ಗುರುವಾರ , ಆಗಸ್ಟ್ 11, 2022
20 °C

PV Web Exclusive | ಸ್ಮಾರಕಗಳಿಗೆ ಸಂಕೋಲೆ!

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ‘ಬಯಲು ವಸ್ತು ಸಂಗ್ರಹಾಲಯ’ವೆಂದೇ ಖ್ಯಾತಿ ಗಳಿಸಿರುವ ವಿಶ್ವಪ್ರಸಿದ್ದ ಹಂಪಿಯ ಸ್ಮಾರಕಗಳು ಈಗ ಒಂದೊಂದಾಗಿ ಸಂಕೋಲೆಯಲ್ಲಿ ಬಂಧನವಾಗುತ್ತಿವೆ!

ಭದ್ರತೆಯ ದೃಷ್ಟಿಯಿಂದ ಕೆಲ ವರ್ಷಗಳ ಹಿಂದೆ ಕಡಲೆಕಾಳು ಗಣಪ, ಸಾಸಿವೆಕಾಳು ಗಣೇಶ, ಉಗ್ರ ನರಸಿಂಹ, ಬಡವಿಲಿಂಗ ಸ್ಮಾರಕಗಳ ಪ್ರವೇಶ ದ್ವಾರದಲ್ಲಿ ಲೋಹದ ಗೇಟ್‌ ಅಳವಡಿಸಲಾಗಿತ್ತು. ಈಗ ಹಂಪಿಯ ಹೆಗ್ಗುರುತಾಗಿರುವ ‘ಕಲ್ಲಿನ ರಥ’ದ ಸುತ್ತದ ಕಟ್ಟಿಗೆಯ ಕಂಬಗಳಿಂದ ಸರಪಳಿ ಮೂಲಕ ತಡೆಗೋಡೆ ನಿರ್ಮಿಸಲಾಗಿದೆ.

‘ಪ್ರವಾಸಿಗರು ಸ್ಮಾರಕಗಳ ಮೇಲೆ ಹತ್ತುವುದು, ಅವುಗಳನ್ನು ಮುಟ್ಟದಂತೆ ತಡೆಯುವುದಕ್ಕಾಗಿ ಬ್ಯಾರಿಕೇಡ್‌ ನಿರ್ಮಿಸಲಾಗಿದೆ. ನೂರಾರು ವರ್ಷಗಳ ಹಿಂದಿನ ಸ್ಮಾರಕಗಳ ಸಂರಕ್ಷಣೆಗಾಗಿ ಈ ರೀತಿ ಮಾಡಲಾಗಿದೆ. ಅದರಲ್ಲೂ ಕಲ್ಲಿನ ರಥ ಬಹಳ ಸೂಕ್ಷ್ಮ ಕೆತ್ತನೆ ಒಳಗೊಂಡಿದೆ. ಹಾಗಾಗಿ ಅದರ ಸುತ್ತ ತಡೆಗೋಡೆ ನಿರ್ಮಿಸಲಾಗಿದೆ’ ಎನ್ನುವುದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸೂಪರಿಟೆಂಡೆಂಡ್‌ ಪಿ. ಕಾಳಿಮುತ್ತು ಅವರ ಸಮಜಾಯಿಷಿ.

ಆದರೆ, ಇತಿಹಾಸಕಾರರು, ಹವ್ಯಾಸಿ ಛಾಯಾಗ್ರಾಹಕರು ಇಲಾಖೆಯ ಕ್ರಮಕ್ಕೆ ವಿರೋಧ ಸೂಚಿಸಿದ್ದಾರೆ. ‘ತಾನೇ ರೂಪಿಸಿದ ಯಾವ ನಿಯಮವೂ ಪುರಾತತ್ವ ಇಲಾಖೆ ಪಾಲಿಸುವುದಿಲ್ಲ. ಈಗ ಪ್ರವಾಸಿಗರ ಮೇಲೆ ಆರೋಪ ಹೊರಿಸಿ ಸ್ಮಾರಕಗಳಿಗೆ ಸಂಕೋಲೆ ತೊಡಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದ್ದಾರೆ.


 ಹಂಪಿಯ ಕಲ್ಲಿನ ರಥ ಸ್ಮಾರಕದ ಬಳಿ ಸಚಿವ ಎಸ್‌.ಟಿ. ಸೋಮಶೇಖರ್

‘ಜಗತ್ತಿನ ಯಾವುದೇ ಮೂಲೆಯಲ್ಲಾದರೂ ಹೋಗಿ ಕಲ್ಲಿನ ರಥದ ಚಿತ್ರ ತೋರಿಸಿದರೆ ತಕ್ಷಣವೇ ಹಂಪಿ ಎಂದು ಜನ ಹೇಳುತ್ತಾರೆ. ಅದು ಹಂಪಿಯ ಹೆಗ್ಗುರುತು (ಐಕಾನ್‌) ಎನ್ನುವುದಕ್ಕೆ ದೊಡ್ಡ ಸಾಕ್ಷಿ. ಹೀಗಿರುವಾಗ ಅದರ ಸುತ್ತ ಬ್ಯಾರಿಕೇಡ್‌ ಹಾಕಿ ಅದರ ಅಂದಕ್ಕೆ ಚ್ಯುತಿ ತಂದಿರುವುದು ಎಷ್ಟು ಸರಿ’ ಎಂದು ಹವ್ಯಾಸಿ ಛಾಯಾಗ್ರಾಹಕ ಮಾರುತಿ ಪೂಜಾರ್‌ ಪ್ರಶ್ನಿಸಿದ್ದಾರೆ.

‘ಈ ಹಿಂದೆ ಕೆಲ ದುಷ್ಕರ್ಮಿಗಳು, ಕಿಡಿಗೇಡಿಗಳು ಹಂಪಿಯ ಕೆಲವೆಡೆ ಸ್ಮಾರಕಗಳ ಕಂಬಗಳನ್ನು ಉರುಳಿಸಿ, ಧಕ್ಕೆ ಉಂಟು ಮಾಡಿ ವಿಕೃತಿ ತೋರಿರುವುದು ನಿಜ. ಜನ ಭೇಟಿ ನೀಡದ, ಶಿಥಿಲಗೊಂಡ ಅನೇಕ ಸ್ಮಾರಕಗಳು ಹಂಪಿಯಲ್ಲಿವೆ. ಅಂಥ ಕಡೆಗಳಲ್ಲಿ ಕೆಲವರು ದುಷ್ಕೃತ್ಯ ಎಸಗಿದ್ದಾರೆ. ಆದರೆ, ಸದಾ ಪ್ರವಾಸಿಗರಿಂದ ತುಂಬಿ ತುಳುಕುವ ಕಲ್ಲಿನ ರಥದ ಸುತ್ತ ಬ್ಯಾರಿಕೇಡ್‌ ಅಳವಡಿಸುವ ಅವಶ್ಯಕತೆ ಇರಲಿಲ್ಲ. ಅಂದಹಾಗೆ, ಅಲ್ಲಿ ಏಳೆಂಟು ಜನ ಭದ್ರತಾ ಸಿಬ್ಬಂದಿ ಯಾವಾಗಲೂ ಇರುತ್ತಾರೆ. ಹೀಗಿರುವಾಗ ಸ್ಮಾರಕದ ಮೇಲೆ ಯಾರು ಕೂಡ ಹತ್ತಲು ಸಾಹಸ ಮಾಡುತ್ತಾರೆ’ ಎಂದು ಪ್ರಶ್ನೆ ಮಾಡಿದ್ದಾರೆ.

‘ದೇಶ–ವಿದೇಶಗಳಿಂದ ಹಂಪಿಗೆ ನಿತ್ಯ ನೂರಾರು ಪ್ರವಾಸಿಗರು ಬಂದು ಹೋಗುತ್ತಾರೆ. ಆದರೆ, ಇದುವರೆಗೆ ಯಾವೊಬ್ಬ ಪ್ರವಾಸಿಯೂ ಸ್ಮಾರಕಗಳಿಗೆ ಧಕ್ಕೆ ಉಂಟು ಮಾಡಿರುವ ಉದಾಹರಣೆಗಳಿಲ್ಲ. ಆದರೆ, ಅತಿ ಗಣ್ಯ ವ್ಯಕ್ತಿಗಳೇ ಅವರ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಹಂಪಿ ಸ್ಮಾರಕಗಳಲ್ಲಿ ಬೇಕಾಬಿಟ್ಟಿ ಓಡಾಡಿ ಚಿತ್ರೀಕರಣ, ಛಾಯಾಚಿತ್ರ ತೆಗೆಸಿಕೊಂಡಿದ್ದಾರೆ. ಪುರಾತತ್ವ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲೇ ಇದೆಲ್ಲ ನಡೆಯುತ್ತದೆ. ಹೀಗಿರುವಾಗ ಸಾಮಾನ್ಯ ಜನರ ಮೇಲೆ ಗೂಬೆ ಕೂರಿಸಿ ಸ್ಮಾರಕಗಳ ಅಂದ ಕೆಡಿಸುವುದು ಸರಿಯಲ್ಲ. ಇನ್ನಷ್ಟು ಭದ್ರತೆ ಹೆಚ್ಚಿಸಿ, ಸಂರಕ್ಷಿಸಬೇಕು’ ಎಂದು ಸಲಹೆ ನೀಡಿದ್ದಾರೆ.

‘ಸ್ಮಾರಕಗಳ ಜೀರ್ಣೊದ್ಧಾರದ ಹೆಸರಿನಲ್ಲಿ ಪುರಾತತ್ವ ಇಲಾಖೆಯು ಹಂಪಿಯಲ್ಲಿ ಮನಬಂದಂತೆ ಕೆಲಸ ಮಾಡುತ್ತಿದೆ. ಬೇಕಾಬಿಟ್ಟಿ ಕ್ರೇನ್‌, ಜೆಸಿಬಿ ಬಳಸುತ್ತಿದೆ. ಸ್ಮಾರಕಗಳ ಬಳಿಯೇ ಕೊಳವೆಬಾವಿ ಕೊರೈಸಿದೆ. ರಾಜಕೀಯ ಮುಖಂಡರು, ಅವರ ಸಂಬಂಧಿಕರು ಬಂದಾಗ ಸ್ಮಾರಕದೊಳಗೆ ಬೇಕಾಬಿಟ್ಟಿ ಓಡಾಡಲು ಅವಕಾಶ ಕಲ್ಪಿಸುತ್ತದೆ. ತಮಗೆ ಬೇಕಾದವರಿಗೆ ಎಲ್ಲೆಂದರಲ್ಲಿ ಫೋಟೊ ಶೂಟ್‌ ಮಾಡಲು ಬಿಡುತ್ತದೆ. ಎಲ್ಲರಿಗೂ ಒಂದೇ ನಿಯಮ ಅನುಸರಿಸಬೇಕು. ಭದ್ರತೆ ಹೆಚ್ಚಿಸಿ, ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಹದ್ದಿನ ಕಣ್ಣಿಟ್ಟರೆ ಯಾವ ಸ್ಮಾರಕಕ್ಕೂ ಹಾನಿ ಉಂಟಾಗುವುದಿಲ್ಲ. ಆದರೆ, ಭದ್ರತೆಯ ಹೆಸರಿನಲ್ಲಿ ಸ್ಮಾರಕಗಳ ಅಂದಗೆಡಿಸುವುದು ಸೂಕ್ತವಾದುದ್ದಲ್ಲ’ ಎಂದು ಇನ್ನೊಬ್ಬ ಹವ್ಯಾಸಿ ಛಾಯಾಗ್ರಾಹಕ ರಾಚಯ್ಯ ಎಸ್‌. ಸ್ಥಾವರಿಮಠ ಅಭಿಪ್ರಾಯ ಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು