ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್‌ ಕಾರ್ಡ್‌ನಿಂದ ತಾಯಿ ಮಡಿಲು ಸೇರಿದ ಮಗ

ಯಲಹಂಕದ ರೈತರ ಸಂತೆಯಲ್ಲಿ ಆರು ವರ್ಷಗಳ ಹಿಂದೆ ಕಾಣೆಯಾಗಿದ್ದ ಹುಡುಗ
Last Updated 12 ಮಾರ್ಚ್ 2022, 17:57 IST
ಅಕ್ಷರ ಗಾತ್ರ

ಬೆಂಗಳೂರು: ಮಾತು ಬಾರದ ಮಗ ಸಂತೆಯಲ್ಲಿ ಕಳೆದು ಹೋದಾಗ ಆ ತಾಯಿ ದಿಕ್ಕೇ ತೋಚದಾಗಿದ್ದಳು. ಕಂಡ ಕಂಡಲ್ಲೆಲ್ಲಾ ಹುಡುಕಾಡಿ ಕೊನೆಗೆ ಠಾಣೆಗೆ ದೂರು ನೀಡಿದ್ದಳು. ವರ್ಷಗಳು ಉರುಳಿದರೂ ಮಗ ಕಾಣದೆ ಕಂಗಾಲಾಗಿದ್ದ ಆಕೆಯ ಮೊಗದಲ್ಲಿ ಈಗ ಸಂತಸ ಮೇಳೈಸಿದೆ. ಆಧಾರ್‌ ಕಾರ್ಡ್‌ ಮಾಹಿತಿಯಿಂದಾಗಿ ನಾಗಪುರದಲ್ಲಿದ್ದ ಮಗ ಅಮ್ಮನ ಮಡಿಲು ಸೇರಿದ್ದಾನೆ.

ಸಿಂಗನಾಯಕನಹಳ್ಳಿ ನಿವಾಸಿ ಪಾರ್ವತಮ್ಮ ತರಕಾರಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದರು.2016 ರ ಮಾರ್ಚ್‌ನಲ್ಲಿ ಎಂದಿನಂತೆ ವ್ಯಾಪಾರಕ್ಕೆ ಹೋಗಿದ್ದ ಅವರು 12 ವರ್ಷದ ಮಗ ಭರತ್‌ಕುಮಾರನನ್ನೂ ಜೊತೆಗೆ ಕರೆದುಕೊಂಡು ಹೋಗಿದ್ದರು. ಆಗ ಕಾಣೆಯಾಗಿದ್ದ ಭರತ್‌, ರೈಲು ಏರಿ ನಾಗಪುರ ತಲುಪಿದ್ದ. ನಿಲ್ದಾಣದಲ್ಲಿ ದಿಕ್ಕು ಕಾಣದೆ ಕಂಗೆಟ್ಟು ಓಡಾಡುತ್ತಿದ್ದ ಆತನನ್ನು ರೈಲ್ವೆ ಭದ್ರತಾ ಪಡೆ ಅಧಿಕಾರಿಗಳು ರಕ್ಷಿಸಿ ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದರು.

6 ವರ್ಷಗಳಿಂದ ಪುನರ್ವಸತಿ ಕೇಂದ್ರದಲ್ಲೇ ಇದ್ದ ಭರತ್‌ಗೆ ಆಧಾರ್‌ ಕಾರ್ಡ್‌ ಮಾಡಿಸಲು ಅಧಿಕಾರಿಗಳುತೀರ್ಮಾನಿಸಿದ್ದರು. ಈ ವರ್ಷದ ಜನವರಿಯಲ್ಲಿ ಆಧಾರ್‌ ಸೇವಾ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದರು. ಆತನ ಹೆಸರಿನಲ್ಲಿ ಈಗಾಗಲೇ ಆಧಾರ್‌ ಕಾರ್ಡ್‌ ಇರುವುದು ಆಗ ಗೊತ್ತಾಗಿತ್ತು. ಪುನರ್ವಸತಿ ಕೇಂದ್ರದ ಅಧಿಕಾರಿ ಮಹೇಶ್‌, ಭರತ್‌ ಪೋಷಕರ ವಿಳಾಸ ಪತ್ತೆಗೆ ನೆರವಾಗುವಂತೆ ಸೇವಾ ಕೇಂದ್ರದ ಅಧಿಕಾರಿಗಳಿಗೆ ವಿನಂತಿಸಿದ್ದರು.

ಈಗಾಗಲೇ ಚಾಲ್ತಿಯಲ್ಲಿರುವ ಬಿ.ಭರತ್‌ಕುಮಾರ್‌ ಹೆಸರಿನ ವ್ಯಕ್ತಿಯ ಬೆರಳಚ್ಚು ಭರತ್‌ನ ಬೆರಳಚ್ಚಿಗೆ ಹೋಲಿಕೆಯಾಗುತ್ತಿತ್ತು. ಆಧಾರ್‌ ಕಾರ್ಡ್‌ ಪರಿಶೀಲಿಸಿದಾಗ ಪಾರ್ವತಮ್ಮನವರ ಮೊಬೈಲ್‌ ಸಂಖ್ಯೆ ಲಭಿಸಿತ್ತು.

‘ಮಗನಿಗೆ ಹುಟ್ಟಿನಿಂದಲೇ ಮಾತು ಬರುತ್ತಿರಲಿಲ್ಲ. ಆತನನ್ನು ಬಹಳ ಅಕ್ಕರೆಯಿಂದ ಸಾಕಿದ್ದೆ. ಶನಿವಾರ ಶಾಲೆಗೆ ರಜೆ ಇದ್ದಿದ್ದರಿಂದ ಸಂತೆಗೆ ಕರೆದುಕೊಂಡು ಹೋಗಿದ್ದೆ. ಚಾಕೊಲೇಟ್‌ ಬೇಕು ಅಂದಿದ್ದಕ್ಕೆ 20 ರೂಪಾಯಿ ಕೊಟ್ಟಿದ್ದೆ. ಅಂಗಡಿಗೆಂದು ಹೋದವನು ಸುಮಾರು ಹೊತ್ತಾದರೂ ಮರಳಿ ಬರಲಿಲ್ಲ. ಗಾಬರಿಯಿಂದ ಎಲ್ಲೆಡೆ ಹುಡುಕಾಡಿದರೂ ಸುಳಿವು ಸಿಗಲಿಲ್ಲ. ದಿಕ್ಕು ಕಾಣದೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದೆ’ ಎಂದು ಪಾರ್ವತಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ಕ್ಷಣವೂ ಆತನ ನೆನಪು ಕಾಡುತ್ತಿತ್ತು. ಆತ ಎಲ್ಲಿದ್ದಾನೊ, ಹೇಗಿದ್ದಾನೊ ಎಂಬ ಕೊರಗಿನಲ್ಲಿ ಕುಗ್ಗಿ ಹೋಗಿದ್ದೆ. ಸರಿಯಾಗಿ ಊಟ ಸೇರುತ್ತಿರಲಿಲ್ಲ. ನಿದ್ರೆಯೂ ಬರುತ್ತಿರಲಿಲ್ಲ. ಆತನಿಗಾಗಿ ಸುತ್ತಾಡದೆ ಇರುವ ದೇವಸ್ಥಾನಗಳಿಲ್ಲ. ಮಗ ನಾಗಪುರದಲ್ಲಿ ಇರುವ ಮಾಹಿತಿ ಸಿಕ್ಕಾಗ ಸಂತಸಕ್ಕೆ ಪಾರವೇ ಇರಲಿಲ್ಲ. ಇದೇ 7 ರಂದು ವಿಡಿಯೊ ಕರೆ ಮೂಲಕ ಆತನ ಜೊತೆ ಮಾತನಾಡಿದ್ದೆ. ನನ್ನ ಮುಖ ಕಂಡೊಡನೆ ಆತ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ್ದ’ ಎಂದು ಭಾವುಕರಾದರು.

‘ನಾಗಪುರಕ್ಕೆ ಹೋಗಿ ಮಗನನ್ನು ಕರೆದುಕೊಂಡು ಬರಲು ಬೇಕಿದ್ದ ಎಲ್ಲಾ ವ್ಯವಸ್ಥೆಯನ್ನೂ ಶಾಸಕ ಎಸ್‌.ಆರ್.ವಿಶ್ವನಾಥ್‌ ಮಾಡಿದ್ದರು. ಪೊಲೀಸರು ಹಾಗೂ ಪುನರ್ವಸತಿ ಕೇಂದ್ರದ ಅಧಿಕಾರಿಗಳ ಸಹಕಾರ ಮರೆಯುವಂತಿಲ್ಲ. ಪುನರ್ವಸತಿ ಕೇಂದ್ರದಲ್ಲಿ ನನ್ನನ್ನು ಕಂಡೊಡನೆಯೇ ಮಗ ಓಡಿಬಂದು ತಬ್ಬಿಕೊಂಡ. ಆಳೆತ್ತರ ಬೆಳೆದಿರುವ ಆತನನ್ನು ಕಂಡು ನನ್ನ ಕಣ್ಣುಗಳಲ್ಲೂ ನೀರು ತುಂಬಿತು’ ಎಂದು ಗದ್ಗದಿತರಾದರು.

‘ಮಗನನ್ನು ಚೆನ್ನಾಗಿ ಓದಿಸುತ್ತೇನೆ. ಇನ್ನು ಮುಂದೆ ಜತನದಿಂದ ಕಾಪಾಡುತ್ತೇನೆ. ಆಸ್ಪತ್ರೆಗೆ ತೋರಿಸಿದರೆ ಮಾತು ಬರಬಹುದೇನೊ. ಆ ಪ್ರಯತ್ನವನ್ನೂ ಮಾಡುತ್ತೇನೆ. ಶಾಸಕ ವಿಶ್ವನಾಥ್‌ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದ್ದಾರೆ’ ಎಂದರು.

ಯಲಹಂಕ ಪೊಲೀಸರಿಗೆ ಮಾಹಿತಿ ರವಾನೆ

ನಾಗಪುರ ಪುನರ್ವಸತಿ ಕೇಂದ್ರದ ಅಧಿಕಾರಿಗಳು ಯಲಹಂಕ ಠಾಣೆಗೆ ಕರೆ ಮಾಡಿ ಭರತ್‌ ಕುರಿತು ಮಾಹಿತಿ ತಿಳಿಸಿದ್ದರು. ಅದರ ಬೆನ್ನಲ್ಲೇ ಭರತ್‌ ತಾಯಿಯನ್ನು ಪೊಲೀಸರು ಪತ್ತೆ ಹಚ್ಚಿದ್ದರು.

ಈ ವಿಷಯ ಸ್ಥಳೀಯ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರ ಗಮನಕ್ಕೂ ಬಂದಿತ್ತು. ಅವರೇ ವಾಹನದ ವ್ಯವಸ್ಥೆ ಮಾಡಿ ಪಾರ್ವತಮ್ಮನನ್ನು ನಾಗಪುರಕ್ಕೆ ಕಳುಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT