ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶ ಹಬ್ಬದ ಬಳಿಕ ಯಡಿಯೂರಪ್ಪ ರಾಜ್ಯ ಪ್ರವಾಸ

ಕೊಳ್ಳೇಗಾಲ ಕ್ಷೇತ್ರದ ಬಿಎಸ್‌ಪಿ ಶಾಸಕ ಎನ್‌. ಮಹೇಶ್‌ ಬಿಜೆಪಿ ಸೇರ್ಪಡೆ
Last Updated 5 ಆಗಸ್ಟ್ 2021, 20:29 IST
ಅಕ್ಷರ ಗಾತ್ರ

ಬೆಂಗಳೂರು: ‘ಪಕ್ಷದ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದು, ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿ ಮತ್ತೆ ಅಧಿಕಾರಕ್ಕೆ ತರುವ ತನಕ ವಿಶ್ರಮಿಸುವುದಿಲ್ಲ’ ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ನಡೆದ ಕೊಳ್ಳೇಗಾಲ ಕ್ಷೇತ್ರದ ಬಿಎಸ್‌ಪಿ ಶಾಸಕ ಎನ್‌.ಮಹೇಶ್‌ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗಣೇಶ ಹಬ್ಬದ ಬಳಿಕ ರಾಜ್ಯ ಪ್ರವಾಸ ಆರಂಭಿಸುವರು ಎಂದು ಮೂಲಗಳು ತಿಳಿಸಿವೆ.

‘ರಾಜ್ಯದಲ್ಲಿ ಪಕ್ಷದ ಸಂಘಟನೆ ದುರ್ಬಲವಾಗಿರುವ ಭಾಗದಲ್ಲಿ ಓಡಾಡಿ ಬಲಪಡಿಸುತ್ತೇನೆ. ಸಾಕಷ್ಟು ಜನ ಬಿಜೆಪಿ ತತ್ವ, ಸಿದ್ಧಾಂತಗಳನ್ನು ಒಪ್ಪಿ ಪಕ್ಷವನ್ನು ಸೇರುತ್ತಿದ್ದಾರೆ. ಪರಿಶಿಷ್ಟರು ಮತ್ತು ಹಿಂದುಳಿದವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಕ್ಕೆ ಕರೆ ತರುವ ಕೆಲಸ ಆಗಬೇಕು’ ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಮಹೇಶ್‌ ಅವರು ಚಳವಳಿ ಹಿನ್ನೆಲೆಯಿಂದ ಬಂದವರು. ಅವರ ಸಂಘಟನಾ ಶಕ್ತಿ ದೊಡ್ಡ ಪ್ರಮಾಣದಲ್ಲಿದೆ. ಹೀಗಾಗಿ ಅವರು ಶಾಸಕರಾಗುವ ಮೊದಲೇ ದಲಿತ ಸಮುದಾಯದ ಹೃದಯವನ್ನು ಗೆದ್ದವರು. ಕೊಳ್ಳೇಗಾಲದಲ್ಲಿ ಎಲ್ಲ ಜನಾಂಗದವರು ಸೇರಿ ಅವರನ್ನು ಶಾಸಕರನ್ನಾಗಿ ಆರಿಸಿದ್ದಾರೆ’ ಎಂದರು.

‘ಮಹೇಶ್‌ ಅವರ ಚಿಂತನೆ ಮತ್ತು ಬಿಜೆಪಿ ಚಿಂತನೆ ವಿಭಿನ್ನ ಅಲ್ಲ. ಸರ್ವೇಜನ ಸುಖಿನೋ ಭವಂತು ಎಂಬ ನಮ್ಮ ಪಕ್ಷದ ಚಿಂತನೆ ಮನವರಿಕೆ ಆದ ಮೇಲೆಯೇ ಯಡಿಯೂರಪ್ಪ ಮುಖ್ಯಮಂತ್ರಿ ಆಗುವ ಸಂದರ್ಭದಲ್ಲಿ ಸ್ವಯಂ ಬೆಂಬಲ ನೀಡಿದರು’ ಎಂದರು.

ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಮಹೇಶ್‌, ‘ಬಿಜೆಪಿ ಸಿದ್ಧಾಂತವನ್ನು ಮುಕ್ತ ಮನಸ್ಸಿನಿಂದ ಒಪ್ಪಿದ್ದೇನೆ. ಪ್ರಧಾನಿ ಮೋದಿ ಮತ್ತು ಯಡಿಯೂರಪ್ಪ ಅವರ ನಾಯಕತ್ವ ಮೆಚ್ಚಿ ಪಕ್ಷ ಸೇರಿದ್ದೇನೆ. ಡಾ.ಅಂಬೇಡ್ಕರ್ ನನ್ನ ಪ್ರೇರಣಾ ಶಕ್ತಿ’ ಎಂದು ಹೇಳಿದರು.

ಪಕ್ಷದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಅವರು ಮಹೇಶ್ ಅವರಿಗೆ ಪಕ್ಷದ ಧ್ವಜ ನೀಡಿ ಸ್ವಾಗತಿಸಿದರು.

ಚಾಮರಾಜನಗರದ ಕಡೆ ವಿಜಯೇಂದ್ರ ನಡೆ: ‘ಚಾಮರಾಜನಗರ ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ಮಹೇಶ್‌ ಮತ್ತು ವಿಜಯೇಂದ್ರ ಅವರ ಶಕ್ತಿ ಒಟ್ಟಾದರೆ ಮುಂದಿನ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳನ್ನು ಗೆಲ್ಲಬಹುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯಪಟ್ಟರು. ‘ಮೈಸೂರು ಮತ್ತು ಚಾಮರಾಜನಗರ ಭಾಗದಲ್ಲಿ ವಿಜಯೇಂದ್ರ ಯುವ ಶಕ್ತಿಯಾಗಿ ಹೊಮ್ಮಿದ್ದು, ಪಕ್ಷವನ್ನು ಕಟ್ಟುತ್ತಿದ್ದಾರೆ. ಈ ಎಲ್ಲ ಕಾರಣಗಳಿಗೆ ಬಿಜೆಪಿ ಸೇರಿದ್ದೇನೆಯೇ ಹೊರತು ಅಧಿಕಾರದ ಆಸೆಯಿಂದ ಅಲ್ಲ’ ಎಂದು ಎನ್‌.ಮಹೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT