಪತ್ನಿ ಭವಾನಿ ಜಿಲ್ಲಾ ಪಂಚಾಯಿತಿ ಸದಸ್ಯೆ. ಡಿ.ಸಿ. ತಮ್ಮಣ್ಣ, ಸಿ.ಎನ್. ಬಾಲಕೃಷ್ಣ ನೆಂಟರು. ಡಿ.ಕೆ. ಶಿವಕುಮಾರ್ ವಿಷಯಕ್ಕೆ ಬಂದರೆ ಇಷ್ಟು ವಿಶಾಲವಾಗಿ ಕುಟುಂಬ ರಾಜಕಾರಣ ಹರಡಿಕೊಂಡಿಲ್ಲವಾದರೂ ಸೋದರ ಸುರೇಶ್ ಸಂಸದ. ಹತ್ತಿರದ ಸಂಬಂಧ ರವಿ ವಿಧಾನಪರಿಷತ್ತಿನ ಸದಸ್ಯ. ಭಾವ ರಂಗನಾಥ್ ಶಾಸಕ. ಹೀಗೆ ವಂಶವೃಕ್ಷ ಬೆಳೆಯುತ್ತದೆ. ಅದು ಒತ್ತಟ್ಟಿಗಿರಲಿ.

ರಾಮನಗರ ಜಿಲ್ಲೆಯ ಚನ್ನಪಟ್ಟಣದ ಕ್ಷೇತ್ರದಿಂದ ಕುಮಾರಸ್ವಾಮಿ ಶಾಸಕರಾಗಿದ್ದರೆ, ಅದೇ ಜಿಲ್ಲೆಯ ಕನಕಪುರ ಕ್ಷೇತ್ರದಿಂದ ಶಿವಕುಮಾರ್ ಶಾಸಕರಾಗಿದ್ದಾರೆ.

ಈಗ ನಡೆಯುತ್ತಿರುವ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆ ಈ ಇಬ್ಬರು ನಾಯಕರಿಗೆ ಪ್ರತಿಷ್ಠೆಯ ಕಣವಾಗಿದೆ. ಏಕೆಂದರೆ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ (ಈಗ ಡಿ.ಕೆ. ಸುರೇಶ್ ಸಂಸದ) ವ್ಯಾಪ್ತಿಯಲ್ಲಿ ಈ ಕ್ಷೇತ್ರ ಇದೆ. ಹಿಂದೆ ಕನಕಪುರ ಲೋಕಸಭಾ ಕ್ಷೇತ್ರದಿಂದ ಕುಮಾರಸ್ವಾಮಿ ಆಯ್ಕೆಯಾಗಿದ್ದರು. ಆದರೆ, ಆಗಿನ್ನೂ ಆರ್.ಆರ್. ನಗರ ಕ್ಷೇತ್ರ ಇರಲಿಲ್ಲ. ಆದರೆ, ಇಲ್ಲಿನ ಬಹುತೇಕ ಮತದಾರರು ಕನಕಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇದ್ದರು. ಹೀಗಾಗಿ ತಮ್ಮ ‍ಪ್ರಭಾ ವಲಯವನ್ನು ಉಳಿಸಿಕೊಳ್ಳಲು ಕುಮಾರಸ್ವಾಮಿ ಯತ್ನ ಮುಂದುವರಿಸಿದ್ದಾರೆ. ಇರುವ ಅಸ್ತಿತ್ವವನ್ನು ಶತಾಯಗತಾಯ ಕಾಪಿಟ್ಟುಕೊಳ್ಳಬೇಕೆಂದು ಡಿ.ಕೆ. ಶಿವಕುಮಾರ್ ಹಟ ತೊಟ್ಟಿದ್ದಾರೆ. ಇದು ಸದ್ಯದ ರಾಜಕೀಯ.

ಜೆಡಿಎಸ್‌–ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾಗುವುದಕ್ಕೂ ಮೊದಲು ಹಾವು–ಮುಂಗುಸಿಯಂತೆ ಕಚ್ಚಾಡುತ್ತಿದ್ದ ಕುಮಾರಸ್ವಾಮಿ–ಶಿವಕುಮಾರ್ ಯಾವ ಜನ್ಮದ ಮೈತ್ರಿಯೋ ಎಂಬಂತೆ ಒಟ್ಟಿಗೆ ಸರ್ಕಾರ ನಡೆಸಿದ್ದರು. ಸರ್ಕಾರ ಬಿದ್ದು ಹೋದ ಮೇಲೂ ಇಬ್ಬರ ಬಾಂಧವ್ಯ ಚೆನ್ನಾಗಿಯೇ ಇತ್ತು. ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಪೈಪೋಟಿ ತೀವ್ರಗೊಂಡಿದೆ.

‘ಈ ಕ್ಷೇತ್ರದ ಒಕ್ಕಲಿಗ ನಾಯಕರನ್ನು ಕಾಂಗ್ರೆಸ್‌ಗೆ ಸೆಳೆಯುತ್ತ, ತಾವೇ ಒಕ್ಕಲಿಗ ನಾಯಕರು ಎಂದು ಬಿಂಬಿಸಿಕೊಳ್ಳಲು ಕೆಪಿಸಿಸಿ ಅಧ್ಯಕ್ಷರು ಯತ್ನಿಸುತ್ತಿದ್ದಾರೆ‘ ಎಂದು ಡಿಕೆಶಿ ಹೆಸರು ಹೇಳದೇ ಕುಮಾರಸ್ವಾಮಿ ಪ್ರತಿನಿತ್ಯ ಆಪಾದನೆ ಮಾಡುತ್ತಿದ್ದಾರೆ. ‘ಸಮುದಾಯ ಕಷ್ಟಕ್ಕೆ ಸಿಲುಕಿದ್ದ ಸನ್ನಿವೇಶದಲ್ಲಿ ಏನು ಮಾಡಿದ್ದರು’ ಎಂದು ಕುಟುಕುತ್ತಿದ್ದಾರೆ. ಈ ವಿಷಯದಲ್ಲಿ ಎಸ್‌.ಎಂ. ಕೃಷ್ಣ ಅವರಂತೆ ಜಾಣ್ಮೆಯ ನಡೆ ತೋರುತ್ತಿರುವ ಡಿ.ಕೆ. ಶಿವಕುಮಾರ್, ’ನನಗೆ ಜಾತಿ ಇಲ್ಲ. ಕಾಂಗ್ರೆಸ್ಸೇ ನನ್ನ ಜಾತಿ. ಕುಮಾರಸ್ವಾಮಿ ನನ್ನ ಹೆಸರು ಹೇಳಲಿಲ್ಲ’ ಎಂದು ಪ್ರತಿಕ್ರಿಯೆ ಕೊಡುತ್ತಿದ್ದಾರೆ.

ಇಲ್ಲಿನ ಫಲಿತಾಂಶ ಇಬ್ಬರಿಗೂ ಪ್ರತಿಷ್ಠೆಯಾಗುವ ಜತೆಗೆ ಭವಿಷ್ಯದ ಲೆಕ್ಕಾಚಾರವೂ ಇದರ ಹಿಂದೆ ಇದೆ. ತಮ್ಮ ಕೈಯಿಂದ ತಪ್ಪಿ ಹೋಗುತ್ತಿರುವ ಒಕ್ಕಲಿಗ ಸಮುದಾಯದ ಮತಗಳನ್ನು ಡಿ.ಕೆ. ಶಿವಕುಮಾರ್ ಕೈವಶ ಮಾಡಿಕೊಳ್ಳುತ್ತಿದ್ದಾರೆ ಎಂಬ ಭಯ ಕುಮಾರಸ್ವಾಮಿ ಅವರಿಗೆ ಇದ್ದಂತೆ ತೋರುತ್ತಿದೆ. ಎಲ್ಲಿಯೂ ಅದನ್ನು ಹೇಳಿಕೊಳ್ಳದೇ ಚಾಣಾಕ್ಷತೆಯಿಂದ ಅದನ್ನೇ ಮಾಡುತ್ತಿರುವ ಶಿವಕುಮಾರ್‌, ತಮ್ಮ ಮುಂದಿನ ಹಾದಿಯನ್ನು ಸಲೀಸು ಮಾಡಿಕೊಳ್ಳುತ್ತಿದ್ದಾರೆ.

ಡಿ.ಕೆ. ಶಿವಕುಮಾರ್ ಅವರ ಮೇಲೆ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಹಾಗೂ ಇತ್ತೀಚೆಗೆ ಸಿಬಿಐ ದಾಳಿ ನಡೆಯಿತು. ಅದಕ್ಕೂ ಮುನ್ನ ಅವರು ಜೈಲಿಗೂ ಹೋಗಿಬಂದರು. ಈ ಹೊತ್ತಿನೊಳಗೆ ಒಕ್ಕಲಿಗ ಸಮುದಾಯದ ಪ್ರಬಲ ಮಠಗಳ ಮಠಾಧೀಶರು ಡಿ.ಕೆ. ಶಿವಕುಮಾರ್ ಮನೆಗೆ ಹೋಗಿ ಧೈರ್ಯ ತುಂಬಿ ಬಂದರು. ಇದು ತಪ್ಪೋ ಸರಿಯೋ ಎಂಬುದು ಬೇರೆ ವಿಷಯ. ಆದರೆ, ಹೀಗೆ ಮಾಡುವ ಮೂಲಕ ಒಕ್ಕಲಿಗ ಸಮುದಾಯ ಡಿಕೆಶಿ ಬೆನ್ನಿಗೆ ನಿಲ್ಲುತ್ತದೆ ಎಂಬ ಸಂದೇಶವನ್ನು ಮಠಾಧೀಶರು ಮಾಡಿದ್ದಂತೂ ನಿಜ. ಈ ಬೆಳವಣಿಗೆಗಳೇ ನಾಯಕತ್ವದ ಜಗ್ಗಾಟವನ್ನು ಮತ್ತಷ್ಟು ಬಿರುಸುಗೊಳಿಸಿದೆ.

ಉಪಚುನಾವಣೆಯ ಫಲಿತಾಂಶ ನಾಯಕತ್ವದ ಬಗ್ಗೆಯೇನೂ ತೀರ್ಪು ಕೊಡುವುದಿಲ್ಲ. ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಎಷ್ಟು ಪ್ರಭಾವಿಯೋ ಜೆಡಿಎಸ್‌ ಕೂಡ ಅಷ್ಟೇ ಪ್ರಭಾವಿಯಾಗಿವೆ. ಆದರೆ, ಡಿ.ಕೆ. ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ನಡೆಯುತ್ತಿರುವ ಮೊದಲ ಉಪಚುನಾವಣೆಗಳು ಇವು. ಇದು ಪಕ್ಷ ಹಾಗೂ ಜನರ ಮಧ್ಯೆ ಡಿಕೆಶಿ ಅವರ ವರ್ಚಸ್ಸು, ಪ್ರಭಾವಕ್ಕೂ ಸಾಣೆ ಹಿಡಿಯುವ ಚುನಾವಣೆ. ಎಲ್ಲ ತರ್ಕ, ಜಾತಿವಾರು ಲೆಕ್ಕ, ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದ ತಂತ್ರಗಾರಿಕೆ ಎಲ್ಲವನ್ನೂ ಮೀರಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದರೆ ಅದು ಡಿಕೆಶಿ ವಿಜಯ ಎಂದು ಅವರ ಅಭಿಮಾನಿಗಳು ಬಿಂಬಿಸಿಕೊಳ್ಳಲೇನೂ ಅಡ್ಡಿ ಇಲ್ಲ. ಅಂತಹದೊಂದು ಫಲಿತಾಂಶ ಬಂದರೆ ಒಕ್ಕಲಿಗ ಸಮುದಾಯ ಜೆಡಿಎಸ್‌ನಿಂದ ದೂರ ಸರಿದು, ಡಿಕೆಶಿ ನೇತೃತ್ವದ ಕಾಂಗ್ರೆಸ್‌ನತ್ತ ಹೊರಳುತ್ತಿವುದರ ಸೂಚನೆಯಾಗಿ ಬಿಡುತ್ತದೆ. ಅದಕ್ಕೆ ಅವಕಾಶ ಕೊಡಬಾರದು ಎಂಬ ಲೆಕ್ಕಾಚಾರ ಕುಮಾರಸ್ವಾಮಿ ಅವರಿಗಿದ್ದಂತಿದೆ.

ಈ ಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ಇನ್ನೂ ಎರಡೂ ವರ್ಷದ ಬಳಿಕ ನಡೆಯಬೇಕಾದ ವಿಧಾನಸಭೆ ಚುನಾವಣೆಗೆ ಇದೇನೂ ದಿಕ್ಸೂಚಿಯಾಗಲಾರದು. ಆ ಹೊತ್ತಿಗೆ ಇನ್ನೂ ಏನೇನೂ ಬದಲಾವಣೆ ರಾಜ್ಯದಲ್ಲಿ ಆಗಲಿಕ್ಕಿದೆಯೋ ಗೊತ್ತಿಲ್ಲ. ಪ್ರತಿ ಚುನಾವಣೆಯೂ ರಾಜಕಾರಣಿಗಳಿಗೆ ಮೆಟ್ಟಿಲು ಆಗಿರುವುದರಿಂದ ಅದನ್ನು ಹತ್ತುತ್ತೇವೋ ಅಥವಾ ಒಂದು ಹೆಜ್ಜೆ ಇಳಿಯುತ್ತೇವೋ ಎಂಬುದಷ್ಟೇ ಮುಖ್ಯ. ಈ ಕಾರಣಕ್ಕಾಗಿಯೇ ಒಕ್ಕಲಿಗ ನಾಯಕತ್ವಕ್ಕಾಗಿ ಡಿಕೆ–ಎಚ್‌ಡಿಕೆ ಜಿದ್ದಿಗೆ ಬಿದ್ದಿರುವುದು ಎಂಬುದಂತೂ ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT