ಮಂಗಳವಾರ, ಅಕ್ಟೋಬರ್ 27, 2020
25 °C

ರಾಮನಗರ ಕೆಂಪೇಗೌಡರ ನಾಡು; ರಂಜನೀಯ ತಾಣಗಳ ಬೀಡು

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

ರಾಮನಗರ: ‘ಕ್ಲೋಸ್‌ಪೇಟ್‌’ಎಂಬ ಪೂರ್ವನಾಮ ಹೊಂದಿರುವ ರಾಮನಗರ ರೇಷ್ಮೆನಾಡು ಎಂದೇ ಹೆಸರುವಾಸಿ. ರೇಷ್ಮೆ ಮಾರುಕಟ್ಟೆ ಜತೆಗೆ ಇಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಹತ್ತಾರು ತಾಣಗಳಿವೆ. ಬೆಂಗಳೂರು–ಮೈಸೂರು ಹೆದ್ದಾರಿ ಅಕ್ಕಪಕ್ಕ ವಿಸ್ತರಿಸಿಕೊಂಡಿರುವ ಈ ನಗರ ಪ್ರವಾಸೋದ್ಯಮ ಕೇಂದ್ರವಾಗುವ ಅವಕಾಶವನ್ನೂ ಹೊಂದಿದೆ. ಇಲ್ಲಿನ ಒಂದಿಷ್ಟು ಪ್ರವಾಸಿ ತಾಣಗಳ ಪಟ್ಟಿ ಇಲ್ಲಿದೆ.

ರಾಮದೇವರ ಬೆಟ್ಟ:

ಶ್ರೀರಾಮ ಸೀತೆಯ ಸಮೇತ ನೆಲೆಸಿದ್ದ ಎನ್ನಲಾದ ರಾಮದೇವರ ಬೆಟ್ಟ ಜಿಲ್ಲೆಯ ಐತಿಹಾಸಿಕ ಕುರುಹುಗಳಲ್ಲಿ ಒಂದು. ಸದ್ಯ ಇದು ರಣಹದ್ದು ಸಂರಕ್ಷಣಾ ಧಾಮವಾಗಿ ಗುರುತಿಸಿಕೊಂಡಿದೆ. ಹಿಂದಿ ಭಾಷೆಯ ಪ್ರಸಿದ್ಧ ‘ಶೋಲೆ’ ಸಿನಿಮಾ ಚಿತ್ರೀಕರಣಗೊಂಡಿದ್ದು ಇಲ್ಲಿಯೇ. ಹೀಗಾಗಿ ಇದು ಶೋಲೆ ಬೆಟ್ಟ ಎಂದೇ ಹೆಸರುವಾಸಿ. ಅಂತೆಯೇ ಇಂಗ್ಲಿಷಿನ ‘ಪ್ಯಾಸೇಜ್‌ ಟು ಇಂಡಿಯಾ’ ಸಹಿತ ಹಲವು ಸಿನಿಮಾಗಳೂ ಇಲ್ಲಿ ಚಿತ್ರೀಕರಣಗೊಂಡಿವೆ.

850 ಎಕರೆ ವಿಸ್ತಾರದಲ್ಲಿ ಹರಡಿಕೊಂಡಿರುವ ಬೆಟ್ಟದಲ್ಲಿ ರಣಹದ್ದುಗಳು ಅಪರೂಪಕ್ಕೆ ನೋಡಲು ಸಿಗುತ್ತವೆ. ಉಳಿದಂತೆ ಚಿರತೆ, ಕರಡಿ ಮೊದಲಾದ ಕಾಡುಪ್ರಾಣಿಗಳು ವಾಸವಿದ್ದರೂ ಪ್ರವಾಸಿಗರ ಕಣ್ಣಿಗೆ ಬೀಳುವುದಿಲ್ಲ. ಬೆಟ್ಟ ಏರಲು ಸುಮಾರು 300ಮೆಟ್ಟಿಲುಗಳ ವ್ಯವಸ್ಥೆ ಇದೆ. ಮಧ್ಯಭಾಗದಲ್ಲಿ ಪಟ್ಟಾಭಿರಾಮ ಸಹಿತ ವಿವಿಧ ದೇಗುಲಗಳು, ಕೊಳವೂ ಇದೆ. ಅದರ ಮೇಲ್ಭಾಗದಲ್ಲಿ ಬಂಡೆಗಲ್ಲಿನಲ್ಲಿ ಕೊರೆಯಲಾದ ಮೆಟ್ಟಿಲುಗಳನ್ನು ಹಿಡಿದು ತುತ್ತ ತುದಿ ಏರಬಹುದು. ಅಲ್ಲಿಂದ ಸಪ್ತರ್ಷಿಗಳ ಬಂಡೆಯೂ ಕಾಣುತ್ತದೆ.

ಪ್ರತಿವರ್ಷ ಶ್ರಾವಣದಲ್ಲಿ ಇಲ್ಲಿನ ದೇಗುಲದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ವರ್ಷವಿಡೀ ಇಲ್ಲಿ ಪ್ರವಾಸಿಗರು ಭೇಟಿ ನೀಡಬಹುದು. ಅರಣ್ಯ ಇಲಾಖೆ ಪ್ರವೇಶ ಶುಲ್ಕ ನಿಗದಿಪಡಿಸಿದ್ದು, ಬೆಳಿಗ್ಗೆ 8.30ರಿಂದ ಸಂಜೆ 5.30ರವರೆಗೆ ಮಾತ್ರ ಪ್ರವೇಶ. ಇಲ್ಲಿ ಪ್ಲಾಸ್ಟಿಕ್‌ ನಿಷೇಧಿಸಲಾಗಿದೆ. ಊಟ–ತಿಂಡಿ ಸಿಗುವುದಿಲ್ಲ. ಪ್ರವಾಸಿಗರು ಹೊರಗಿನಿಂದಲೇ ಎಲ್ಲವನ್ನೂ ಕೊಂಡೊಯ್ಯಬೇಕು.

ತಲುಪುವುದು ಹೇಗೆ: ಬೆಟ್ಟವು ರಾಮನಗರದಿಂದ 4 ಕಿ.ಮೀ. ಹಾಗೂ ಬೆಂಗಳೂರಿನಿಂದ 55 ಕಿ.ಮೀ. ದೂರದಲ್ಲಿ ಇದೆ. ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಪ್ರಯಾಣಿಸುವವರಿಗೆ ಗೌಸಿಯಾ ಕಾಲೇಜು ಬಳಿ ರಸ್ತೆ ಬದಿಯಲ್ಲೇ ಆಂಜನೇಯನ ದೊಡ್ಡ ಮೂರ್ತಿಯುಳ್ಳ ಕಮಾನು ಕಾಣಸಿಗುತ್ತದೆ. ಅಲ್ಲಿಂದ ಎರಡು ಕಿಲೋಮೀಟರ್‌ ಸಾಗಿದರೆ ಬೆಟ್ಟಕ್ಕೆ ತಲುಪಬಹುದು. ಕಾರು ಸೇರಿದಂತೆ ದೊಡ್ಡ ವಾಹನಗಳು ತಲುಪಲು ದಾರಿ ಇದೆ.

ಜಾನಪದ ಲೋಕ:

ಸದ್ಯ ಬೆಳ್ಳಿಹಬ್ಬದ ಸಂಭ್ರಮದಲ್ಲಿ ಇರುವ ಜಾನಪದ ಲೋಕವು ಎಚ್‌.ಎಲ್‌. ನಾಗೇಗೌಡರು ಸ್ಥಾಪಿಸಿದ ಕಲಾ ಕೇಂದ್ರವಾಗಿದೆ. ಕಳೆದ ಎರಡೂವರೆ ದಶಕಗಳಲ್ಲಿ ಕೇಂದ್ರ ನಾಡಿನ ಜಾನಪದ ಸಂಸ್ಕೃತಿ ಬಗ್ಗೆ ಮಾಹಿತಿ ಸಂಗ್ರಹಿಸುವ ಜೊತೆಗೆ ಕಲೆ, ಕಲಾವಿದರನ್ನ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ.

ಅಪರೂಪದ ಜಾನಪದ ಪರಿಕರಗಳ ಸಂಗ್ರಹ ಇಲ್ಲಿದೆ. ದಸರೆಯ ಸಂದರ್ಭದಲ್ಲಿ ಗೊಂಬೆಗಳ ಪ್ರದರ್ಶನ ನಡೆದಿರುತ್ತದೆ.

ಪ್ರತಿ ತಿಂಗಳ ಶನಿವಾರ ‘ಲೋಕಸಿರಿ’ ಕಾರ್ಯಕ್ರಮದ ಮೂಲಕ ಕಲಾವಿದರು ವೇದಿಕೆ ಹಂಚಿಕೊಳ್ಳುತ್ತಾರೆ. ವರ್ಷವಿಡೀ ಇಲ್ಲಿ ಕಲೆಗೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ.

ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ರಾಮನಗರ ತಾಲ್ಲೂಕಿನ ಅರ್ಚಕರಹಳ್ಳಿ ಬಳಿ ಈ ಲೋಕವಿದೆ. ರಾಮನಗರದಿಂದ 5 ಹಾಗೂ ಬೆಂಗಳೂರಿನಿಂದ 55 ಕಿ.ಮೀ. ದೂರವಾಗುತ್ತದೆ. ಸುತ್ತಲೂ ಹೋಟೆಲ್ ಮೊದಲಾದ ಸೌಕರ್ಯಗಳಿವೆ.

ರೇವಣಸಿದ್ಧೇಶ್ವರ ಬೆಟ್ಟ:

ರೇವಣ ಸಿದ್ದೇಶ್ವರರ ನೆಲೆವೀಡಾದ ಈ ಬೆಟ್ಟ ಈ ಭಾಗದ ಪ್ರಮುಖ ಧಾರ್ಮಿಕ, ಐತಿಹಾಸಿಕ ಕ್ಷೇತ್ರಗಳಲ್ಲಿ ಒಂದು. ಏಕಶಿಲಾ ಬೆಟ್ಟದ ಮೇಲ್ಬಾಗದಲ್ಲಿ ರೇವಣ ಸಿದ್ದೇಶ್ವರರ ದೇಗುಲವಿದೆ.

ಕಡಿದಾದ ಮೆಟ್ಟಿಲುಗಳ ಮೂಲಕವೇ ಬೆಟ್ಟ ಏರಬೇಕು. ವ್ಯಾಸ ಪೂರ್ಣಿಮೆಯ ಹಿಂದಿನ ದಿನ ಇಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ.

ದೇವಸ್ಥಾನವು ಮುಜರಾಯಿ ಇಲಾಖೆಗೆ ಒಳಪಟ್ಟಿದೆ. ಅಲ್ಲೇ ಮಠವೂ ಇದೆ. ರಾಮನಗರದಿಂದ ಕನಕಪುರಕ್ಕೆ ಹೋಗುವ ಮಾರ್ಗದಲ್ಲಿ ಸುಮಾರು 15ಕಿ.ಮೀ. ದೂರದಲ್ಲಿ ಈ ಬೆಟ್ಟ ಸಿಗುತ್ತದೆ. ಬಸ್‌, ಖಾಸಗಿ ವಾಹನಗಳ ಸೇವೆ ಲಭ್ಯವಿದೆ.

ಕೂನಗಲ್‌ ಬೆಟ್ಟ:

ಈ ಬೆಟ್ಟ ಚಾರಣ ಪ್ರಿಯರ ಪ್ರಮುಖ ತಾಣಗಳಲ್ಲಿ ಒಂದು. ಹಿಂದು–ಮುಸ್ಲಿಂ ಭಾವೈಕ್ಯ ಸಂಕೇತವಾಗಿಯೂ ಇದು ಹೆಸರುವಾಸಿ. ಇದನ್ನು ಬಾಬಯ್ಯನ ಬೆಟ್ಟ ಎಂತಲೂ ಕರೆಯುತ್ತಾರೆ.

ಬಾಗಿದ ಆಕಾರದಲ್ಲಿ ಇರುವ ಬೃಹತ್‌ ಬಂಡೆ ಗಮನ ಸೆಳೆಯುತ್ತದೆ. ಅಪರೂಪದ ಔಷಧ ಸಸ್ಯಗಳು ಇಲ್ಲಿನ ಕಾಡಿನಲ್ಲಿವೆ. ಪ್ರತಿವರ್ಷ ರಥಸಪ್ತಮಿಯಂದು ಇಲ್ಲಿ ಜಾತ್ರೆ ನಡೆಯುತ್ತದೆ. ಬೆಟ್ಟ ರಾಮನಗರದಿಂದ ಆರು ಕಿ.ಮೀ. ದೂರದಲ್ಲಿದೆ. ಕನಕಪುರ ರಸ್ತೆ ಮಾರ್ಗವಾಗಿ ಸಾಗಬಹುದು.

ಕೂಟಗಲ್‌ ಬೆಟ್ಟ ರಾಮನಗರ ತಾಲ್ಲೂಕಿನ ಕೂಟಗಲ್‌ ಬಳಿ ಇರುವ ಈ ಬೆಟ್ಟವು ಧಾರ್ಮಿಕವಾಗಿ ಹಾಗೂ ಚಾರಣಕ್ಕೂ ಹೆಸರುವಾಸಿ. ಕಣ್ವ ಋಷಿಗಳು ಇಲ್ಲಿ ತಿಮ್ಮಪ್ಪನನ್ನು ಪೂಜಿಸುತ್ತಿದ್ದರು ಎಂಬ ಪ್ರತೀತಿ ಇದೆ.

ಸುತ್ತಲಿನ ಹಸಿರು ಸಿರಿ, ಬೆಟ್ಟದ ಮೇಲಿನ ವಿಹಂಗಮ ನೋಟ ಪ್ರಕೃತಿ ಪ್ರಿಯರ ಮನಸೂರೆಗೊಳ್ಳುತ್ತದೆ. ತಿಮ್ಮಪ್ಪನ ದೇಗುಲ ಇಲ್ಲಿದ್ದು, ನಾಡಿನ ವಿವಿಧ ಭಾಗಗಳಿಂದ ಭಕ್ತರು ಬರುತ್ತಾರೆ. ಇದು ರಾಮನಗರದಿಂದ 10 ಕಿ.ಮೀ. ದೂರದಲ್ಲಿದೆ.

 **

ವಿಶ್ವ ಪ್ರವಾಸೋದ್ಯಮ ದಿನ

ಇಂದು (ಸೆ. 27) ವಿಶ್ವ ಪ್ರವಾಸೋದ್ಯಮ ದಿನ. ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆಯು 1979ರ ಸೆಪ್ಟೆಂಬರ್‌ನಲ್ಲಿ ಸ್ಪೇನ್‌ನಲ್ಲಿ ನಡೆದ ತನ್ನ ಮೂರನೇ ಅಧಿವೇಶನದಲ್ಲಿ ವಿಶ್ವ ಪ್ರವಾಸೋದ್ಯಮ ದಿನ ಆಚರಿಸಲು ನಿರ್ಧರಿಸಿತು.

ಅದರಂತೆ 1980ರಿಂದ ಈ ದಿನವನ್ನು ಪ್ರತಿ ವರ್ಷ ಆಚರಿಸಲಾಗುತ್ತಿದೆ. ಇದೇ ಸಂಸ್ಥೆ 1997ರಲ್ಲಿ ಪ್ರತಿ ವರ್ಷವೂ ಒಂದೊಂದು ರಾಷ್ಟ್ರವನ್ನು ಆಯ್ಕೆ ಮಾಡಿಕೊಂಡು ಅಧಿಕೃತವಾಗಿ ಪ್ರವಾಸೋದ್ಯಮ ದಿನ ಆಚರಿಸುವ ನಿರ್ಧಾರ ಕೈಗೊಂಡಿತು. ಪ್ರವಾಸೋದ್ಯಮದ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಮೌಲ್ಯದ ಕುರಿತು ಜಾಗತಿಕ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು ಈ ದಿನಾಚರಣೆಯ ಉದ್ದೇಶ. ‘ಪ್ರವಾಸೋದ್ಯಮ ಮತ್ತು ಉದ್ಯೋಗ; ಎಲ್ಲರಿಗೂ ಉತ್ತಮ ಭವಿಷ್ಯ’ ಎಂಬುದು ಈ ವರ್ಷದ ಪ್ರವಾಸೋದ್ಯಮ ದಿನಾಚರಣೆಯ ಘೋಷವಾಕ್ಯ.

ಇನೋವೇಟಿವ್‌ ಫಿಲ್ಮ್‌ಸಿಟಿ

ಬಿಡದಿ‌ ಕೈಗಾರಿಕಾ ಪ್ರದೇಶದಲ್ಲಿ ಇರುವ ಇನೋವೇಟಿವ್‌ ಫಿಲ್ಮ್‌ ಸಿಟಿ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಚಿತ್ರೋದ್ಯಮ ಚಟುವಟಿಕೆಗಳಿಗೆ ಹೆಸರಾದ ತಾಣವಿದು.

ಸಾರ್ವಜನಿಕರಿಗೂ ಫಿಲ್ಮ್ ಸಿಟಿ ವೀಕ್ಷಣೆಗೆ ಅವಕಾಶ ಇದೆ. ಒಳಗೆ ಹಲವು ರಂಜನೆ ತಾಣಗಳು, ಆಟಗಳೂ ಇವೆ. ವರ್ಷವಿಡೀ ಪ್ರವಾಸಿಗರು ಭೇಟಿ ನೀಡುತ್ತಾರೆ. ಇದು ಬೆಂಗಳೂರಿನಿಂದ 35 ಹಾಗೂ ರಾಮನಗರದಿಂದ 15 ಕಿ.ಮೀ. ದೂರದಲ್ಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.