ಶನಿವಾರ, ಸೆಪ್ಟೆಂಬರ್ 18, 2021
30 °C
ವಿಜಯೇಂದ್ರಗೆ ಸಚಿವ ಸ್ಥಾನ ಕೊಡದಿದ್ದರೆ ಬಂಡಾಯ ಖಚಿತ: ಯಡಿಯೂರಪ್ಪ ಬೆದರಿಕೆ

ಬಿಎಸ್‌ವೈ ಬಿಗಿ ಪಟ್ಟು: ಸಂಪುಟ ಇಕ್ಕಟ್ಟು

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ನವದೆಹಲಿ: ಕಿರಿಯ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪಟ್ಟು ಹಿಡಿದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಬಂಡಾಯವೇಳುವ ‘ಬೆದರಿಕೆ’ ತಂತ್ರಕ್ಕೆ ಮುಂದಾಗಿರುವುದು ಬೊಮ್ಮಾಯಿ ಸಚಿವ ಸಂಪುಟದ ‘ಸರಾಗ’ ರಚನೆಗೆ ಅಡ್ಡಗಾಲಾಗಿ ಪರಿಣಮಿಸಿದೆ.

‘ಪುತ್ರನಿಗೆ ಕಡೆಯ ಪಕ್ಷ ಪ್ರಮುಖ ಖಾತೆಯೊಂದಿಗೆ ಮಂತ್ರಿ ಸ್ಥಾನವನ್ನಾದರೂ ನೀಡದಿದ್ದರೆ, 2012ರಲ್ಲಿ ಪಕ್ಷ ತ್ಯಜಿಸಿ ಹೊರಹೋಗಿದ್ದ ತಮ್ಮ ನಿಲುವನ್ನೇ ಮತ್ತೆ ತಾಳುವುದು ಅನಿವಾರ್ಯವಾಗಲಿದೆ’ ಎಂಬ ಯಡಿಯೂರಪ್ಪ ಅವರ ‘ಬೆದರಿಕೆ’ಯು ಬಿಜೆಪಿ ವರಿಷ್ಠರನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ.

ಸೋಮವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಪ್ರಮುಖ ಮುಖಂಡರೊಂದಿಗೆ ನಡೆಸಲಾದ ಚರ್ಚೆಯ ವೇಳೆ ಸಂಪುಟ ಸೇರ್ಪಡೆಗೆ 48 ಸಂಭವನೀಯ ಹೆಸರುಗಳ ಪಟ್ಟಿಯೊಂದನ್ನು ಒಪ್ಪಿಸಿದ್ದ ಮುಖ್ಯಮಂತ್ರಿ ಬೊಮ್ಮಾಯಿ, ಯಡಿಯೂರಪ್ಪ ಅವರ ಈ ಬೇಡಿಕೆಯನ್ನು ಮಂಡಿಸಿದ್ದರು.

‘ಒಂದೊಮ್ಮೆ ವಿಜಯೇಂದ್ರ ಅವರು ಸರ್ಕಾರದ ಭಾಗವಾದರೆ, ಯಡಿಯೂರಪ್ಪ ಅವರ ರಾಜೀನಾಮೆ ಪಡೆದ ಉದ್ದೇಶಕ್ಕೆ ಅರ್ಥವೇ ಇಲ್ಲದಂತಾಗಲಿದೆ’ ಎಂದು ಅಭಿಪ್ರಾಯಪಟ್ಟಿರುವ ವರಿಷ್ಠರು, ‘ವಿಜಯೇಂದ್ರರಿಗೆ ಅವಕಾಶ ಕೊಟ್ಟಲ್ಲಿ ಎರಡೆರಡು ಅಧಿಕಾರ ಕೇಂದ್ರಗಳಿಗೆ ಆಸ್ಪದ ನೀಡಿದಂತಾಗಲಿದೆ’ ಎಂಬ ಆತಂಕವನ್ನೂ ವ್ಯಕ್ತಪಡಿಸಿದರು ಎಂದು ಪಕ್ಷದ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

ಈ ಕುರಿತು ನಿರ್ಧಾರ ಕೈಗೊಳ್ಳಲೆಂದೇ ಮುಖಂಡರಾದ ಜೆ.ಪಿ. ನಡ್ಡಾ, ಹಾಗೂ ಬಿ.ಎಲ್‌. ಸಂತೋಷ್‌ ಅವರು ಮಂಗಳವಾರ ಮಧ್ಯಾಹ್ನ ಸಂಸತ್‌ ಭವನದಲ್ಲಿ ಅಮಿತ್‌ ಶಾ ಅವರೊಂದಿಗೆ ಒಂದೂವರೆ ಗಂಟೆ ಕಾಲ ಚರ್ಚೆ ನಡೆಸಿದರು. ನಂತರ ಈ ಮೂವರು ಬೊಮ್ಮಾಯಿ ಅವರೊಂದಿಗೆ ಮಾತುಕತೆ ನಡೆಸಿದರೂ ಅಂತಿಮ ನಿರ್ಧಾರ ಕೈಗೊಳ್ಳಲಿಲ್ಲ.

ವರಿಷ್ಠರ ನಿರ್ಧಾರ ಪ್ರಕಟವಾಗಬಹುದು ಎಂದೇ ಬೆಳಿಗ್ಗೆಯಿಂದ ಕಾದುಕುಳಿತ ಮುಖ್ಯಮಂತ್ರಿ, ಮೂರು ಬಾರಿ ಬೆಂಗಳೂರು ಪ್ರಯಾಣದ ವಿಮಾನ ಟಿಕೆಟ್‌ ರದ್ದುಪಡಿಸಿದರಲ್ಲದೆ, ರಾತ್ರಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ನಿವಾಸದಲ್ಲಿ ಭೋಜನಕೂಟದಲ್ಲಿ ಪಾಲ್ಗೊಂಡ ಬಳಿಕ, ಮತ್ತೆ ನಡ್ಡಾ ನಿವಾಸಕ್ಕೆ ತೆರಳಿ ಈ ಸಂಬಂಧ ಚರ್ಚಿಸಿದರು.

ಉಪ ಮಖ್ಯಮಂತ್ರಿ ಬೇಡ: ಪಕ್ಷದ ವರಿಷ್ಠರು, ‘ಸಂಪುಟದಲ್ಲಿ ಉಪ ಮಖ್ಯಮಂತ್ರಿಗಳು ಬೇಡ’ ಎಂಬ ನಿಲುವನ್ನು ತಾಳಿರುವುದು ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ.

‘ಪರಿಶಿಷ್ಟ ಜಾತಿ ಮತ್ತು ಪಂಗಡದ ಒಬ್ಬೊಬ್ಬರಿಗೆ ಈ ಸ್ಥಾನಮಾನ ನೀಡದಿದ್ದರೆ ಆಡಳಿತ ನಿರ್ವಹಣೆ ಕಷ್ಟಕರ. ಅಲ್ಲದೆ, ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ಬಿ.ಶ್ರೀರಾಮುಲು ಪಟ್ಟು ಹಿಡಿದಿರುವುದರಿಂದ ಅವರ ಬೇಡಿಕೆ ಈಡೇರಿಸಲೇಬೇಕು. ಹಾಗಾಗಿ ಹಿರಿಯರಾದ ಗೋವಿಂದ ಕಾರಜೋಳ ಹಾಗೂ ಶ್ರೀರಾಮುಲು ಅವರನ್ನು ಈ ಸ್ಥಾನಕ್ಕೆ ಪರಿಗಣಿಸಿ ಎಂಬ ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ವರಿಷ್ಠರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದೂ ಕುತೂಹಲಕ್ಕೆ ಕಾರಣವಾಗಿದೆ.

ಹಿರಿಯರು ಬೇಡ: ‘ಯಡಿಯೂರಪ್ಪ ಸಂಪುಟದಲ್ಲಿದ್ದ ಎಲ್ಲ ಹಿರಿಯರನ್ನೂ ಸಾರಾಸಗಟಾಗಿ ಕೈಬಿಡುವ ಮೂಲಕ ಹೊಸಬರ ಆಡಳಿತಕ್ಕೆ ಚಾಲನೆ ನೀಡಬೇಕು’ ಎಂಬ ವರಿಷ್ಠರ ಮತ್ತೊಂದು ತೀರ್ಮಾನ ಮುಖ್ಯಮಂತ್ರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

‘ಕೆಲವು ಅನುಭವಿಗಳಿಗಾದರೂ ಅವಕಾಶ ನೀಡದದ್ದರೆ ಬಂಡಾಯಕ್ಕೆ ಅನುವು ಮಾಡಿಕೊಟ್ಟಂತಾಗಲಿದೆ’ ಎಂದೂ ವರಿಷ್ಠರೆದುರು ಅಳಲು ತೋಡಿಕೊಂಡಿರುವ ಬೊಮ್ಮಾಯಿ, ಈ ಸಂಬಂಧ ವರಿಷ್ಠರು ಕೈಗೊಳ್ಳಬಹುದಾದ ತೀರ್ಮಾನವು ‘ಸಂಕಷ್ಟ’ಕ್ಕೆ ದೂಡದಿರಲಿ ಎಂಬ ಆಶಯ ಹೊಂದಿದ್ದಾರೆ.

ಯಡಿಯೂರಪ್ಪ ರಾಜೀನಾಮೆಗೆ ಮುನ್ನ ಭಾರೀ ‘ಸುದ್ದಿ’ಯಲ್ಲಿದ್ದ ಅರವಿಂದ ಬೆಲ್ಲದ್, ಸಿ.ಪಿ.ಯೋಗೇಶ್ವರ, ಬಸನಗೌಡ ಪಾಟೀಲ ಯತ್ನಾಳ ಹಾಗೂ ಎಂ.ಪಿ. ರೇಣುಕಾಚಾರ್ಯ ಅವರ ಪೈಕಿ ಒಬ್ಬರನ್ನಾದರೂ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬುದೂ ಬೊಮ್ಮಯಿ ಬೇಡಿಕೆಗಳಲ್ಲಿ ಒಂದಾಗಿದೆ ಎಂದು ತಿಳಿದುಬಂದಿದೆ.

ಬುಧವಾರವೇ ನೂತನ ಸಚಿವರ ಪ್ರಮಾಣ

ನವದೆಹಲಿ: ಭಾನುವಾರ ರಾತ್ರಿಯಿಂದಲೇ ನಡೆದಿರುವ ಸಂಪುಟ ರಚನೆಯ ಕಸರತ್ತು ಮಂಗಳವಾರ ತಡರಾತ್ರಿ ವೇಳೆಗೆ ಪೂರ್ಣಗೊಂಡಿದೆ. ಬುಧವಾರವೇ ಹೊಸ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವುದು ಖಾತರಿ ಎನ್ನಲಾಗಿದೆ.

ವರಿಷ್ಠರು ಅಂತಿಮಗೊಳಿಸಿದ ಪಟ್ಟಿಯೊಂದಿಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಬುಧವಾರ ಬೆಳಿಗ್ಗೆ ಬೆಂಗಳೂರಿಗೆ ತೆರಳಲಿದ್ದಾರೆ. ಮಧ್ಯಾಹ್ನದ ನಂತರ 25 ಜನ ಸಚಿವರು ಸಂಪುಟಕ್ಕೆ ಸೇರ್ಪಡೆ ಆಗಲಿದ್ದಾರೆ ಎಂದು ತಿಳಿದುಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು