ಗುರುವಾರ , ಆಗಸ್ಟ್ 11, 2022
28 °C
ಕೇಂದ್ರ ಕಚೇರಿ ಬೆಂಗಳೂರಿನಲ್ಲೇ ಇರಲಿ: ಯಕ್ಷಗಾನ ಕ್ಷೇತ್ರದ ಪ್ರಮುಖರ ಆಗ್ರಹ

ಸಂಸ್ಕೃತಿ ಸಚಿವರ ಸ್ವಕ್ಷೇತ್ರ ಕಾರ್ಕಳಕ್ಕೆ ಯಕ್ಷಗಾನ ಅಕಾಡೆಮಿ?

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯ ಕೇಂದ್ರ ಕಚೇರಿ‌ ಸ್ಥಳಾಂತರ ಪ್ರಸ್ತಾವವು ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಾರಿ ಮಂಗಳೂರಿನ ಬದಲು ಕನ್ನಡ ಮತ್ತು ಸಂಸ್ಕೃತಿ ಸಚಿವರ ಸ್ವಕ್ಷೇತ್ರ ಉಡುಪಿ ಜಿಲ್ಲೆಯ ಕಾರ್ಕಳಕ್ಕೆ ಸ್ಥಳಾಂತರಿಸುವ ಪ್ರಯತ್ನಗಳು ಸದ್ದಿಲ್ಲದೆ ನಡೆಯುತ್ತಿವೆ.

‘ಕಲೆಯ ಬೆಳವಣಿಗೆಗೆ ಅಕಾಡೆಮಿಯ ಕೇಂದ್ರ ಕಚೇರಿ ಬೆಂಗಳೂರಿನಲ್ಲಿಯೇ ಇರಬೇಕು’ ಎನ್ನುವುದು ಅಕಾಡೆಮಿ ಕಾರ್ಯಕಾರಿ ಸಮಿತಿ ಹಾಗೂ ಕಲಾವಿದರ ಆಗ್ರಹ. ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಅವರು ತಮ್ಮ ಕ್ಷೇತ್ರಕ್ಕೆ ಅಕಾಡೆಮಿ ಕಚೇರಿ ಸ್ಥಳಾಂತರಿಸಲು ಮುಂದಾಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಈ ಹಿಂದೆ ಉಮಾಶ್ರೀ ಅವರು ಇಲಾಖೆ ಸಚಿವರಾಗಿದ್ದಾಗ ಅಕಾಡೆಮಿಯ ಕೇಂದ್ರ ಕಚೇರಿಯನ್ನು ಮಂಗಳೂರಿಗೆ ಸ್ಥಳಾಂತರಿಸುವಂತೆ ಆದೇಶ ಹೊರಡಿಸಿದ್ದರು. ದಕ್ಷಿಣ ಕನ್ನಡ, ಕರಾವಳಿ ಪ್ರದೇಶದಲ್ಲಿ ಯಕ್ಷಗಾನದ ಕಲಾವಿದರು ಹೆಚ್ಚಿದ್ದಾರೆ ಎಂಬ ಕಾರಣಕ್ಕೆ ಈ ಆದೇಶ ಹೊರಡಿಸಲಾಗಿತ್ತು. ಆದರೆ, ಸರ್ಕಾರದ ಈ ಕ್ರಮಕ್ಕೆ ಕಲಾವಿದರ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅಕಾಡೆಮಿಯ ಅಂದಿನ ಅಧ್ಯಕ್ಷ ಎಂ.ಎ.ಹೆಗಡೆ ಹಾಗೂ ಸದಸ್ಯರು ಕೂಡ ಆಕ್ಷೇಪಿಸಿದ್ದರು. ಆದ್ದರಿಂದ ನಂತರ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರ, ಸ್ಥಳಾಂತರದ ಆದೇಶವನ್ನು ಹಿಂಪಡೆದಿತ್ತು. 

ರಾಜಧಾನಿ ಸೂಕ್ತ: ಸದ್ಯ ಅಕಾಡೆಮಿಯ ಕೇಂದ್ರ ಕಚೇರಿ ಕನ್ನಡ ಭವನದಲ್ಲಿದೆ. ಯಕ್ಷಗಾನದಲ್ಲಿ ಮೂಡಲಪಾಯ, ಬಡಗುತಿಟ್ಟು, ತೆಂಕುತಿಟ್ಟು, ಬಡಾಬಡಗುತಿಟ್ಟು, ತಾಳ ಮದ್ದಳೆ ಸೇರಿ ಹಲವು ಪ್ರಕಾರಗಳಿವೆ. ಎಲ್ಲವೂ ಅಕಾಡೆಮಿ ವ್ಯಾಪ್ತಿಗೆ ಬರುತ್ತವೆ. ಮೂಡಲಪಾಯ ಯಕ್ಷಗಾನ ಪ್ರಕಾರವು ತುಮಕೂರು, ರಾಮನಗರ, ಮೈಸೂರು, ಕೋಲಾರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಸೇರಿ ಕೆಲವು ಜಿಲ್ಲೆಗಳಲ್ಲಿ ಅಸ್ತಿತ್ವದಲ್ಲಿದೆ. ಹೀಗಾಗಿ, ಆಡಳಿತಾತ್ಮಕ ಹಾಗೂ ಕಲೆಯ ಬೆಳವಣಿಗೆಯ ದೃಷ್ಟಿಯಿಂದ ಕಚೇರಿ ಬೆಂಗಳೂರಿನಲ್ಲಿಯೇ ಇರಬೇಕು ಎನ್ನುವುದು ಯಕ್ಷಗಾನದ ಪ್ರಮುಖರ ಅಭಿಮತ.

‘ಯಕ್ಷಗಾನ ಕಲೆ ಕರಾವಳಿಗಷ್ಟೇ ಸೀಮಿತವಾಗದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿದೆ. ಕಚೇರಿಯನ್ನು ಕಾರ್ಕಳಕ್ಕೆ ಸ್ಥಳಾಂತರಿಸಿದರೆ ಮೂಡಲ ಪಾಯ ಸೇರಿ ಯಕ್ಷಗಾನದ ಇನ್ನಿತರ ಕಲಾ ಪ್ರಕಾರಗಳಿಗೆ ಅಷ್ಟಾಗಿ ಪ್ರೋತ್ಸಾಹ ಸಿಗುವುದಿಲ್ಲ. ಕೇಂದ್ರ ಕಚೇರಿ ಬೆಂಗಳೂರಿನಲ್ಲೇ ಇರುವುದು ಸೂಕ್ತ’ ಎಂದು ಅಕಾಡೆಮಿಯ ಅಧ್ಯಕ್ಷ ಮತ್ತು ಸದಸ್ಯರು ಅಭಿಮತ ವ್ಯಕ್ತಪಡಿಸಿದ್ದಾರೆ.

 

‘ಕಾರ್ಯನಿರ್ವಹಣೆ ಸಮಸ್ಯೆ’

‘ಯಕ್ಷಗಾನದ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಇದ್ದಲ್ಲಿ ಕಾರ್ಯನಿರ್ವಹಣೆ ಸುಲಭವಾಗಲಿದೆ. ಸ್ಥಳಾಂತರದಿಂದ ಕಲಾವಿದರಿಗೆ ಅಂತಹ ಲಾಭವಾಗದು. ಮೂಡಲಪಾಯದ ಕಲಾವಿದರು ಬೆಂಗಳೂರಿನ ಸುತ್ತಮುತ್ತ ಇದ್ದಾರೆ. ವೃತ್ತಿಪರ ಮೇಳಗಳು ಇಲ್ಲಿಗೆ ಬಂದು ಪ್ರದರ್ಶನ ನೀಡುತ್ತಿವೆ. ಯಕ್ಷಗಾನ ಕಲೆಯನ್ನು ಒಂದು ಪ್ರದೇಶಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಈ ಹಿಂದೆ ಕೂಡ ಇಂತಹ ಪ್ರಯತ್ನಗಳು ನಡೆದಿದ್ದವು. ಕಲಾವಿದರ ವಿರೋಧದಿಂದ
ಆಗ ಸ್ಥಳಾಂತರ ಪ್ರಕ್ರಿಯೆ ಸ್ಥಗಿತವಾಗಿತ್ತು’ ಎಂದು ಅಕಾಡೆಮಿ ಸದಸ್ಯ ಶ್ರೀನಿವಾಸ ಸಾಸ್ತಾನ ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು