ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು?: ಎಲ್ಲರ ಚಿತ್ತ ಹೈಕಮಾಂಡ್‌ನತ್ತ

Last Updated 26 ಜುಲೈ 2021, 10:01 IST
ಅಕ್ಷರ ಗಾತ್ರ

ನವದೆಹಲಿ: ಸಿಎಂ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಸಲ್ಲಿಕೆ ಹಿನ್ನೆಲೆಯಲ್ಲಿ 'ಮುಂದಿನ ಮುಖ್ಯಮಂತ್ರಿ ಯಾರು?' ಎಂಬ ಕುತೂಹಲ ಮನೆ ಮಾಡಿದೆ. ಅಂತೆಯೇ, ಈಗ ಎಲ್ಲರ ಚಿತ್ತ ಹೈಕಮಾಂಡ್ ಕಡೆಗೆ ತಿರುಗಿದೆ.

ಯಡಿಯೂರಪ್ಪ ರಾಜೀನಾಮೆಗೆ ಕೆಲವು ದಿನಗಳ ಹಿಂದೆ ಸೂಚಿಸಿರುವ ಬಿಜೆಪಿ ವರಿಷ್ಠರು ಈಗಾಗಲೇ ಮುಂದಿನ ಮುಖ್ಯಮಂತ್ರಿಯನ್ನಾಗಿ ಯಾರನ್ನು ನೇಮಿಸಬೇಕು ಎಂಬ ನಿರ್ಧಾರ ಕೈಗೊಂಡಿರುವ ಸಾಧ್ಯತೆ‌ ಇರಬಹುದು. ಘೋಷಣೆಗೆ‌ ಸಮಯ ನಿಗದಿ ಮಾಡುವುದು ಬಾಕಿ ಇದೆ ಎಂದು ಹೇಳಲಾಗುತ್ತಿದೆ.

ನಾಯಕತ್ವ ಬದಲಾವಣೆ ಬಗ್ಗೆ‌ ಸೂಚನೆ ನೀಡಿದ್ದರೂ, ವರಿಷ್ಠರು ಈವರೆಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಸ್ವತಃ ಯಡಿಯೂರಪ್ಪ ಸಹ ಆ ಗೋಪ್ಯತೆ ಕಾಪಾಡಿಕೊಂಡೇ ಬಂದಿದ್ದರು. ಪ್ರಧಾನಿ ಮೋದಿ, ಕೇಂದ್ರದ ಗೃಹ ಸಚಿವ ಅಮಿತ್ ಶಾ ಹಾಗೂ ಪಕ್ಷದ‌ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಹೊರತುಪಡಿಸಿ ಬೇರೆ ಯಾರಿಗೂ ನಾಯಕತ್ವ ಯಾರಿಗೆ ದೊರೆಯಲಿದೆ ಎಂಬುದು ಗೊತ್ತಿರಲಿಕ್ಕೆ ಸಾಧ್ಯವಿಲ್ಲ ಎಂಬ ಮಾತು ಬಿಜೆಪಿ ಪಾಳಯದಲ್ಲಿ ಕೇಳಿಬರುತ್ತಿದೆ.

ಯಡಿಯೂರಪ್ಪ ಅವರಿಗೆ ಸಂದೇಶ ರವಾನೆಯಾಗಿದೆ‌. 'ಸರ್ಕಾರದ ಚುಕ್ಕಾಣಿ ಹಿಡಿಯುವುದು ಯಾರು?' ಎಂಬುದು ಶಾಸಕಾಂಗ‌ ಪಕ್ಷದ ಸಭೆಯ ನಂತರ ಘೋಷಣೆ ಆಗಲಿದೆ ಎಂದು ತಿಳಿದುಬಂದಿದೆ.

ಸಭೆಯ ನಂತರ ಯಡಿಯೂರಪ್ಪ ಅವರೇ ಈ ಘೋಷಣೆ ಮಾಡಲಿದ್ದು, ಮುಖಂಡರು ಅನುಮೋದಿಸಬೇಕು.

ವರಿಷ್ಠರು ಇದುವರೆಗೆ ಈ ಸಂಬಂಧ ಚರ್ಚೆ ಮಾಡಿಲ್ಲ. ಇನ್ನಷ್ಟೇ ಸಭೆ ನಡೆಸಿ ನಾಳೆಯ ವೇಳೆಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು 'ಪ್ರಜಾವಾಣಿ'ಗೆ ತಿಳಿಸಿವೆ.

ವರಿಷ್ಠರು ದೆಹಲಿಯಿಂದ ವೀಕ್ಷಕರೊಬ್ಬರನ್ನು ರಾಜ್ಯಕ್ಕೆ ಕಳುಹಿಸಲಿದ್ದು, ಮಂಗಳವಾರ ಅಥವಾ ಬುಧವಾರ ಅವರು ಬೆಂಗಳೂರಿಗೆ ತೆರಳುವ ಸಾಧ್ಯತೆ ಇದೆ. ವೀಕ್ಷಕರು ರಾಜ್ಯ ಮುಖಂಡರು ಹಾಗೂ ಪ್ರಮುಖ ಶಾಸಕರೊಂದಿಗೆ ಹಲವು ಸುತ್ತಿನ ಸಭೆ ನಡೆಸಿದ‌ ಬಳಿಕ ನಾಯಕತ್ವ‌ ಘೋಷಣೆ ಆಗಬಹುದು ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT