ಶುಕ್ರವಾರ, ಅಕ್ಟೋಬರ್ 23, 2020
27 °C
ಶೋಧ ಕಾರ್ಯಾಚರಣೆ ವೇಳೆ ₹ 57 ಲಕ್ಷ ನಗದು ವಶ

ಐದು ವರ್ಷದಲ್ಲಿ ₹74.93 ಕೋಟಿ ಅಕ್ರಮ ಆಸ್ತಿ: ಡಿಕೆಶಿ ವಿರುದ್ಧ ಸಿಬಿಐ ಎಫ್‌ಐಆರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿರುವ ಸಿಬಿಐ, ಕರ್ನಾಟಕ, ದೆಹಲಿ ಮತ್ತು ಮುಂಬೈನ 14 ಕಡೆಗಳಲ್ಲಿ ಸೋಮವಾರ ಶೋಧ ನಡೆಸಿದೆ. ದಾಳಿ ವೇಳೆ ₹ 57 ಲಕ್ಷ ನಗದು, ದಾಖಲೆಗಳು ಮತ್ತು ಕಂಪ್ಯೂಟರ್‌ ಹಾರ್ಡ್‌ ಡಿಸ್ಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

2013ರ ಏಪ್ರಿಲ್‌ 1ರಿಂದ 2018ರ ಏಪ್ರಿಲ್‌ 30ರ ಅವಧಿಯಲ್ಲಿ ಅಂದರೆ ಕಳೆದ ಕಾಂಗ್ರೆಸ್‌ ಸರ್ಕಾರದ ಸಮಯದಲ್ಲಿ ₹ 74.93 ಕೋಟಿ ಮೌಲ್ಯದ ಅಕ್ರಮ ಆಸ್ತಿ ಸಂಪಾದಿಸಿರುವ ಆರೋಪದಡಿ ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳದ ಬೆಂಗಳೂರು ಘಟಕ ಶನಿವಾರ ಎಫ್‌ಐಆರ್‌ ದಾಖಲಿಸಿದೆ. ತನಿಖೆಯ ಅವಧಿಗೂ ಮೊದಲು ಶಿವಕುಮಾರ್‌ ಕುಟುಂಬ ₹ 33.92 ಕೋಟಿ ಆಸ್ತಿ ಹೊಂದಿತ್ತು. ಐದು ವರ್ಷಗಳ ಅವಧಿಯಲ್ಲಿ ಅವರ ಕುಟುಂಬ ₹ 166.79 ಕೋಟಿಯನ್ನು ವರಮಾನ ಮತ್ತು ಇತರ ರೂಪದಲ್ಲಿ ಪಡೆದಿದೆ. ಇದೇ ಅವಧಿಯಲ್ಲಿ ₹ 113.12 ಕೋಟಿ ವೆಚ್ಚ ಮಾಡಲಾಗಿದೆ ಎಂಬ ಅಂಶ ಎಫ್‌ಐಆರ್‌ನಲ್ಲಿದೆ.

ಇದನ್ನೂ ಓದಿ: ಡಿ.ಕೆ.ಶಿವಕುಮಾರ್‌ ‘ಸಾಮ್ರಾಜ್ಯ’ಕ್ಕೆ ಲಗ್ಗೆ ಇಟ್ಟ ಸಿಬಿಐ

2018ರ ಏ.30ರ ವೇಳೆಗೆ ಆರೋಪಿತರ ಕುಟುಂಬ ₹ 128.60 ಕೋಟಿ ಆಸ್ತಿ ಹೊಂದಿತ್ತು. ವರಮಾನ, ಸ್ವೀಕೃತಿ ಮತ್ತು ವೆಚ್ಚಕ್ಕೆ ಹೋಲಿಸಿದರೆ ಶೇಕಡ 44.93ರಷ್ಟು ಹೆಚ್ಚುವರಿ ಆಸ್ತಿ ಇರುವುದು ಪ್ರಾಥಮಿಕ ತನಿಖೆ ವೇಳೆ ಪತ್ತೆಯಾಗಿದೆ ಎಂದು ಸಿಬಿಐ ಉಲ್ಲೇಖಿಸಿದೆ.  ನ್ಯಾಯಾಲಯದಿಂದ ಶೋಧನಾ ವಾರೆಂಟ್‌ ಪಡೆದಿದ್ದ ತನಿಖಾ ತಂಡ ಬೆಂಗಳೂರು, ರಾಮನಗರ, ಹಾಸನ ಜಿಲ್ಲೆಗಳ ವಿವಿಧೆಡೆ, ದೆಹಲಿಯ ನಾಲ್ಕು ಕಡೆ ಮತ್ತು ಮುಂಬೈನ ಒಂದು ಸ್ಥಳದಲ್ಲಿ ಏಕಕಾಲಕ್ಕೆ ದಾಳಿ ನಡೆಸಿತು. ಬೆಳಿಗ್ಗೆ 6 ಗಂಟೆಗೆ ಆರಂಭವಾಗಿದ್ದ ದಾಳಿ ಸತತ 12 ಗಂಟೆಗಳ ಕಾಲ ನಡೆಯಿತು.

ಬೆಂಗಳೂರಿನ ಸದಾಶಿವನಗರದಲ್ಲಿರುವ ಶಿವಕುಮಾರ್‌ ಅವರ ಮನೆ, ಕಚೇರಿ, ಸಂಸದರೂ ಆಗಿರುವ ಅವರ ಸಹೋದರ ಡಿ.ಕೆ. ಸುರೇಶ್‌ ಮನೆ, ಶಿವಕುಮಾರ್‌ ಅವರ ಜತೆ ವ್ಯಾವಹಾರಿಕ ನಂಟು ಹೊಂದಿರುವ ಕೆಲವು ಕಂಪನಿಗಳ ಕಚೇರಿಗಳಲ್ಲಿ ಶೋಧ ನಡೆದಿದೆ. ಅವರ ಹುಟ್ಟೂರು ಕನಕಪುರ ತಾಲ್ಲೂಕಿನ ದೊಡ್ಡಾಲಹಳ್ಳಿಯಲ್ಲಿರುವ ಮನೆ, ಕೋಡಿಹಳ್ಳಿಯಲ್ಲಿರುವ ಮನೆಗಳ ಮೇಲೂ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು, ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಶಿವಕುಮಾರ್‌ ಅವರ ಆಪ್ತ ಹಾಸನದ ಸಚಿನ್‌ ನಾರಾಯಣ್‌ ಅವರ ಮನೆ, ಕಚೇರಿಗಳಲ್ಲೂ ಶೋಧ ನಡೆಸಲಾಗಿದೆ. ದೆಹಲಿಯಲ್ಲಿರುವ ಶಿವಕುಮಾರ್‌ ಮತ್ತು ಸುರೇಶ್‌ ಅವರ ಮನೆಗಳು, ಕಚೇರಿ ಸೇರಿದಂತೆ ನಾಲ್ಕು ಕಡೆ ದಾಳಿ ನಡೆದಿದೆ. ಕೆಪಿಸಿಸಿ ಅಧ್ಯಕ್ಷರ ಜತೆ ವ್ಯಾವಹಾರಿಕ ನಂಟು ಹೊಂದಿರುವ ವ್ಯಕ್ತಿಗೆ ಸಂಬಂಧಿಸಿದಂತೆ ಮುಂಬೈನ ಒಂದು ಸ್ಥಳದಲ್ಲೂ ಸಿಬಿಐ ಅಧಿಕಾರಿಗಳು ಶೋಧ ನಡೆಸಿದ್ದಾರೆ.

ಕಾರ್ಯಾಚರಣೆ ಕುರಿತು ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿರುವ ಸಿಬಿಐ ಅಧಿಕಾರಿಗಳು, ‘ದಾಳಿಯ ವೇಳೆ ಸುಮಾರು ₹ 57 ಲಕ್ಷ ನಗದು ಮತ್ತು ಸ್ಥಿರಾಸ್ತಿ ಒಡೆತನಕ್ಕೆ ಸಂಬಂಧಿಸಿದ ದಾಖಲೆಗಳು, ಬ್ಯಾಂಕ್‌ಗೆ ಸಂಬಂಧಿಸಿದ ದಾಖಲೆಗಳು, ಕಂಪ್ಯೂಟರ್‌ ಹಾರ್ಡ್‌ ಡಿಸ್ಕ್‌ ಸೇರಿದಂತೆ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ’ ಎಂದು ತಿಳಿಸಿದ್ದಾರೆ.

ಸಿಆರ್‌ಪಿಎಫ್‌ ಭದ್ರತೆ: ಎಲ್ಲ ಕಡೆಗಳಲ್ಲೂ ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌‍ಪಿಎಫ್‌) ಯೋಧರ ಭದ್ರತೆಯೊಂದಿಗೆ ಶೋಧ ನಡೆಸಲಾಯಿತು. ಶೋಧ ನಡೆಯುವ ಸ್ಥಳಗಳಿಗೆ ಹೊರಗಿನವರ ಪ್ರವೇಶವನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗಿತ್ತು. ಕಾರ್ಯಾಚರಣೆ ವೇಳೆ ದೂರವಾಣಿ ಸಂಪರ್ಕಗಳನ್ನು ಕಡಿತಗೊಳಿಸಲಾಗಿತ್ತು.

ಶಿವಕುಮಾರ್‌ ಸೇರಿದಂತೆ ಯಾರನ್ನೂ ಸೋಮವಾರ ವಿಚಾರಣೆ ನಡೆಸಿಲ್ಲ. ಲಭ್ಯವಾಗಿರುವ ಎಲ್ಲ ದಾಖಲೆಗಳನ್ನು ಸಿಬಿಐ ಕಚೇರಿಗೆ ಕೊಂಡೊಯ್ದಿದ್ದು, ಪರಿಶೀಲನೆ ಆರಂಭವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

2017ರಲ್ಲಿ ಆರಂಭವಾದ ಪ್ರಕರಣ

ಆದಾಯ ತೆರಿಗೆ (ಐ.ಟಿ) ಅಧಿಕಾರಿಗಳು 2017ರ ಆಗಸ್ಟ್‌ 2ರಂದು ಡಿ.ಕೆ. ಶಿವಕುಮಾರ್‌ ಮತ್ತು ಅವರ ನಿಕಟವರ್ತಿಗಳಿಗೆ ಸೇರಿದ 87 ಸ್ಥಳಗಳ ಮೇಲೆ ದಾಳಿಮಾಡಿ, ಶೋಧ ನಡೆಸಿದ್ದರು.  ₹ 374 ಕೋಟಿ ಮೌಲ್ಯದ ಅಘೋಷಿತ ಆಸ್ತಿ ಹೊಂದಿರುವ ಆರೋಪದಡಿ ಆರ್ಥಿಕ ಅಪರಾಧಗಳ ನ್ಯಾಯಾಲಯದಲ್ಲಿ ಶಿವಕುಮಾರ್‌ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಮೂರು ಪ್ರಕರಣ ದಾಖಲಿಸಲಾಗಿತ್ತು.

ಐ.ಟಿ ವರದಿ ಆಧರಿಸಿ ಪ್ರತ್ಯೇಕ ಪ್ರಕರಣ ದಾಖಲಿಸಿದ್ದ ಜಾರಿ ನಿರ್ದೇಶನಾಲಯ, 2019ರ ಸೆಪ್ಟೆಂಬರ್‌ 3ರಂದು ಅವರನ್ನು ಬಂಧಿಸಿತ್ತು. 48 ದಿನಗಳ ಕಾಲ ತಿಹಾರ್‌ ಜೈಲಿನಲ್ಲಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಅಕ್ರಮ ಆಸ್ತಿ ಹೊಂದಿದ ಆರೋಪದಡಿ ಶಿವಕುಮಾರ್‌ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಐ.ಟಿ, ಇ.ಡಿ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ರಾಜ್ಯ ಸರ್ಕಾರ 2019ರ ಅಕ್ಟೋಬರ್‌ನಲ್ಲಿ ಸಿಬಿಐ ತನಿಖೆಗೆ ಸಮ್ಮತಿ ನೀಡಿತ್ತು. 2020ರ ಮಾರ್ಚ್‌ನಲ್ಲಿ ಪ್ರಾಥಮಿಕ ತನಿಖೆ ಆರಂಭಿಸಿದ್ದ ಸಿಬಿಐ, ಈಗ ಎಫ್‌ಐಆರ್‌ ದಾಖಲಿಸಿದೆ.

ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ

ಸಿಬಿಐ ದಾಳಿ ಮಾಹಿತಿ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಶಿವಕುಮಾರ್‌ ನಿವಾಸದತ್ತ ಬಂದ ಕಾಂಗ್ರೆಸ್‌ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಸಿಬಿಐ ಅಧಿಕಾರಿಗಳು ಸ್ಥಳದಿಂದ ತೆರಳುವವರೆಗೂ ಬಹುತೇಕರು ಅಲ್ಲಿಯೇ ಇದ್ದರು.

ಸಿಬಿಐ ಕಚೇರಿಗೆ ಭದ್ರತೆ: ಶಿವಕುಮಾರ್‌ ಮತ್ತು ನಿಕಟವರ್ತಿಗಳ ಮೇಲೆ ದಾಳಿ ಆರಂಭವಾಗುತ್ತಿದ್ದಂತೆ ಗಂಗಾನಗರದಲ್ಲಿರುವ ಸಿಬಿಐ ಕಚೇರಿಗೆ ಬಿಗಿ ಪೊಲೀಸ್‌ ಭದ್ರತೆ ಕಲ್ಪಿಸಲಾಯಿತು. ಕಚೇರಿ ಸುತ್ತಲೂ ಬ್ಯಾರಿಕೇಡ್‌ ಅಳವಡಿಸಿದ್ದು, ಹೆಚ್ಚಿನ ಪೊಲೀಸರನ್ನು  ನಿಯೋಜಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು