ಬುಧವಾರ, ಸೆಪ್ಟೆಂಬರ್ 29, 2021
20 °C

ತುಂಗಭದ್ರಾ ನದಿಗೆ ನೀರು: ನದಿಪಾತ್ರದ ಜನರಿಗೆ ಮುನ್ನೆಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಭಾರಿ ಪ್ರಮಾಣದಲ್ಲಿ ಹೊಸಪೇಟೆಯ ತುಂಗಭದ್ರಾ ಜಲಾಶಯಕ್ಕೆ ನೀರು ಹರಿದು ಬರುತ್ತಿದ್ದು, ಹತ್ತು ಕ್ರಸ್ಟ್‌ಗೇಟ್‌ಗಳಿಂದ ಮಂಗಳವಾರ ಸಂಜೆ ನದಿಗೆ 50 ಸಾವಿರ ಕ್ಯುಸೆಕ್‌ ನೀರು ಹರಿಸಲಾಗುತ್ತಿದೆ.

ನದಿ ಪಾತ್ರದಲ್ಲಿ ಜನರು ಎಚ್ಚರಿಕೆ ಯಿಂದ ಇರಲು ಸೂಚಿಸಿದ್ದು, ತೆಪ್ಪ, ದೋಣಿ ಸಂಚಾರಕ್ಕೆ ನಿರ್ಬಂಧಕ್ಕೆ ಹೇರಲಾಗಿದೆ.

ಮೂರು ಕಿರುಸೇತುವೆ ಮುಳುಗಡೆ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲ್ಲೂಕುಗಳಲ್ಲಿ ಮಂಗಳವಾರ ಮಳೆಯ ಅಬ್ಬರ ತಗ್ಗಿದ್ದರೂ ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ 79,126 ಕ್ಯುಸೆಕ್ ನೀರು ಕೃಷ್ಣಾ ಮತ್ತು ದೂಧಗಂಗಾ ನದಿಗಳಿಗೆ ಹರಿದು ಬರುತ್ತಿದ್ದು ತಾಲ್ಲೂಕಿನಲ್ಲಿ ನದಿಗಳ ಒಳಹರಿವು ಹೆಚ್ಚಳವಾಗಿದೆ. ಮೂರು ಕಿರು ಸೇತುವೆಗಳು ಮುಳುಗಡೆಯಾಗಿವೆ.

ಮಹಾರಾಷ್ಟ್ರ ಕೃಷ್ಣಾ ಕಣಿವೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ, ಆಲಮಟ್ಟಿ ಜಲಾಶಯದ ಎಲ್ಲಾ 26 ಗೇಟ್ ಗಳನ್ನು   ತೆರೆಯಲಾಗಿದ್ದು, 1.20 ಲಕ್ಷ ಕ್ಯುಸೆಕ್ ನೀರನ್ನು ನದಿ ಪಾತ್ರಕ್ಕೆ ಹರಿಸಲಾಗುತ್ತಿದೆ.

ಹೆಚ್ಚಿದ ಜಲಾಶಯಗಳ ಒಳಹರಿವು (ಶಿವಮೊಗ್ಗ ವರದಿ): ಜಿಲ್ಲೆಯ ಹಲವೆಡೆ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜಲಾಶಯಗಳ ನೀರಿನ ಮಟ್ಟ ಹೆಚ್ಚಳವಾಗಿದೆ.

ಹೊಸನಗರದಲ್ಲಿ 16.78 ಸೆಂ.ಮೀ, ತೀರ್ಥಹಳ್ಳಿಯಲ್ಲಿ 25.80 ಮಿ.ಮೀ, ಸಾಗರದಲ್ಲಿ 17 ಮಿ.ಮೀ, ಸೊರಬದಲ್ಲಿ 10 ಮಿ.ಮೀ, ಶಿವಮೊಗ್ಗದಲ್ಲಿ 9.60 ಮಿ.ಮೀ, ಶಿಕಾರಿಪುರದಲ್ಲಿ 7.40 ಮಿ.ಮೀ, ಭದ್ರಾವತಿಯಲ್ಲಿ 7.20 ಮಿ.ಮೀ ಮಳೆಯಾಗಿದೆ.

ಹಿನ್ನೀರು ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಜಲಾಶಯಗಳಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ಲಿಂಗನಮಕ್ಕಿ ಜಲಾಶಯಕ್ಕೆ 29,400 ಕ್ಯುಸೆಕ್‌ ನೀರು ಹರಿದುಬರುತ್ತಿದೆ. ಭದ್ರಾ ಜಲಾಶಯಕ್ಕೆ 14,296 ಕ್ಯುಸೆಕ್‌ ನೀರು ಹರಿದುಬರುತ್ತಿದ್ದು, 15,812 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ತುಂಗಾ ಜಲಾಶಯಕ್ಕೆ 21,487 ಕ್ಯುಸೆಕ್‌ ನೀರು ಹರಿದುಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು