ಬುಧವಾರ, ನವೆಂಬರ್ 25, 2020
19 °C
ಕೋವಿಡ್ ಮಾರ್ಗಸೂಚಿ ಉಲ್ಲಂಘನೆ: ಹೈಕೋರ್ಟ್‌ ಪ್ರಶ್ನೆ

‘ತೇಜಸ್ವಿ ಸೂರ್ಯ ವಿರುದ್ಧ ಕ್ರಿಮಿನಲ್‌ ಪ್ರಕರಣ ಏಕಿಲ್ಲ?’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈಕೋರ್ಟ್‌

ಬೆಂಗಳೂರು: ಮಾಸ್ಕ್‌ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು
ಉಲ್ಲಂಘಿಸಿರುವುದನ್ನು ಒಪ್ಪಿಕೊಂಡಿರುವ ರಾಜಕಾರಣಿಗಳನ್ನು ಶಿಕ್ಷಿಸಲು ಸಿದ್ಧವೇ ಎಂಬುದನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಹೈಕೋರ್ಟ್‌ ಗುರುವಾರ ಸೂಚಿಸಿದೆ.

ಲೆಟ್ಜ್‌ಕಿಟ್‌ ಪ್ರತಿಷ್ಠಾನ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ, ಸಂಸದ ತೇಜಸ್ವಿ ಸೂರ್ಯ ಮತ್ತು ಇತರ ಎಂಟು ಮಂದಿಯ ಪ್ರಕರಣವನ್ನುಉಲ್ಲೇಖಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕಾ ನೇತೃತ್ವದ ವಿಭಾಗೀಯ ಪೀಠ, ಕ್ರಿಮಿನಲ್‌ ಪ್ರಕರಣವನ್ನು ಏಕೆ ದಾಖಲಿಸಿಲ್ಲ ಎಂದು ಪ್ರಶ್ನಿಸಿತು. ಈ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿರುವುದಾಗಿಯೂ ಹೇಳಿತು.

‘ಮಾಸ್ಕ್‌ ಧರಿಸುವ ವಿಚಾರದಲ್ಲಿ ಬೆಂಗಳೂರಿನಲ್ಲಿ ವ್ಯಾಪಕವಾಗಿ ನಿಯಮ ಉಲ್ಲಂಘನೆ ಆಗುತ್ತಿರುವುದನ್ನು ಗಮನಿಸಿದ ನ್ಯಾಯಾಲಯ ಹಲವು ಬಾರಿ ಆದೇಶಗಳನ್ನು ಹೊರಡಿಸಿದೆ. ಹೆಚ್ಚಿನ ಪ್ರಮಾಣದಲ್ಲಿ ಉಲ್ಲಂಘನೆಗಳು ನಡೆಯುತ್ತಿದ್ದರೂ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ’ ಎಂದು ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿತು.

ಮಾರ್ಗಸೂಚಿ ಉಲ್ಲಂಘಿಸುವ ರಾಜಕಾರಣಿಗಳು ಮತ್ತು ಅವರ ಬೆಂಬಲಿಗರ ವಿರುದ್ಧ ಅಸಂಜ್ಞೇಯ ಪ್ರಕರಣ ದಾಖಲಿಸಿ, ದಂಡ ವಸೂಲಿ ಮಾಡುವುದರ ಹೊರತಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ಅಂತಹವರ ವಿರುದ್ಧ ಕ್ರಿಮಿನಲ್‌ ಕಾಯ್ದೆಗಳನ್ನು ಏಕೆ ಬಳಸಿಲ್ಲ? ಈ ಕುರಿತು ಮುಂದಿನ ವಿಚಾರಣೆ ವೇಳೆ ರಾಜ್ಯ ಸರ್ಕಾರ ವಿವರಣೆ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿತು.

ವೇತನ ಪಾವತಿಗೆ ಗಡುವು: ಮಾಸ್ಕ್‌ ಧರಿಸದವರನ್ನು ಪತ್ತೆಹಚ್ಚಿ ದಂಡ ವಿಧಿಸಲು ನೇಮಿಸಿರುವ ಮಾರ್ಷಲ್‌ಗಳಿಗೆ ಸಕಾಲಕ್ಕೆ ವೇತನನೀಡದಿರುವ ಬಿಬಿಎಂಪಿ ಆಡಳಿತವನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು. 24 ಗಂಟೆಗಳೊಳಗೆ ಮಾರ್ಷಲ್‌ಗಳಿಗೆ ವೇತನ ಪಾವತಿಸುವಂತೆ ಗಡುವು ನೀಡಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು