ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳ್ಳಕೆರೆ: ಬುಡಕಟ್ಟು ಸಂಸ್ಕೃತಿ, ದೈವ ಬೊಮ್ಮದೇವರ ವಿಶಿಷ್ಟ ಆಚರಣೆ

ಮ್ಯಾಸಬೇಡ ಸಮುದಾಯದಲ್ಲಿ ಸಂಭ್ರಮ
Last Updated 10 ಆಗಸ್ಟ್ 2022, 4:07 IST
ಅಕ್ಷರ ಗಾತ್ರ

ಚಳ್ಳಕೆರೆ: ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರೆಕಾಟ್ಲಹಟ್ಟಿ ಗ್ರಾಮದಲ್ಲಿ ವಿವಾದದಿಂದ 14 ವರ್ಷ ನಿಂತಿದ್ದ ಬುಡಕಟ್ಟು ಸಂಸ್ಕೃತಿ ಮೂಲದ ಮ್ಯಾಸಬೇಡ ಸಮುದಾಯದ ಆರಾಧ್ಯ ದೈವ ಬೊಮ್ಮದೇವರ ಗಂಗಾ ಪೂಜಾ ಮಹೋತ್ಸವ ಸೋಮವಾರ ದೊರೆ ಸೂರನಾಯಕ ಅವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರುಗಿತು.

ಎತ್ತಿನ ಕಿಲಾರಿಗಳು ಕಾಲ್ನಡಿಗೆಯಲ್ಲಿ ಹೊತ್ತು ದೇವರ ಗೂಡಿನ ಹಸುಗಳ ಮೀಸಲು ಹಾಲನ್ನು ದೇವರಿಗೆ ಅರ್ಪಿಸಿದರು. ನಂತರ ಹಳ್ಳದ ಬಳಿ ಮೀಸಲು ಹಾಲು, ಗೋ ಗಂಜಲು, ಜೇನುತುಪ್ಪ, ಮತ್ತು ವರತೆ(ಚಿಲುಮೆ)ಯಲ್ಲಿ ಉಕ್ಕಿಬಂದ ಶುದ್ಧ ನೀರಿನಿಂದ ದೇವರ ಬೆಳ್ಳಿಯ ಆಭರಣವನ್ನು ಶುದ್ಧಗೊಳಿಸಿದರು.

ಭಾನುವಾರ ರಾತ್ರಿ ಮುತ್ತೇಗಾರ ದೇವರ ವಕ್ಕಲಿನವರು ಎತ್ತಿನಗೂಡಿನ ದನಗಳನ್ನು ಬೊಮ್ಮದೇವರ ಗುಡಿಗೆ ಹೊಡೆದು ತಂದರು. ರೊಟ್ಟಿ, ಬೆಲ್ಲ, ಬಾಳೆಹಣ್ಣು ದೇವರ ದನಗಳಿಗೆ ಪ್ರಸಾದವಾಗಿ ತಿನಿಸುವುದರ ಮೂಲಕ ಆ ದನಗಳಿಗೆ ಕೈ ಮುಗಿದರು.

ಸೋಮವಾರ ಮಧ್ಯಾಹ್ನ 1ಕ್ಕೆ ಉರುಮೆ, ಡಗಾಮು ಮುಂತಾದ ವಾದ್ಯಗಳೊಂದಿಗೆ ದೇವರ ಎತ್ತುಗಳನ್ನು ಹೊಡೆದುಕೊಂಡು ಬೊಮ್ಮದೇವರ ಪೆಟ್ಟಿಗೆ ದೇವರನ್ನು ಹೊಳೆಗೆ ಹೊತ್ತು ಸಾಗಿಸಿದರು. ಗಂಗಾ ಪೂಜೆಯಿಂದ ಮರಳಿ ಬಂದ ಭಕ್ತರು ನೂತನವಾಗಿ ನಿರ್ಮಿಸಿದ್ದ ದೇವಸ್ಥಾನಕ್ಕೆ ಪಂಚಕಳಸ ಪ್ರತಿಷ್ಠಾಪನೆ ಮಾಡುವ ಮೂಲಕ ದೇವರನ್ನು ಗುಡಿದುಂಬಿಸಿದರು. ನಂತರ ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮದ ಮೂಲಕ ಉತ್ಸವದ ಆಚರಣೆ ಅಂತ್ಯಗೊಂಡಿತು.

ವಿವಾದಕ್ಕೆ ಅಂತ್ಯ: ಬೊಮ್ಮದೇವರ ಆರಾಧನೆಯ ವಿಚಾರವಾಗಿ ಅಣ್ಣ-ತಮ್ಮಂದಿರ ನಡುವೆ ವ್ಯಾಜ್ಯ ಉಂಟಾಗಿತ್ತು. ಹೀಗಾಗಿ ಪೂಜೆ ಹೊರತುಪಡಿಸಿ ಉಳಿದ ಯಾವುದೇ ದೇವರ ಉತ್ಸವದ ಆಚರಣೆಗಳು ಜರುಗಿರಲಿಲ್ಲ. ದೇವರ ಉತ್ಸವದ ವಿಚಾರವಾಗಿ ಮ್ಯಾಸಬೇಡ ಸಮುದಾಯದ ಮುಖಂಡರ ಶಾಂತಿ ಸಭೆ ನಡೆಸಿದ ಮೊಳಕಾಲ್ಮುರು ಕ್ಷೇತ್ರದ ಮಾಜಿ ಶಾಸಕ ತಿಪ್ಪೇಸ್ವಾಮಿ, ಸಮುದಾಯದ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದ ಬುಡಕಟ್ಟಿನ ಆಚರಣೆ, ಉತ್ಸವ ನಡೆಸಿಕೊಂಡು ಹೋಗುವುದು ತುಂಬಾ ಕಷ್ಟವಾಗುತ್ತದೆ. ಹಾಗಾಗಿ ಹೊಂದಾಣಿಕೆ ಮಾಡಿಕೊಂಡು ಉತ್ಸವ ನಡೆಸುವಂತೆ ಅಣ್ಣ-ತಮ್ಮಂದಿರಿಗೆ ಸಲಹೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT