ಶನಿವಾರ, ಜನವರಿ 23, 2021
28 °C
ಪ್ರತಿ ವ್ಯಕ್ತಿಗೆ ದಿನಕ್ಕೆ 55 ಲೀಟರ್ ಶುದ್ಧ ನೀರು– ಈಶ್ವರಪ್ಪ

3 ವರ್ಷದಲ್ಲಿ 91 ಲಕ್ಷ ಮನೆಗಳಿಗೆ ‘ಗಂಗೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮನೆ ಮನೆಗೆ ಗಂಗೆ’ ಯೋಜನೆಯಡಿ ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದ 91.19 ಲಕ್ಷ ಗ್ರಾಮೀಣ ಕುಟುಂಬಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗುವುದು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.

‘ಕೇಂದ್ರ ಸರ್ಕಾರದ ಜಲಜೀವನ್‌ ಮಿಷನ್‌ ಯೋಜನೆಯನ್ನು ‘ಮನೆ ಮನೆಗೆ ಗಂಗೆ’ ಹೆಸರಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ಎಲ್ಲ ಕುಟುಂಬಗಳಿಗೆ ನಲ್ಲಿ ಸಂಪರ್ಕ ವ್ಯವಸ್ಥೆ ಮಾಡಲು ಬೇರೆ ರಾಜ್ಯಗಳಿಗೆ ನಾಲ್ಕು ವರ್ಷ ಸಮಯ ನೀಡಲಾಗಿದೆ. ಕರ್ನಾಟಕಕ್ಕೆ ಮಾತ್ರ ಮೂರು ವರ್ಷ ನೀಡಲಾಗಿದೆ. ಈಗಾಗಲೇ 24.72 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದ್ದು, ಉಳಿದ 66.47 ಲಕ್ಷ ಕುಟುಂಬಗಳಿಗೆ ಈ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

‘ಪ್ರಸಕ್ತ ಸಾಲಿನಲ್ಲಿ 23.57 ಲಕ್ಷ ಕುಟುಂಬಗಳು ನಲ್ಲಿ ಸಂಪರ್ಕ ಪಡೆಯಲಿವೆ. ಗ್ರಾಮೀಣ ಪ್ರದೇಶದ ಪ್ರತಿ ವ್ಯಕ್ತಿಗೆ ದಿನಕ್ಕೆ 55 ಲೀಟರ್ ಶುದ್ಧ ಕುಡಿಯುವ ನೀರು ಒದಗಿಸುವುದು ಈ ಯೋಜನೆ ಮುಖ್ಯ ಉದ್ದೇಶ’ ಎಂದು ಹೇಳಿದರು.

‘ಮೊದಲ ಹಂತದಲ್ಲಿ ನದಿ ಮೂಲಗಳು ಹಾಗೂ ಅಂತರ್ಜಲ ಉತ್ತಮವಾಗಿರುವ ಪ್ರದೇಶಗಳಲ್ಲಿ ನಲ್ಲಿ ಸಂಪರ್ಕ ಕಲ್ಪಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದ 8 ಸಾವಿರ ಕಾಮಗಾರಿಗಳಿಗೆ ಸಮಗ್ರ ಯೋಜನೆ ವರದಿ ಸಿದ್ಧಪಡಿಸಲಾಗಿದೆ. ಈ ಪೈಕಿ 5,500 ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಕಾಲಮಿತಿಯೊಳಗೆ ಯೋಜನೆ ಅನುಷ್ಠಾನ ಹಾಗೂ ಗುರಿ ಸಾಧಿಸಲು ಜಿಲ್ಲಾವಾರು ಖಾಸಗಿ ಏಜೆನ್ಸಿಗಳ ನೆರವು ಪಡೆಯಲಾಗುವುದು’ ಎಂದರು.

ಎಲ್ಲರೂ ತೆರಿಗೆ ವ್ಯಾಪ್ತಿಗೆ:

‘ಗ್ರಾಮ ಪಂಚಾಯಿತಿಗಳಲ್ಲಿ ಸಾಕಷ್ಟು ಕಟ್ಟಡಗಳು ತೆರಿಗೆ ವ್ಯಾಪ್ತಿಯಿಂದ ಹೊರಗಿವೆ. ಪಂಚತಂತ್ರ ಸಾಫ್ಟ್‌ ವೇರ್ ಮೂಲಕ ನೋಂದಣಿಯಾದ ಕಟ್ಟಡಗಳು ಮಾತ್ರ ತೆರಿಗೆ ವ್ಯಾಪ್ತಿಯಲ್ಲಿವೆ. ಉಳಿದಿರುವ ಕಟ್ಟಡಗಳ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಅದರಲ್ಲಿಯೂ ಪ್ರಭಾವಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರಿಗೆ ವಂಚಿಸಿರುವುದು ಗಮನಕ್ಕೆ ಬಂದಿದೆ. ಇದಕ್ಕೆ ಅಧಿಕಾರಿಗಳ ಬೆಂಬಲವೂ ಇದೆ. ಇನ್ನು ಆರು ತಿಂಗಳಲ್ಲಿ ಸಮೀಕ್ಷೆ ಕಾರ್ಯ ಮುಗಿಯಲಿದ್ದು, ಬಳಿಕ ‘ಸ್ವಾಮಿತ್ವ’ ಯೋಜನೆಯಡಿ ಎಲ್ಲರನ್ನೂ ತೆರಿಗೆ ವ್ಯಾಪ್ತಿಗೆ ತರಲಾಗುವುದು’ ಎಂದು ಈಶ್ವರಪ್ಪ ಹೇಳಿದರು.

5,427 ಕಿ.ಮೀ. ರಸ್ತೆ ಅಭಿವೃದ್ಧಿ:

‘ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ರಾಜ್ಯದ 5,427 ಕಿ.ಮೀ. ಉದ್ದದ ರಸ್ತೆಯನ್ನು ₹3,641 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಮಂಜೂರಾತಿ ಸಿಕ್ಕಿದೆ. ಈ ಯೋಜನೆಗೆ ಕೇಂದ್ರದ ಪಾಲು ಶೇ 60 ಮತ್ತು  ರಾಜ್ಯದ ಪಾಲು ಶೇ 40ರಷ್ಟಿದೆ. ಕೇಂದ್ರದ ಪಾಲಿನಲ್ಲಿ ಈಗ ₹ 534 ಕೋಟಿ ಬಿಡುಗಡೆ ಆಗಿದೆ’ ಎಂದರು.

ಗ್ರಾ.ಪಂ. ಸದಸ್ಯರ ತರಬೇತಿಗೆ ₹27 ಕೋಟಿ

‘ಗ್ರಾಮ ಪಂಚಾಯಿತಿಯ ನೂತನ ಸದಸ್ಯರಿಗೆ ₹27.16 ಕೋಟಿ ವೆಚ್ಚದಲ್ಲಿ ಸಾಮರ್ಥ್ಯ ಅಭಿವೃದ್ಧಿ ಮತ್ತು ಮುಖಾಮುಖಿ ತರಬೇತಿ ನೀಡಲಾಗುವುದು’ ಎಂದು ಈಶ್ವರಪ್ಪ ಹೇಳಿದರು.

‘ 176 ತಾಲ್ಲೂಕುಗಳ 285 ಕೇಂದ್ರಗಳಲ್ಲಿ ಜ.19ರಿಂದ ಮಾರ್ಚ್ 26ರವರೆಗೆ ಒಟ್ಟು 91,121 ಸದಸ್ಯರಿಗೆ ಕಾರ್ಯಾಗಾರ ನಡೆಯಲಿದೆ. ತರಬೇತಿ ನೀಡಲು 900 ಮಂದಿ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ’ ಎಂದರು.

‘ಪ್ರತಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಐದು ದಿನ ತರಬೇತಿ ನಡೆಯಲಿದೆ. ಗ್ರಾಮ ಪಂಚಾಯಿತಿ ವ್ಯವಸ್ಥೆ, ಪಂಚಾಯಿತಿ ರಚನೆ, ಸದಸ್ಯರ ಜವಾಬ್ದಾರಿ, ಕರ್ತವ್ಯಗಳು, ಗ್ರಾಮಸಭೆ ಆಯೋಜನೆ ಸೇರಿದಂತೆ ಸ್ಥಳೀಯ ಆಡಳಿತದ ಬಗ್ಗೆ ಅರಿವು ಮೂಡಿಸಲಾಗುವುದು’ ಎಂದರು.

ಪ್ರತಿ ಪಂಚಾಯಿತಿಗೆ ಸೌರಶಕ್ತಿ ಘಟಕ

‘ಪ್ರತಿ ಪಂಚಾಯಿತಿ ಕಟ್ಟಡಕ್ಕೆ ಸೌರಶಕ್ತಿ ಘಟಕ ಅಳವಡಿಸಲು ಯೋಜನೆ ರೂಪಿಸಲಾಗಿದೆ. ಒಂದು ಪಂಚಾಯಿತಿಗೆ ಈ ವ್ಯವಸ್ಥೆ ಕಲ್ಪಿಸಲು ಸುಮಾರು ₹4 ಲಕ್ಷ ವೆಚ್ಚವಾಗಲಿದೆ. ಆರು ಸಾವಿರ ಪಂಚಾಯಿತಿಗಳಿಗೆ ಈ ಸೌರಶಕ್ತಿ ಅಳವಡಿಸಲು ಸುಮಾರು ₹300 ಕೋಟಿ ವೆಚ್ಚವಾಗಲಿದೆ’ ಎಂದು ಈಶ್ವರಪ್ಪ ಹೇಳಿದರು.

‘ಸೌರಶಕ್ತಿ ಘಟಕದ ಅಳವಡಿಕೆಯಿಂದ ಪಂಚಾಯಿತಿಗಳಿಗೆ ಪ್ರತಿ ತಿಂಗಳ ವಿದ್ಯುತ್ ಶುಲ್ಕ ಉಳಿತಾಯವಾಗುತ್ತದೆ. ಹೆಚ್ಚುವರಿ ವಿದ್ಯುತ್ ಅನ್ನು ಗ್ರಿಡ್‌ಗೆ ಕಳುಹಿಸಲಾಗುತ್ತದೆ. ಇದರಿಂದ ಪಂಚಾಯಿತಿಗೂ ಆದಾಯ ಬರುತ್ತದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು