ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸ್ಥಾನ: ಯಾರಿಗೂ ಭರವಸೆ ಕೊಡದ ಬಿಎಸ್‌ವೈ

Last Updated 2 ಆಗಸ್ಟ್ 2021, 22:54 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರದಲ್ಲಿ ಸಚಿವ ಸ್ಥಾನ ಗಿಟ್ಟಿಸಲು ಕೆಲವು ಶಾಸಕರು ದೆಹಲಿಗೆ ತೆರಳಿದ್ದರೆ, ಇನ್ನು ಕೆಲವರು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸುತ್ತ ಗಿರಕಿ ಹೊಡೆಯಲಾರಂಭಿಸಿದ್ದಾರೆ.

ಮಂತ್ರಿಮಂಡಲ ರಚನೆಗೆ ಸಂಬಂಧಿಸಿ ಬೊಮ್ಮಾಯಿ ದೆಹಲಿಗೆ ಹೋಗಿರುವ ಬೆನ್ನಲ್ಲೇ ಸೋಮವಾರ ಬೆಳಿಗ್ಗೆಯಿಂದಲೇ ಹಲವು ಶಾಸಕರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನಕ್ಕಾಗಿ ಒತ್ತಡ ಹೇರಲಾರಂಭಿಸಿದರು.

ಭೇಟಿಯಾಗಿದ್ದ ಯಾವುದೇ ಶಾಸಕರಿಗೂ ಯಡಿಯೂರಪ್ಪ ಸಚಿವ ಸ್ಥಾನದ ಭರವಸೆ ನೀಡಿಲ್ಲ. ‘ಸಂಪುಟ ರಚನೆ ವಿಚಾರ ವರಿಷ್ಠರಿಗೆ ಬಿಟ್ಟಿದ್ದು, ಅವರೇ ನಿರ್ಣಯ ಮಾಡುತ್ತಾರೆ. ನಾವು ಹೇಳುವಂತಹದ್ದೂ ಏನೂ ಇಲ್ಲ’ ಎಂದು ಹೇಳಿದರು.

‘ಯಡಿಯೂರಪ್ಪ ಅವರು ಸಿ.ಎಂ ಆಗಿದ್ದಾಗಲೇ ಅವರ ಎಲ್ಲ ಮಾತುಗಳನ್ನು ಹೈಕಮಾಂಡ್‌ ಕೇಳುತ್ತಿರಲಿಲ್ಲ. ಈಗ ಕೇಳುತ್ತಾರೆಯೇ? ಹೀಗಾಗಿ ಯಾರಿಗೂ ಭರವಸೆ ನೀಡುವ ಗೋಜಿಗೆ ಹೋಗಿಲ್ಲ’ ಎಂದು ಮೂಲಗಳು ತಿಳಿಸಿವೆ.

‘ಈ ಮಧ್ಯೆ, ಬೇರೆ ರೀತಿಯ ಸಂದೇಶಗಳ ರವಾನೆಗೆ ಕಾರಣವಾದೀತು ಎಂದು ಯಾರನ್ನೂ ಭೇಟಿ ಮಾಡದಿರಲು ವಿಜಯೇಂದ್ರ ತೀರ್ಮಾನಿಸಿದ್ದಾರೆ‘ ಎಂದೂ ಮೂಲಗಳು ಹೇಳಿವೆ.

ಎಸ್‌.ಆರ್‌.ವಿಶ್ವನಾಥ್, ಪ್ರೀತಂಗೌಡ, ಮಸಾಲೆ ಜಯರಾಂ, ಎಂ.ಪಿ.ಕುಮಾರಸ್ವಾಮಿ, ಆರಗ ಜ್ಞಾನೇಂದ್ರ, ದೊಡ್ಡನಗೌಡ ಪಾಟೀಲ, ವಿಧಾನಪರಿಷತ್‌ ಸದಸ್ಯ ಎಂಟಿಬಿ ನಾಗರಾಜ್ ಅವರು ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದರು. ಎಂ.ಚಂದ್ರಪ್ಪ, ಜಿ.ಎಚ್‌.ತಿಪ್ಪಾರೆಡ್ಡಿ, ಪೂರ್ಣಿಮಾ, ಗೂಳಿಹಟ್ಟಿ ಶೇಖರ್‌ ಸಚಿವ ಸ್ಥಾನಕ್ಕಾಗಿ ತಮ್ಮದೇ ಆದ ರೀತಿಯಲ್ಲಿ ಒತ್ತಡ ಹೇರುತ್ತಿದ್ದಾರೆ.

ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್ ಪರವಾಗಿ ಕೆಲವು ಸ್ವಾಮಿಜಿಗಳು ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದರು. ಶಾಸಕ ಆರಗ ಜ್ಞಾನೇಂದ್ರ, ‘ಈ ಬಾರಿ ಸಂಪುಟದಲ್ಲಿ ಅವಕಾಶ ಸಿಗಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT