ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಕೆ.ಶಿವಕುಮಾರ್‌ ‘ಸಾಮ್ರಾಜ್ಯ’ಕ್ಕೆ ಲಗ್ಗೆ ಇಟ್ಟ ಸಿಬಿಐ

‘ಬಂಡೆ’ಗೆ ಏಟು: ‘ಹುಲಿ’ಗೆ ಪೆಟ್ಟು
Last Updated 5 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಎರಡು ಚುನಾವಣೆಗಳಿಗೆ ಮೂರು ಪಕ್ಷಗಳು ತಯಾರಿ ನಡೆಸುತ್ತಿರುವ ಹೊತ್ತಿನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ‘ಕೋಟೆ’ಗೆ ಲಗ್ಗೆ ಇಟ್ಟ ಸಿಬಿಐ ಅಧಿಕಾರಿಗಳು, ಅಕ್ರಮ ಆಸ್ತಿಯ ದಾಖಲೆಗಳ ಶೋಧ ಕಾರ್ಯಾಚರಣೆ ಜತೆಗೆ ರಾಜಕೀಯ ಅಲೆಗೂ ಕಾರಣವಾಗಿದ್ದಾರೆ.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಇತ್ತೀಚಿನ ವರ್ಷಗಳಲ್ಲಿ ಚುನಾವಣೆಗೂ ‘ದಾಳಿ’ಗಳಿಗೂ ನಂಟಿದೆ. ‘ಸ್ವಾಯತ್ತ ಸಂಸ್ಥೆಗಳನ್ನು ತನ್ನ ಕೈಗೊಂಬೆಯಾಗಿಸಿಕೊಂಡಿರುವ ಕೇಂದ್ರ ಸರ್ಕಾರ, ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೂಚನೆ ಮೇರೆಗೆ ಇಂತಹ ದಾಳಿಗಳು ನಡೆಯುತ್ತಿವೆ’ ಎಂದು ವಿರೋಧ ಪಕ್ಷದ ನಾಯಕರು ಆಪಾದಿಸುವುದುಂಟು. ಹಾಗಂತ ಇದು ಖುಲ್ಲಂಖುಲ್ಲಾ ಸುಳ್ಳಲ್ಲ; ಪೂರ್ಣ ಸತ್ಯವೂ ಅಲ್ಲ. ಈ ಸಂಸ್ಥೆಗಳು ಕಾರ್ಯಾಚರಣೆ ನಡೆಸುವ ಮುನ್ನ ಮಾಹಿತಿ ಸಂಗ್ರಹ, ದಾಖಲೆಗಳನ್ನು ಖಚಿತಪಡಿಸಿಕೊಳ್ಳುವುದು.. ಹೀಗೆಲ್ಲ ತಯಾರಿ ಮಾಡಿಕೊಳ್ಳದೇ ಹೋದರೆ ಅವೆಲ್ಲವೂ ಕೋರ್ಟ್‌ನಲ್ಲಿ ಬಿದ್ದು ಹೋಗಿ ಬಿಡುತ್ತವೆ.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸಿಬಿಐ ಅನ್ನು ‘ಕಾಂಗ್ರೆಸ್ ಬ್ಯುರೋ ಆಫ್ ಇನ್‌ವೆಸ್ಟಿಗೇಷನ್‘ ಎಂದು ಬಿಜೆಪಿಯವರು ಜರೆಯುತ್ತಿದ್ದರು. ಈಗ ಕಾಂಗ್ರೆಸ್‌ನವರು ‘ಕಮ್ಯುನಲ್ ಬ್ಯುರೋ ಆಫ್ ಇನ್‌ವೆಸ್ಟಿಗೇಷನ್‘ ಎಂದು ದೂರುತ್ತಿದ್ದಾರೆ. ಎರಡು ಪ್ರಬಲ ಪಕ್ಷಗಳು ಹೀಗೆ ಹೇಳುತ್ತಿರುವುದರಿಂದ ಇದರಲ್ಲಿ ಸ್ವಲ್ಪಮಟ್ಟಿಗೆ ಸತ್ಯಾಂಶವೂ ಇದೆಯೆಂದು ಯಾರಿಗಾದರೂ ಅನಿಸದಿರದು.

‘ನಾನು ಕನಕಪುರದ ಬಂಡೆ’ ಎಂದೇ ಸ್ವಯಂ ಬಣ್ಣಿಸಿಕೊಳ್ಳುವ ಡಿ.ಕೆ. ಶಿವಕುಮಾರ್‌ಗೆ ಈ ದಾಳಿ ಅನಿರೀಕ್ಷಿತವೇನೂ ಇರಲಿಕ್ಕಿಲ್ಲ. ಏಕೆಂದರೆ ಅದು ಅವರಿಗೆ ಹೊಸತಲ್ಲ.

2017ರಲ್ಲಿ ರಾಜ್ಯಸಭೆ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ಸ್ಪರ್ಧಿಸಿದ್ದ ಅಹ್ಮದ್‌ ಪಟೇಲ್‌ ಅವರನ್ನು ಸೋಲಿಸಲು ಮುಂದಾಗಿದ್ದ ಬಿಜೆಪಿ, ಅಲ್ಲಿನ ಕಾಂಗ್ರೆಸ್ ಶಾಸಕರನ್ನು ಸೆಳೆದಿತ್ತು. ಅಲ್ಲಿನ ಶಾಸಕರನ್ನು ಕರೆತಂದು ಆಶ್ರಯ ನೀಡಿದ್ದ ಶಿವಕುಮಾರ್‌, ಐ.ಟಿ ದಾಳಿಗೆ ಗುರಿಯಾಗಿದ್ದರು. ಇದೇನೂ ಆಕಸ್ಮಿಕ ಎಂದು ಆ ಹೊತ್ತು ಯಾರಿಗೂ ಅನ್ನಿಸಿರಲಿಲ್ಲ. ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಪತನಗೊಂಡು, ಉಪಚುನಾವಣೆಗೆ ಸಿದ್ಧತೆ ನಡೆಯುತ್ತಿದ್ದಾಗಲೇ ಇ.ಡಿ ಅಧಿಕಾರಿಗಳು ಡಿಕೆಶಿ ಅವರನ್ನು ಬಂಧಿಸಿ ಜೈಲಿಗೆ ಕಳಿಸಿದ್ದರು. ಈಗ ಸಿಬಿಐ ಪಾಳಿ.

ಈಗಲೂ ವಿಧಾನಸಭೆಯ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ಹಾಗೂ ವಿಧಾನಪರಿಷತ್ತಿನ ನಾಲ್ಕು ಕ್ಷೇತ್ರಗಳಿಗೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಸರ್ಕಾರವೊಂದರ ಭವಿಷ್ಯ ನಿರ್ಧರಿಸುವಂತಹ ಮಹತ್ವದ ಚುನಾವಣೆಗಳು ಇವಲ್ಲ.

ಆದರೆ, ಬಿಜೆಪಿಯಲ್ಲಿ ದಿನೇ ದಿನೇ ಬಲಗೊಳ್ಳುತ್ತಿರುವ ನಾಯಕತ್ವ ಬದಲಾವಣೆಯ ಅಂತಃಸ್ವರ ಹಾಗೂ ರಾಜಕೀಯ ಒಳಸಮರವನ್ನು ಬೆನ್ನಿಗಿಟ್ಟು ನೋಡಿದರೆ ಈ ದಾಳಿಯ ಹಿಂದೆ ಬೇರೆಯೇ ತರ್ಕಗಳು ಇರುವುದು ಗೋಚರಿಸುತ್ತದೆ. ಬಿ.ಎಸ್. ಯಡಿಯೂರಪ್ಪ ನಾಯಕತ್ವ ಬದಲಾವಣೆ ಬಗ್ಗೆ ಪಕ್ಷದಲ್ಲೇ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ಚುನಾವಣೆ ಹೊತ್ತಿನಲ್ಲಿ ನಡೆದಿರುವ ಸಿಬಿಐ ದಾಳಿಯೂ ಇದರ ಒಂದು ಭಾಗವೇ ಎಂಬ ಸಂಶಯ ಬಿಜೆಪಿ ಪಡಸಾಲೆಯಲ್ಲೇ ಮೂಡಿದೆ.

ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಮೇಲೆ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ಅವರಿಗೂ ಇದು ಪ್ರತಿಷ್ಠೆಯ ಕಣ.
ಬಿಜೆಪಿ ಸರ್ಕಾರಗಳ ಆಡಳಿತ ವೈಫಲ್ಯ ಮುಂದಿಟ್ಟುಕೊಂಡಿರುವಶಿವಕುಮಾರ್‌, 2023ರಲ್ಲಿ ಮುಖ್ಯಮಂತ್ರಿ ಆಗಿಯೇ ತೀರುವೆ ಎಂಬ ಛಲ ಹೊಂದಿದ್ದು, ಅದಕ್ಕೆ ಬೇಕಾದ ಸಿದ್ಧತೆ ನಡೆಸಿದ್ದಾರೆ.

ಈಗಲೇ ಅವರನ್ನು ‘ಸಿಬಿಐ’ ಸಂಕೋಲೆಯಲ್ಲಿ ಕಟ್ಟಿ ಹಾಕಿ, ಅಧಿಕಾರದಲ್ಲಿ ಬಿಜೆಪಿಯೇ ಮುಂದುವರಿಯುವ ದಾರಿಯನ್ನು ಸುಗಮಗೊಳಿಸುವುದು ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕಮಲ ಪಾಳಯದ ನಾಯಕರ ಮೊದಲ ಸಂಕಲ್ಪ.

ಇದು ಸಾಧ್ಯವಾಗಬೇಕಾದರೆ ಯಡಿಯೂರಪ್ಪನವರ ಪ್ರಶ್ನಾತೀತ ನಾಯಕತ್ವವನ್ನು ಅಲ್ಲಾಡಿಸಬೇಕು. ಅದಕ್ಕೆ ಚುನಾವಣೆಯ ಅಸ್ತ್ರವನ್ನು ಬಳಸಿಕೊಳ್ಳಲಾಗುತ್ತಿದೆಯೇ ಎಂಬ ಸಂಶಯವೂ ಇದೆ. ಈ ಚುನಾವಣೆ ಹೊತ್ತಿಗೆ ಡಿಕೆಶಿ ಮೇಲೆ ದಾಳಿ ನಡೆಸಿದರೆ ಒಕ್ಕಲಿಗರ ಮತಗಳು ಕ್ರೋಡೀಕರಣಗೊಳ್ಳುತ್ತವೆ. ಆರ್.ಆರ್‌.ನಗರ ಹಾಗೂ ಶಿರಾದಲ್ಲಿ ನಿರ್ಣಾಯಕವಾಗಿರುವ ಒಕ್ಕಲಿಗರು, ಬಿಜೆಪಿ ವಿರುದ್ಧ ಸಿಟ್ಟೆದ್ದು ಕಾಂಗ್ರೆಸ್ ಗೆಲ್ಲಿಸಬಹುದು. ಯಡಿಯೂರಪ್ಪ ಹೇಳಿದಂತೆ, ಮುನಿರತ್ನ ಅವರಿಗೆ ಆರ್.ಆರ್. ನಗರದಲ್ಲಿ ಟಿಕೆಟ್‌ ಕೊಟ್ಟರೂ ಅಲ್ಲಿ ಬಿಜೆಪಿ ಸೋತರೆ, ಶಿರಾದಲ್ಲೂ ಸೋಲು ಕಂಡರೆ ನಾಯಕತ್ವದ ಮೇಲಿನ ‘ಜನರ ಅವಿಶ್ವಾಸ’ವನ್ನು ಮುಂದಿಟ್ಟುಕೊಂಡು ಅವರನ್ನು ಕುರ್ಚಿಯಿಂದ ಇಳಿಸುವ ತಂತ್ರಗಾರಿಕೆಯಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಂತಾಗುತ್ತದೆ ಎಂಬ ತರ್ಕವೂ ಇದರ ಹಿಂದೆ ಕೆಲಸ ಮಾಡಿದೆ ಎಂದೂ ಹೇಳಲಾಗುತ್ತಿದೆ.

ಒಂದೇ ಅಸ್ತ್ರದಲ್ಲಿ ಎರಡು ತಂತ್ರಗಾರಿಕೆ ಮಾಡಿ, ಇಬ್ಬರು ನಾಯಕರನ್ನು ಹೆಡೆಮುರಿ ಕಟ್ಟಲು ಸಿಬಿಐ ಅನ್ನು ಅಖಾಡಕ್ಕೆ ಇಳಿಸಲಾಗಿದೆಯೇ ಎಂಬ ಚರ್ಚೆಗೂ ಇದು ದಾರಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT