ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ‌ಚುನಾವಣೆ: ಬೆಳಗಾವಿ, ಮಸ್ಕಿ ಮತ್ತು ಬಸವಕಲ್ಯಾಣದಲ್ಲಿ ಮತದಾನ ಆರಂಭ

Last Updated 17 ಏಪ್ರಿಲ್ 2021, 3:15 IST
ಅಕ್ಷರ ಗಾತ್ರ

ಬೆಳಗಾವಿ/ರಾಯಚೂರು: ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ತೀವ್ರ ಜಿದ್ದಾಜಿದ್ದಿನ ಕಣಗಳಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರ ಹಾಗೂ ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನ ಆರಂಭವಾಗಿದೆ.

ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸೋಂಕು ಹರಡದಂತೆ ಎಚ್ಚರ ವಹಿಸಲು ಮತಗಟ್ಟೆಗಳಲ್ಲಿ ಅಂತರ ಕಾಯ್ದುಕೊಂಡು ಮತದಾನ ಮಾಡಬೇಕಿದೆ. ಹೀಗಾಗಿ, ಮತದಾನದ ಅವಧಿಯನ್ನು ಒಂದು ಗಂಟೆ ಹೆಚ್ಚಿಸಲಾಗಿದ್ದು, ಬೆಳಿಗ್ಗೆ 7ರಿಂದ ಸಂಜೆ 7ರ ವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಕೇಂದ್ರದಲ್ಲಿ ಸಚಿವರಾಗಿದ್ದ ಸುರೇಶ ಅಂಗಡಿ ಕೋವಿಡ್-19ನಿಂದ ಮೃತರಾದ್ದರಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಕಣದಲ್ಲಿರುವ ಬಿಜೆಪಿಯ ಮಂಗಲಾ ಸುರೇಶ ಅಂಗಡಿ, ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ ಸೇರಿದಂತೆ 10 ಮಂದಿ ಕಣದಲ್ಲಿದ್ದಾರೆ. ಅವರ‌ ಭವಿಷ್ಯ ಬರೆಯಲು ಮತದಾರರು ಸಜ್ಜಾಗಿದ್ದಾರೆ.

ಎಲ್ಲ ಮತಗಟ್ಟೆಗಳಲ್ಲೂ ಬೆಳಿಗ್ಗೆ 6.30ಕ್ಕೆ ಅಣಕು ಮತದಾನ ಪ್ರಕ್ರಿಯೆ ನಡೆಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ. ಹರೀಶ್ ಕುಮಾರ್ ತಿಳಿಸಿದ್ದಾರೆ.

ಕೋವಿಡ್-19 ಎರಡನೇ ಅಲೆಯ ಆತಂಕದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದೆ. 2566 ಮತಗಟ್ಟೆಗಳಲ್ಲಿ ಮತದಾನ ಆರಂಭಗೊಂಡಿದೆ. 18.13 ಲಕ್ಷ ಮತದಾರರು ಇದ್ದಾರೆ ಎಂದು ತಿಳಿಸಿದ್ದಾರೆ.

ಬಸವಕಲ್ಯಾಣದಲ್ಲಿ ಶಾಸಕರಾಗಿದ್ದ ಬಿ.ನಾರಾಯಣರಾವ್‌ ಅವರು ಕೋವಿಡ್‌ನಿಂದ ಮೃತಪಟ್ಟ ಕಾರಣ ಇಲ್ಲಿ ಉಪಚುನಾವಣೆ ನಡೆಯುತ್ತಿದ್ದು, ದಿ.ನಾರಾಯಣರಾವ್‌ ಅವರ ಪತ್ನಿ ಕಾಂಗ್ರೆಸ್‌ನ ಮಾಲಾ, ಬಿಜೆಪಿಯ ಶರಣು ಸಲಗರ, ಜೆಡಿಎಸ್‌ನ ಸಯ್ಯದ್‌ ಯಸ್ರಬ್ ಅಲಿ ಖಾದ್ರಿ, ಪಕ್ಷೇತರರಾಗಿರುವ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಸೇರಿ 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಇನ್ನು, ರಾಜ್ಯದ ವಿವಿಧೆಡೆಯ 16 ಶಾಸಕರೊಟ್ಟಿಗೆ ಪ್ರತಾಪಗೌಡ ಪಾಟೀಲ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಮಸ್ಕಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ.

ಪರಿಶಿಷ್ಟ ಪಂಗಡಕ್ಕೆ ಮೀಸಲಿರುವ ಮಸ್ಕಿಯಲ್ಲಿ ಈ ಬಾರಿ ಪ್ರತಾಪಗೌಡ ಪಾಟೀಲ ಬಿಜೆಪಿಯಿಂದ ಹಾಗೂ ಬಸನಗೌಡ ಪಾಟೀಲ ತುರ್ವಿಹಾಳ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸನಗೌಡ ತುರ್ವಿಹಾಳ ಆಗ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪ್ರತಾಪಗೌಡ ಪಾಟೀಲ ವಿರುದ್ಧ ಕೇವಲ 213 ಮತಗಳ ಅಂತರದಿಂದ ಸೋತಿದ್ದರು. ಕಣದಲ್ಲಿ ಒಟ್ಟು ಎಂಟು ಅಭ್ಯರ್ಥಿಗಳಿದ್ದಾರೆ.

ಮಸ್ಕಿಯಲ್ಲಿ ಮತದಾನ ಮಾಡಲು ಜನರು ಮತಗಟ್ಟೆಯತ್ತ ಒಬ್ಬೊಬ್ಬರೆ ಬರಲಾರಂಭಿಸಿದ್ದಾರೆ. ಮಧ್ಯಾಹ್ನ ತಾಪಮಾನ ಹೆಚ್ಚುವುದರಿಂದ ಬೆಳಿಗ್ಗೆಯೇ ಮತದಾನ ಮಾಡಲು ಜನರು ಹೆಚ್ಚಿನ ಸಂಖ್ಯೆಯಲ್ಲಿ‌ ನೆರೆಯುವ ಸಾಧ್ಯತೆ ಇದೆ.

ಸಖಿ ಮತಗಟ್ಟೆ: ಮಸ್ಕಿ ವಿಧಾನಸಭ ಕ್ಷೇತ್ರಗಳ್ಲಲಿ ಮಹಿಳಾ ಮತದಾರರು ಹೆಚ್ಚಿರುವ ಎರಡು ಕಡೆ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮಸ್ಕಿ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಮತಗಟ್ಟೆಯನ್ನು ಗುಲಾಬಿ ವರ್ಣದಲ್ಲಿ ಮುಳುಗಿಸಲಾಗಿದೆ. ‘ಪಿಂಕ್‌ ಬೂತ್‌’ ಹೆಸರಿಗೆ ತಕ್ಕಂತೆ ಗುಲಾಬಿ ವರ್ಣವೈವಿಧ್ಯದಲ್ಲಿ ಅಲಂಕಾರ ಮಾಡಲಾಗಿದೆ.

ತುರ್ವಿಹಾಳದ ಗ್ರಾಮ ಪಂಚಾಯಿತಿ ಕಟ್ಟಡದ ಮತಗಟ್ಟೆ ಕೂಡಾ ಸಖಿ ಮತಗಟ್ಟೆಯಾಗಿದ್ದು, ಅದನ್ನು ಅಲಂಕೃತಗೊಳಿಸಲಾಗಿದೆ. ಈ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಸುವ ಎಲ್ಲ ಸಿಬ್ಬಂದಿಯು ಮಹಿಳೆಯರೆ ಆಗಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT